ADVERTISEMENT

ಚಿತ್ರದುರ್ಗ: ಗುಂಪುಗಾರಿಕೆಯ ಗೂಡಾದ ಮಹಿಳಾ ಸೇವಾ ಸಮಾಜ

98 ವರ್ಷಗಳ ಇತಿಹಾಸವಿರುವ ಸಂಘಟನೆಯಲ್ಲಿ ಅವ್ಯವಹಾರದ ಆರೋಪ, ಪ್ರತ್ಯಾರೋಪ

ಎಂ.ಎನ್.ಯೋಗೇಶ್‌
Published 17 ಡಿಸೆಂಬರ್ 2025, 6:28 IST
Last Updated 17 ಡಿಸೆಂಬರ್ 2025, 6:28 IST
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಮಹಿಳಾ ಸೇವಾ ಸಮಾಜದ ನೋಟ
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಮೀಪವಿರುವ ಮಹಿಳಾ ಸೇವಾ ಸಮಾಜದ ನೋಟ   

ಚಿತ್ರದುರ್ಗ: ಶತಮಾನದ ಅಂಚಿನಲ್ಲಿರುವ ಐತಿಹಾಸಿಕ ‘ಮಹಿಳಾ ಸೇವಾ ಸಮಾಜ’ ಈಗ ಗುಂಪುಗಾರಿಕೆಯಿಂದಾಗಿ ಗೊಂದಲದ ಗೂಡಾಗಿದೆ. ಮಹಿಳೆಯರ ಸರ್ವತೋಮುಖ ಪ್ರಗತಿಯ ವೇದಿಕೆಯಾಗಬೇಕಿದ್ದ ಸೇವಾ ಸಮಾಜ ಇಂದು ರಾಜಕೀಯದ ವೇದಿಕೆಯಾಗಿದೆ. 

₹ 150 ಕೋಟಿ ಆಸ್ತಿ ಹೊಂದಿರುವ ಮಹಿಳಾ ಸೇವಾ ಸಮಾಜ ವೈವಿಧ್ಯಮಯ ಚಟುವಟಿಕೆಗಳಿಂದ ರಾಜ್ಯದ ಗಮನ ಸೆಳೆದಿತ್ತು. 98 ವರ್ಷಗಳ ಹಿಂದೆ ಮೈಸೂರು ಅರಸರ ಆಸ್ತಿ ದಾನದಿಂದ ಆರಂಭವಾದ ಸಂಘಟನೆಯು ಅಬಲಾಶ್ರಮ, ಶಿಶುವಿಹಾರ ನಡೆಸುವ ಮೂಲಕ ಮಹಿಳೆಯರ ಭಾವನೆಗಳಿಗೆ ಧ್ವನಿಯಾಗಿತ್ತು. ಆದರೆ ಈಚೆಗೆ ಮಹಿಳೆಯರಲ್ಲೇ ಹಲವು ಗುಂಪುಗಳಾಗಿದ್ದು ಸಮಾಜದ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. 

ಆಡಳಿತದಲ್ಲಿ ರಾಜಕೀಯವೂ ಇಣುಕಿರುವ ಕಾರಣ ಮಹಿಳಾ ಸಮಾಜದಲ್ಲಿ ಅಧಿಕಾರದ ಕಿತ್ತಾಟವೂ ಆರಂಭವಾಗಿದೆ. ಸಮಾಜ ವಿವಿಧ ಗುಂಪುಗಳಾಗಿ ಒಡೆದು ಹೋಗಿದ್ದು, ಹಲವರು ಸಂಘಟನೆಯ ಆಸ್ತಿ ಮೇಲೆ ಕಣ್ಣಿಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. 

ADVERTISEMENT

ಮಹಿಳಾ ಸೇವಾ ಸಮಾಜಕ್ಕೆ ಜಿಲ್ಲಾಧಿಕಾರಿಗಳ ಪತ್ನಿ ಅಧ್ಯಕ್ಷೆಯಾಗಿರುತ್ತಾರೆ. ಉಪಾಧ್ಯಕ್ಷೆ, ಕಾರ್ಯದರ್ಶಿ, ಖಜಾಂಚಿ, ನಿರ್ದೇಶಕರು ಸೇರಿ 12 ಮಂದಿಯ ಆಡಳಿತ ಮಂಡಳಿಯು ಚುನಾವಣೆಯ ಮೂಲಕ ರಚನೆಯಾಗುತ್ತದೆ. 2019ರಲ್ಲಿ ಮೋಕ್ಷಾ ರುದ್ರಸ್ವಾಮಿ ಅವರು ಚುನಾವಣೆ ಮೂಲಕ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. 2021ರಲ್ಲಿ ಸಾಮಾನ್ಯ ಸಭೆ ನಡೆಸಿ ಸದಸ್ಯರ ಕೈ ಎತ್ತಿಸುವ ಮೂಲಕ 2ನೇ ಅವಧಿಗೆ ಮೋಕ್ಷಾ ಅವರೇ ಉಪಾಧ್ಯಕ್ಷೆಯಾಗಿಯೇ ಮುಂದುವರಿದಿದ್ದರು. 

ಮೋಕ್ಷಾ ಅವರ ಅವಧಿ 2024ರ ಡಿಸೆಂಬರ್‌ಗೆ ಕೊನೆಗೊಂಡಿದೆ. ಸಂಘಟನೆಯ ಒಂದು ತಂಡ ಚುನಾವಣೆ ನಡೆಯಬೇಕು, ಆ ಮೂಲಕ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು ಎಂದು ಒತ್ತಾಯಿಸುತ್ತಿದೆ. ಆದರೆ, ಮೋಕ್ಷಾ ಅವರ ತಂಡ ಹಿಂದಿನಂತೆಯೇ ಸಾಮಾನ್ಯ ಸಭೆ ನಡೆಸಿ, ಸದಸ್ಯರ ಕೈ ಎತ್ತಿಸುವ ಮೂಲಕ ಹೊಸ ಆಡಳಿತ ಮಂಡಳಿ ರಚನೆ ಮಾಡಲು ಮುಂದಾಗಿರುವುದು ಗೊಂದಲಗಳಿಗೆ ಕಾರಣವಾಗಿದೆ. 

‘98 ವರ್ಷ ಇತಿಹಾಸವಿರುವ ಸಮಾಜದಲ್ಲಿ ಪ್ರಜಾಪ್ರಭುತ್ವ ಜಾರಿಯಾಗಬೇಕು. ಚುನಾವಣೆ ಮೂಲಕ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಬೇಕು. ಹಿಂದಿನ ಬಾಗಿಲ ಮೂಲಕ ಅಧಿಕಾರ ಹಿಡಿಯುವ ಪ್ರಕ್ರಿಯೆ ಬೇಡ. ಕಳೆದ 7 ವರ್ಷಗಳಿಂದ ಸಮಾಜದಲ್ಲಿ ಅವ್ಯವಹಾರ ನಡೆದಿದ್ದು ಅವುಗಳ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಸಮಾಜದ ಒಂದು ತಂಡ ಒತ್ತಾಯಿಸುತ್ತಿದೆ. 

‘ಸಹಕಾರ ಸಂಘಗಳ ಕಾಯ್ದೆಯ ಅನುಸಾರ ಮಹಿಳಾ ಸಮಾಜದ ನೂತನ ಆಡಳಿತ ಮಂಡಳಿಯನ್ನು ಈಗಾಗಲೇ ರಚನೆ ಮಾಡಲಾಗಿದೆ. ಸಂಘಟನೆಯಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ’ ಎಂದು ಇನ್ನೊಂದು ತಂಡ ಹೇಳುತ್ತಿದೆ. 

ಚುನಾವಣೆ ಬಯಸುತ್ತಿರುವ ಗುಂಪಿನ ಸದಸ್ಯೆಯರು ಹಳೆಯ ಆಡಳಿತ ಮಂಡಳಿ ವಿರುದ್ಧ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಅವ್ಯವಹಾರಗಳ ತನಿಖೆಗೆ ಒತ್ತಾಯಿಸಿದ್ದಾರೆ. ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ದೂರುಗಳ ಆಧಾರದ ಮೇಲೆ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯು ಸಂಘಟನೆಯ ಎಲ್ಲಾ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.  

ಚುನಾವಣೆ ನಿಂತಿದ್ದೇಕೆ?

ಸಂಘಟನೆ ಕುರಿತ ಗೊಂದಲಗಳ ದೂರು ಜಿಲ್ಲಾ ಉಸ್ತುವಾರಿ ಸಚಿವ, ಸಹಕಾರ ಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗೂ ಹೋಗಿದೆ. ಇದರ ನಡುವೆ ಜಿಲ್ಲಾಧಿಕಾರಿಗಳು ಸಂಘಟನೆಗೆ ಚುನಾವಣೆ ನಡೆಸುವಂತೆ ಆದೇಶಿಸಿ ಚುನಾವಣಾಧಿಕಾರಿಯನ್ನೂ ನೇಮಿಸಿದ್ದರು. ಆದರೆ ಇಡೀ ಪ್ರಕ್ರಿಯೆ ಏಕಾಏಕಿ ಸ್ಥಗಿತಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ. 

ಚುನಾವಣೆ ಬಯಸದ ತಂಡ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಒತ್ತಡ ತಂದು ಚುನಾವಣೆ ನಡೆಯದಂತೆ ನೋಡಿಕೊಂಡಿದೆ. ಜೊತೆಗೆ ಆಡಳಿತಾಧಿಕಾರಿ ನೇಮಕದ ಆದೇಶವನ್ನೂ ತಡೆ ಹಿಡಿಸಿದೆ ಎಂದು ಇನ್ನೊಂದು ತಂಡ ಆರೋಪಿಸಿದೆ. 

‘ಮಳಿಗೆಗಳ ಬಾಡಿಗೆ ಹಣ ಖಾತೆಗೆ ಜಮಾ ಆಗುತ್ತಿದೆ. ಆದರೆ ಖಾತೆ ಸ್ಥಗಿತಗೊಂಡಿರುವ ಕಾರಣ ಕಚೇರಿಯ ಸಿಬ್ಬಂದಿಗೆ ಒಂದೂವರೆ ವರ್ಷದಿಂದ ವೇತನ ನೀಡಿಲ್ಲ. ಮಹಿಳಾ ಪರ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಿ ರಾಜ್ಯಕ್ಕೆ ಮಾದರಿಯಾಗಿದ್ದ ಮಹಿಳಾ ಸೇವಾ ಸಮಾಜ ಉಳಿಸಬೇಕು’ ಎಂದು ಸದಸ್ಯೆಯೊಬ್ಬರು ಒತ್ತಾಯಿಸಿದರು.

ನಿಯಮಾನುಸಾರ ಮಹಿಳಾ ಸೇವಾ ಸಮಾಜಕ್ಕೆ ಚುನಾವಣೆ ನಡೆಸಿ ಆಡಳಿತ ಮಂಡಳಿ ರಚಿಸಲಾಗಿದೆ. ಆಸ್ತಿ ಮೇಲೆ ಕಣ್ಣಿಟ್ಟವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಲ್ಲದಕ್ಕೂ ನಮ್ಮ ಬಳಿ ಉತ್ತರವಿದೆ.
– ಮೋಕ್ಷಾ ರುದ್ರಸ್ವಾಮಿ, ಮಾಜಿ ಉಪಾಧ್ಯಕ್ಷೆ
ಮಹಿಳಾ ಸಮಾಜದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು. ರಾಜಕೀಯ ಪ್ರಭಾವ ಬಳಸಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವವರನ್ನು ಸಂಘಟನೆಯಿಂದ ಹೊರ ಹಾಕಬೇಕು.
– ರೂಪಾ ಶಶಿಧರ್‌, ಮಾಜಿ ನಿರ್ದೇಶಕಿ
ನಿಯಮಾನುಸಾರ ಚುನಾವಣೆ ನಡೆಸದ ಕಾರಣ ಆಡಳಿತಾಧಿಕಾರಿ ನೇಮಕಕ್ಕೆ 2 ಬಾರಿ ಸರ್ಕಾರವನ್ನು ಕೋರಲಾಗಿದೆ. ಇಲಾಖೆ ನೀಡುವ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು
– ಆರ್‌.ಎಸ್‌.ದಿಲೀಪ್‌, ಸಹಕಾರ ಸಂಘಗಳ ಉಪ ನಿಬಂಧಕರು

ಕಚೇರಿ ಸಭಾಂಗಣಕ್ಕೆ ಬೀಗ

2024 ಜ.26ರ ನಂತರ ಮಹಿಳಾ ಸೇವಾ ಸಮಾಜದ ಮುಖ್ಯ ಕಚೇರಿ ಹಾಗೂ ಸಭಾಂಗಣದ ಬಾಗಿಲು ಬಂದ್‌ ಮಾಡಲಾಗಿದೆ. ಯಾರ ಬಳಿ ಇವುಗಳ ಬೀಗದ ಕೀ ಇವೆ ಎಂಬುದೇ ತಿಳಿಯದಾಗಿದೆ. ಸಂಘಟನೆ ಕುರಿತಂತೆ ಯಾವುದೇ ವಿಚಾರ ಚರ್ಚಿಸಲೂ ಜಾಗವಿಲ್ಲ. ನೂರಾರು ಕೋಟಿ ಆಸ್ತಿಯಿರುವ ಸಂಘಟನೆಯ ಕಚೇರಿ ಬಂದ್‌ ಆಗಿರುವುದು ದುರದೃಷ್ಟಕರ ಎಂದು ಸದಸ್ಯೆಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.