ADVERTISEMENT

ಚಿತ್ರದುರ್ಗ | ಅಧಿಕಾರ ಉಳಿಸಿಕೊಳ್ಳಲು ‘ಕೈ’ ಪ್ರತಿತಂತ್ರ

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಇಂದು

ಜಿ.ಬಿ.ನಾಗರಾಜ್
Published 21 ಮೇ 2020, 19:45 IST
Last Updated 21 ಮೇ 2020, 19:45 IST
ಕಾಂಗ್ರೆಸ್‌
ಕಾಂಗ್ರೆಸ್‌   

ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟು ‘ಆಪರೇಷನ್‌ ಕಮಲ’ಕ್ಕೆ ಮುಂದಡಿ ಇಟ್ಟಿದ್ದ ಬಿಜೆಪಿ ನಡೆ ಇನ್ನೂ ನಿಗೂಢವಾಗಿದೆ.

ಕೊರೊನಾ ಸೋಂಕಿನ ಭೀತಿಯ ನಡುವೆಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಿರಿಯೂರು ತಾಲ್ಲೂಕಿನ ಶಶಿಕಲಾ ಸುರೇಶಬಾಬು ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಘೋಷಿಸಿದೆ. ಕಾಂಗ್ರೆಸ್‌ ಪಕ್ಷದ ಸದಸ್ಯರಿಗೆ ವಿಪ್‌ ಜಾರಿಗೊಳಿಸಲಾಗಿದೆ.

ಆಪರೇಷನ್‌ ಕಮಲ ಕೈಗೂಡದಿದ್ದರೆ ಚುನಾವಣೆಯನ್ನೇ ಮುಂದೂಡಿಸುವ ತಂತ್ರವನ್ನು ಬಿಜೆಪಿ ಹೆಣೆದಿದೆ. ಲಾಕ್‌ಡೌನ್‌ ಹಾಗೂ ಕೊರೊನಾ ಸೋಂಕಿನ ಕಾರಣವನ್ನು ಮುಂದಿಟ್ಟುಕೊಂಡು ಒತ್ತಡ ಹೇರುತ್ತಿದೆ. ಬಿಜೆಪಿಯ ಪ್ರಮುಖ ನಾಯಕರು ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಮನವೊಲಿಸಲು ನಡೆಸಿದ ಪ್ರಯತ್ನ ಗುಟ್ಟಾಗಿ ಉಳಿದಿಲ್ಲ.

ADVERTISEMENT

ಅಧಿಕಾರ ಹಂಚಿಕೆ ಸೂತ್ರ:2016ರಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪಂಚಾಯಿತಿ ಅವಧಿ 2021ರ ಮೇ 3ಕ್ಕೆ ಕೊನೆಯಾಗಲಿದೆ. 37 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಬಹುಮತ ಹೊಂದಿದೆ. ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸರದಿಯಂತೆ ನಾಲ್ವರು ಮಹಿಳೆಯರನ್ನು ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್‌ ತೀರ್ಮಾನಿಸಿತ್ತು. 60 ತಿಂಗಳ ಅಧಿಕಾರವಧಿಯಲ್ಲಿ ಪ್ರತಿಯೊಬ್ಬರಿಗೂ 15 ತಿಂಗಳು ನಿಗದಿಪಡಿಸಲಾಗಿತ್ತು.

ಒಪ್ಪಂದದಂತೆ ಅಧ್ಯಕ್ಷ ಗಾದಿ ಏರಿದ ಸೌಭಾಗ್ಯ ಬಸವರಾಜನ್‌, ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರು. 2019ರ ಫೆ. 7ರಂದು ಇವರನ್ನು ಪದಚ್ಯುತಗೊಳಿಸಲಾಯಿತು. ಬಳಿಕ ಅಧ್ಯಕ್ಷ ಸ್ಥಾನಕ್ಕೆ ಏರಿದ ಜಿ.ಎಂ. ವಿಶಾಲಾಕ್ಷಿ ಅವರು ಮಾರ್ಚ್ ತಿಂಗಳಲ್ಲಿ ರಾಜೀನಾಮೆ ನೀಡಿದ್ದರು. ಹೀಗಾಗಿ, ಮೇ 22ರಂದು ಚುನಾವಣೆ ನಿಗದಿಯಾಗಿದೆ.

ಆಪರೇಷನ್ ಕಮಲ ಪ್ರಯತ್ನ:ಕೊನೆಯ 11 ತಿಂಗಳ ಅಧಿಕಾರವನ್ನು ಅನುಭವಿಸಲು ಬಿಜೆಪಿ ಪ್ರಯತ್ನಿಸಿದೆ. ಕಾಂಗ್ರೆಸ್‌ ಉಚ್ಛಾಟಿತ ಸದಸ್ಯೆ ಹಾಗೂ ಚಳ್ಳಕೆರೆ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರು ಈಗಾಗಲೇ ಪಕ್ಷದಿಂದ ದೂರವಾಗಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿರುವ ಅಸಮಾಧಾನದ ಪ್ರಯೋಜನ ಪಡೆದು ಅಧಿಕಾರಕ್ಕೆ ಏರಲು ಬಿಜೆಪಿ ತಂತ್ರ ರೂಪಿಸಿತ್ತು. ಜೆಡಿಎಸ್‌ ಹಾಗೂ ಪಕ್ಷೇತರ ಅಭ್ಯರ್ಥಿಗಳ ನೆರವು ಪಡೆಯಲು ಮುಂದಾಗಿತ್ತು. ಈ ಪ್ರಯತ್ನಕ್ಕೆ ನಿರೀಕ್ಷಿತ ಯಶಸ್ಸು ಸಿಕ್ಕಂತೆ ಕಾಣುತ್ತಿಲ್ಲ.

ಈ ತಂತ್ರಕ್ಕೆ ಬಿಜೆಪಿ ಪಾಳಯದಲ್ಲೂ ಪ್ರೋತ್ಸಾಹ ಸಿಕ್ಕಂತೆ ಕಾಣಲಿಲ್ಲ. ಅಧ್ಯಕ್ಷ ಗಾದಿಯ ಮೇಲಿನ ‘ಹೂಡಿಕೆ’ಗೆ ಆಸಕ್ತಿ ತೋರಿದ ಸದಸ್ಯರ ಸಂಖ್ಯೆ ವಿರಳ. ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ಮಾಡಿದ ಮುಖಂಡರೊಬ್ಬರು ಮಾತ್ರ ಇದಕ್ಕೆ ಹೆಚ್ಚು ಆಸಕ್ತಿ ತೋರಿಸಿದ್ದರು. ಇದಕ್ಕೆ ಪಕ್ಷದೊಳಗೆ ನಿರೀಕ್ಷಿತ ಬೆಂಬಲವೂ ಸಿಗಲಿಲ್ಲ ಎಂಬುದು ಮೂಲಗಳ ಮಾಹಿತಿ.

ಸದಸ್ಯರನ್ನು ಹಿಡಿದಿಟ್ಟ ಕಾಂಗ್ರೆಸ್‌:ಬಿಜೆಪಿ ತಂತ್ರಗಾರಿಕೆ ಅರಿತ ಕಾಂಗ್ರೆಸ್‌, ಸದಸ್ಯರನ್ನು ಹಿಡಿದಿಡಲು ಮುಂದಾಯಿತು. ಮಾಜಿ ಸಚಿವ ಎಚ್‌.ಎಂ.ರೇವಣ್ಣ ಅವರನ್ನು ಚುನಾವಣಾ ವೀಕ್ಷಕರನ್ನಾಗಿ ನೇಮಿಸಿ ಅಧಿಕಾರ ಉಳಿಸಿಕೊಳ್ಳುವ ಹೊಣೆ ನೀಡಿತು. ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಹಾಗೂ ಶಾಸಕ ಟಿ.ರಘುಮೂರ್ತಿ ಅವರೊಂದಿಗೆ ಚರ್ಚೆ ನಡೆಸಿದ ರೇವಣ್ಣ, ಪಕ್ಷದ ಸದಸ್ಯರ ಮನವೊಲಿಸಿದರು.

ರೇವಣ್ಣ ಅವರು ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ಗುರುವಾರಅಜ್ಞಾತ ಸ್ಥಳದಲ್ಲಿ ಸಭೆ ನಡೆಸಿದರು. ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ19 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇಬ್ಬರು ಪಕ್ಷೇತರರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರು ಕಾಂಗ್ರೆಸ್‌ ಪಾಳೆಯದಲ್ಲಿದ್ದಾರೆ. ಎಲ್ಲರೂ ಒಟ್ಟಾಗಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಜಿಲ್ಲಾ ಪಂಚಾಯಿತಿಗೆ ಬರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.