ADVERTISEMENT

ಕಣಿವೆ ಹಾದಿಯಲ್ಲಿ ‘ಸಾಗರ’ದ ಹುಡುಕಾಟ...

ಎಂ.ಎನ್.ಯೋಗೇಶ್‌
Published 13 ಏಪ್ರಿಲ್ 2025, 6:53 IST
Last Updated 13 ಏಪ್ರಿಲ್ 2025, 6:53 IST
ಲಡಾಖ್‌ನ ನುಬ್ರಾ ಕಣಿವೆ ಪ್ರದೇಶದ ಪ್ಯಾಂಗಾಂಗ್‌ ಸರೋಪದ ಸಮೀಪದಲ್ಲಿ ಕೆ.ವಿ.ಸಾಗರ್ (ಸಂಗ್ರಹ ಚಿತ್ರ)
ಲಡಾಖ್‌ನ ನುಬ್ರಾ ಕಣಿವೆ ಪ್ರದೇಶದ ಪ್ಯಾಂಗಾಂಗ್‌ ಸರೋಪದ ಸಮೀಪದಲ್ಲಿ ಕೆ.ವಿ.ಸಾಗರ್ (ಸಂಗ್ರಹ ಚಿತ್ರ)   

ಚಿತ್ರುದುರ್ಗ: ಬೈಕ್‌ ಜೊತೆ ಗೆಳೆತನ ಬೆಳೆಸಿಕೊಂಡಿರುವ ದುರ್ಗದ ಹುಡುಗ ಕೆ.ವಿ.ಸಾಗರ್‌ ದಶಕದಿಂದೀಚೆಗೆ ದೇಶದ ಪ್ರಮುಖ ಕಣಿವೆ ಪ್ರದೇಶ, ಗಿರಿಧಾಮ, ಅತೀ ಎತ್ತರದ ಜಾಗ, ದೇಶದ ಗಡಿಯ ಜಾಡುಗಳಲ್ಲಿ ಸವಾರಿ ಮಾಡಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತಿರುವ ಅವರು ಹೊಸ ಜಾಗಗಳ ಹುಡುಕಾಟ ನಡೆಸಿದ್ದಾರೆ, ಹೊಸ ಜನರ ಸ್ನೇಹ ಸಂಪಾದಿಸಿದ್ದಾರೆ, ಹೊಸ ರುಚಿಯ ಅನುಭವ ಪಡೆದಿದ್ದಾರೆ.

ಕೆ.ಆರ್‌. ವಿಜಯ್‌ಕುಮಾರ್‌– ಜಿ.ಎಸ್‌.ಗಿರಿಜಾ ದಂಪತಿಯ ಪುತ್ರನಾಗಿರುವ ಸಾಗರ್‌ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲಸದ ನಡುವೆ ಸಿಗುವ ಬಿಡುವಿನ ಅವಧಿಯಲ್ಲಿ ತಮ್ಮ ಪ್ರೀತಿಯ ‘ರಾಯಲ್‌ ಎನ್‌ಫೀಲ್ಡ್‌ ಎಲೆಕ್ಟ್ರಾ’ ಬೈಕ್‌ ಏರಿ ಪರ್ಯಟನೆಗೆ ಹೊರಟುಬಿಡುತ್ತಾರೆ. 4ನೇ ತರಗತಿ ಹುಡುಗನಾಗಿದ್ದಾಗಲೇ ಅಪ್ಪನ ಬೈಕ್‌ನಲ್ಲಿ ಮುಂದೆ ಕುಳಿತು ಬೈಕ್‌ ಸವಾರಿಯ ಅನುಭವ ಪಡೆಯುತ್ತಿದ್ದ ಅವರು ಈಗ ಸ್ವತಂತ್ರ ಯುವ ಬೈಕರ್‌ ಆಗಿ ಅ‍ಪರೂಪದ ‍ಪ್ರದೇಶಗಳಲ್ಲಿ  ಸವಾರಿ ಮಾಡಿದ್ದಾರೆ.

2015ರಿಂದ ಇಲ್ಲಿಯವರೆಗೆ 40,000 ಕಿ.ಮೀ.ಗೂ ಹೆಚ್ಚು ದೂರ ಬೈಕ್‌ ಸವಾರಿ ಮಾಡಿರುವ ಅವರು ತಮ್ಮೊಂದಿಗೆ ಅನುಭವಗಳ ಮೂಟೆಯನ್ನೇ ಕಟ್ಟಿಕೊಂಡಿದ್ದಾರೆ. ಮೊದಲ ಬಾರಿಗೆ ಜಮ್ಮು– ಕಾಶ್ಮೀರದ ಮಂಜುಗಡ್ಡೆ ಪ್ರದೇಶ, ಕಣಿವೆ ಪ್ರದೇಶದಲ್ಲಿ ಬೈಕ್‌ ಓಡಿಸಿ ತಮ್ಮ ವಿಶ್ವಾಸವನ್ನು ಹೆಚ್ಚಿಕೊಂಡರು. ದೆಹಲಿಯಲ್ಲಿ ಬಾಡಿಗೆಗೆ ಬುಲೆಟ್‌ ಪಡೆದು ತಮ್ಮ ಮೊದಲ ಪಯಣ ಆರಂಭಿಸಿದರು. ಸಮುದ್ರ ಮಟ್ಟದಿಂದ 17,000 ಅಡಿ ಎತ್ತರವಿರುವ, ದೇಶದ ಅತೀ ಎತ್ತರದ ರಸ್ತೆ ಎನಿಸಕೊಂಡಿರುವ ಖರದುಂಗ್ಲ ಪ್ರದೇಶದಲ್ಲಿ ಹೆಜ್ಜೆ ಗುರುತು ಮೂಡಿಸಿದರು. ಕಾರ್ಗಿಲ್‌, ಲೇಹ್‌, ಲಡಾಖ್‌ ಕಣಿವೆ ಪ್ರದೇಶದಲ್ಲಿ ಬೈಕ್‌ ಓಡಿಸಿ ಧೈರ್ಯ ಪ್ರದರ್ಶನ ಮಾಡಿದ್ದಾರೆ.

ADVERTISEMENT

2017ರಲ್ಲಿ ಗುಜರಾತ್‌ನ ಪ್ರಮುಖ ಪ್ರಮುಖ ಪ್ರವಾಸಿ ತಾಣಗಳಲ್ಲಿ ಅವರು ಸವಾರಿ ಮಾಡಿದರು. ಆ ವೇಳೆ ಗುಜರಾತ್‌ನಾದ್ಯಂತ ಓಖಿ ಚಂಡಮಾರುತದ ತೀವ್ರ ಪರಿಣಾಮವಿತ್ತು. ಅದರ ನಡುವೆಯೂ ಸಾಗರ್‌ 2,100 ಕಿ.ಮೀ ಸವಾರಿ ಪೂರೈಸಿದರು. ನಂತರ ತಮ್ಮಿಷ್ಟದ ಬುಲೆಟ್‌ ಖರೀದಿಸಿದ ಅವರು 2018ರಲ್ಲಿ ಬೆಂಗಳೂರಿನಿಂದ ಉತ್ತರಾಖಂಡದತ್ತ ಹೊರಟರು. ಚಳಿಯನ್ನೇ ಹೊದ್ದು ಮಲಗಿರುವ ರಾಜ್ಯದ ಸುಂದರ ನದಿ ತೀರ ಪ್ರದೇಶದಲ್ಲಿ ಪಯಣ ನಡೆಸಿದರು. ವಿಶ್ವದ ಅತೀ ಎತ್ತರದ ಶಿವ ದೇವಾಲಯ ಎಂದು ಪ್ರಸಿದ್ಧಿ ಪಡೆದಿರುವ ತುಂಗನಾಥ್‌ ಗುಡಿಗೆ ಭೇಟಿ ಕೊಟ್ಟರು. ಮೈನಸ್‌ 30 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶದ ನಡುವೆಯೂ ಬೈಕ್‌ ಓಡಿಸಿ ತಮ್ಮ ಶಕ್ತಿಯ ಅನಾವರಣ ಮಾಡಿದರು.

2021ರಲ್ಲಿ ಹಿಮಾಚಲ ಪ್ರದೇಶದತ್ತ ಹೊರಟ ಅವರು ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿರುವ ‘ಸ್ಪಿತಿ ಕಣಿವೆ’ ಪ್ರದೇಶದಲ್ಲಿ ಬೈಕ್‌ ಓಡಿಸಿದರು. ಈ ಕಣಿವೆ ಪ್ರದೇಶ ‘ಬೈಕರ್‌ಗಳ ಮೆಕ್ಕಾ’ ಎಂದೇ ಪ್ರಸಿದ್ಧಿ ಪಡೆದಿದೆ. ಅಲ್ಲಿಗೆ ಹೋಗಿಯೇ ತೀರಬೇಕು ಎಂಬ ತಮ್ಮ ಗುರಿ ಮುಟ್ಟುವಲ್ಲಿ ಸಾಗರ್‌ ಯಶಸ್ವಿಯಾದರು.

2024ರಲ್ಲಿ ಲಡಾಖನ್‌ ಝನ್ಸ್‌ಕರ್‌ ಕಣಿವೆ ಪ್ರದೇಶದಲ್ಲಿ ಬೈಕ್‌ ಓಡಿಸಿದ ಅವರು ಹಿಮಚ್ಛಾದಿತ ಪ್ರದೇಶದಲ್ಲಿ ಹೊಸ ಅನುಭವ ಪಡೆದರು. ಭಾರತ ದೇಶದ ಕಡೆಯ ಹಳ್ಳಿಯಾಗಿರುವ ‘ಚಿತ್ಕಲ್‌’ ಕಣಿವೆ ಪ್ರದೇಶದಲ್ಲಿ ಬೈಕ್‌ ಓಡಿಸುವ ಮೂಲಕ ತಮ್ಮ ಸಾಹಸಯಾತ್ರೆಯನ್ನು ಮತ್ತಷ್ಟು ವಿಸ್ತರಣೆ ಮಾಡಿಕೊಂಡರು. ಏಷ್ಯಾದ ಅತ್ಯಂತ ಎತ್ತರವಾದ ಚಿಚಾಮ್‌ ಸೇತುವೆ ಮೇಲೆ ತಮ್ಮ ಬೈಕ್‌ ಓಡಿಸಿ ತಮ್ಮ ಮನದ ಬಯಕೆಯನ್ನು ಈಡೇರಿಸಿಕೊಂಡರು.

ಇಷ್ಟೇ ಅಲ್ಲದೇ ಬೆಂಗಳೂರಿನಿಂದ ಕೇರಳದ ಪ್ರಮುಖ ಪ್ರವಾಸಿ ತಾಣಗಳು, ಗಿರಿಧಾಮಗಳು, ತಮಿಳುನಾಡಿನ ಕನ್ಯಾಕುಮಾರಿ ಸೇರಿದಂತೆ ಪ್ರಮುಖ ತಾಣಗಳು, ಗೋವಾದ ಕಡಲ ಕಿನಾರೆ ದಾರಿಗಳಲ್ಲಿ ಬೈಕ್‌ ಓಡಿಸಿದ ಅನುಭವ ಪಡೆದಿರುವ ಸಾಗರ್‌ ಹೊಸತನ ಹುಡುಕಾಟವನ್ನು ಮಂದುವರಿಸಿದ್ದಾರೆ.

ತಮ್ಮ ಉದ್ಯೋಗದಲ್ಲಿ ಅನಾವಶ್ಯಕ ಕೆಲಸಗಳಿಗೆ ರಜೆ ಪಡೆಯದ ಅವರು ತಮ್ಮ ಪಯಣಕ್ಕೆ ಅನುಕೂಲವಾಗುವಂತೆ ರಜೆಗಳನ್ನು ಸದುಪಯೋಗ ಮಾಡಿಕೊಳ್ಳುತ್ತಾರೆ. ಆಗಾಗ ಕಂಪನಿ ಬದಲಾಯಿಸಿದರೆ ಮತ್ತೊಂದು ಕಂಪನಿ ಸೇರುವುದಕ್ಕೆ ಮೊದಲು ಸಿಗುವ ಬಿಡುವಿನ ಅವಧಿಯಲ್ಲಿ ಬೈಕ್‌ ಹತ್ತಿ ಹೊರಡುತ್ತಾರೆ.

‘ಹೊಸ ಊರು, ಹೊಸ ಭಾಷೆ, ಹೊಸ ರುಚಿಯ ಅನುಭವದ ಜೊತೆಯಲ್ಲಿ ಹೊಸ ಸ್ಫೂರ್ತಿಯೂ ದೊರೆಯುತ್ತದೆ. ಆಯಾ ಪ್ರದೇಶದ ಜನರು ನನಗೆ ಉಚಿತವಾಗಿ ಊಟ, ತಿಂಡಿ ಕೊಟ್ಟಿದ್ದಾರೆ. ವಾಸ್ತವ್ಯಕ್ಕೆ ಜಾಗ ಕೊಟ್ಟಿದ್ದಾರೆ. ಜನರ ಪ್ರೀತಿಯು ಹೊಸ ಹುಡುಕಾಟದ ಪಯಣಕ್ಕೆ ಅನುಭೂತಿಯಾಗಿದೆ. ಮುಂದೆ ಬೇರೆಬೇರೆ ದೇಶಗಳಿಗೂ ಬೈಕ್‌ನಲ್ಲೇ ಸಾಗಬೇಕು ಎಂಬ ಕನಸುಗಳಿವೆ’ ಎಂದು ಕೆ.ವಿ.ಸಾಗರ್‌ ಹೇಳುತ್ತಾರೆ.

ಕೆ.ವಿ.ಸಾಗರ್‌
ಸಣ್ಣವನಾಗಿದ್ದಾಗ ಅಪ್ಪನ ಬೈಕ್‌ನಲ್ಲಿ ಮುಂದೆ ಕುಳಿತಾಗ ನಾನೇ ಗಾಡಿ ಓಡಿಸುತ್ತಿದ್ದೇನೆ ಎಂದು ಸಂಭ್ರಮಿಸುತ್ತಿದ್ದೆ. ಕಾಲೇಜು ದಿನಗಳಲ್ಲಿ ಬೈಕ್‌ ಸವಾರಿ ಮೇಲೆ ವಿಶೇಷ ಆಸಕ್ತಿ ಕನಸು ಮೂಡಿದವು. ಈಗ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದೇನೆ
–ಕೆ.ವಿ.ಸಾಗರ್‌ ಬೈಕರ್‌ ಚಿತ್ರದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.