ADVERTISEMENT

ಗುತ್ತಿಗೆ ಭೂಮಿಯಲ್ಲಿ ಉತ್ತಮ ಇಳುವರಿ; ಸೇವಂತಿಗೆ ಬೆಳೆದು ಬದುಕು ಕಟ್ಟಿಕೊಂಡ ರೈತ

ಶಿವಗಂಗಾ ಚಿತ್ತಯ್ಯ
Published 4 ಡಿಸೆಂಬರ್ 2024, 6:30 IST
Last Updated 4 ಡಿಸೆಂಬರ್ 2024, 6:30 IST
ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಗುತ್ತಿಗೆ ಜಮೀನಿನಲ್ಲಿ ಉತ್ತಮ ಇಳುವರಿ ನೀಡಿದ ಸೇವಂತಿಗೆ
ಚಳ್ಳಕೆರೆ ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಗ್ರಾಮದ ಗುತ್ತಿಗೆ ಜಮೀನಿನಲ್ಲಿ ಉತ್ತಮ ಇಳುವರಿ ನೀಡಿದ ಸೇವಂತಿಗೆ   

ಚಳ್ಳಕೆರೆ: ಗುತ್ತಿಗೆ ಜಮೀನಿನಲ್ಲಿ ಪುಷ್ಪ ಕೃಷಿ ಮಾಡಿದ ರೈತರಿಬ್ಬರು ಉತ್ತಮ ಇಳುವರಿ ಪಡೆದು, ಅಧಿಕ ಆದಾಯ ಪಡೆಯುತ್ತಿದ್ದಾರೆ. ಅವರು ಅಳವಡಿಸಿಕೊಂಡ ಹನಿ ನೀರಾವರಿ ವಿಧಾನವು 3 ಎಕರೆ ಪ್ರದೇಶದಲ್ಲಿ ಸೇವಂತಿಗೆ ನಳನಳಿಸುವಂತೆ ಮಾಡಿದೆ. 

ತಾಲ್ಲೂಕಿನ ನಗರಂಗೆರೆ ವ್ಯಾಪ್ತಿಯ ಹೊಟ್ಟೆಪ್ಪನಹಳ್ಳಿ ಗ್ರಾಮದ ರೈತರೊಬ್ಬರಿಂದ ವರ್ಷಕ್ಕೆ ₹35,000 ನೀಡಿ ಗುತ್ತಿಗೆ ಪಡೆದ 12 ಎಕರೆ ಜಮೀನಿನ ಪೈಕಿ 3 ಎಕರೆಯಲ್ಲಿ ಸೇವಂತಿಗೆ ಬೆಳೆದ ಚಿತ್ರದುರ್ಗ ತಾಲ್ಲೂಕು ಪಲ್ಲವಗೆರೆ ಗ್ರಾಮದ ರೈತ ರಾಘವೇಂದ್ರ ಮತ್ತು ಸುರೇಶ್ ಅವರು ಮಾದರಿ ಬದುಕು ಕಟ್ಟಿಕೊಂಡಿದ್ದಾರೆ. 

ಚಾಂದಿನಿ, ಸೆಂಟೆಟ್-1, ಪೂರ್ಣಿಮಾ ಮೊದಲಾದ ಸೇವಂತಿಗೆ ತಳಿಗಳಿದ್ದು, ಮಾರುಕಟ್ಟೆಯಲ್ಲಿ ಪೂರ್ಣಿಮಾ ತಳಿಯ ಸೇವಂತಿಗೆ ಹೂವಿಗೆ ಹೆಚ್ಚು ಬೇಡಿಕೆಯಿದೆ. ಪ್ರತಿ ವರ್ಷ ಅದೇ ತಳಿಯನ್ನೇ ಬೆಳೆಯುತ್ತಾ ಲಾಭ ಕಾಣುತ್ತಿದ್ದಾರೆ. 

ADVERTISEMENT

ಬೆಳೆಯುವ ವಿಧಾನ: ಬೇಸಾಯದ ಮೂಲಕ ಹದಗೊಳಿಸಿದ ಭೂಮಿಗೆ ಕೋಳಿ, ಕೊಟ್ಟಿಗೆ ಗೊಬ್ಬರ ಹಾಕಬೇಕು. ನಂತರ ಮಡಿ ಮಾಡಿ ಪ್ರತಿ ಮಡಿಯಲ್ಲಿ ನಾಲ್ಕೈದು ಸಾಲು ಬೋದು ನಿರ್ಮಿಸಬೇಕು. ಸಸಿಯನ್ನು ಬೋದಿಗೆ ಸಾಲಾಗಿ ನಾಟಿ ಮಾಡಬೇಕು. ಸರಿಯಾಗಿ ನೀರು ನಿರ್ವಹಣೆ ಮಾಡಿದಲ್ಲಿ ನಾಟಿ ಮಾಡಿದ 3 ತಿಂಗಳಿಗೆ ಹೂ ಬಿಡಲು ಆರಂಭವಾಗುತ್ತದೆ.

ಒಂದೂವರೆ ತಿಂಗಳು ನಿರಂತರ ಹೂ ದೊರೆಯುತ್ತದೆ. ಹೂವು ಕಟಾವಾದ ನಂತರ ಪ್ರತಿ 8 ದಿನಕ್ಕೊಮ್ಮೆ ಗಿಡಕ್ಕೆ ಔಷಧಿ ಸಿಂಪರಣೆ ಮಾಡಿ, ನೀರು ಹಾಯಿಸುತ್ತಿರಬೇಕು. ಎಕರೆ, ಅರ್ಧ ಎಕರೆಯಂತೆ ತಿಂಗಳ ಅಂತರದಲ್ಲಿ ಸಸಿ ನಾಟಿ ಮಾಡುತ್ತೇವೆ. ಹೀಗಾಗಿ ಸಂಕ್ರಾಂತಿ, ಯುಗಾದಿ, ದಸರಾ, ದೀಪಾವಳಿ ಮುಂತಾದ ಹಬ್ಬಗಳ ಹೊತ್ತಿಗೆ ವರ್ಷ ಪೂರ್ತಿ ಹೂವು ಬರುತ್ತದೆ.

ಕಾಲಕಾಲಕ್ಕೆ ನೀರು ಹಾಯಿಸಿ, ಉತ್ತಮ ನಿರ್ವಹಣೆ ಮಾಡಿ ಬೆಳೆಯನ್ನು ಮಕ್ಕಳ ರೀತಿಯಲ್ಲಿ ಕಾಪಾಡಿದ್ದರಿಂದ ಇಳುವರಿ ಚೆನ್ನಾಗಿದೆ. ಬೇಸಾಯ, ಗೊಬ್ಬರ, ನೀರು, ಔಷಧಿ ಹಾಗೂ ಕೂಲಿ ಸೇರಿ ಒಂದು ಎಕರೆ ಪ್ರದೇಶದಲ್ಲಿ ಸೇವಂತಿಗೆ ಬೆಳೆಯಲು ಕನಿಷ್ಠ ಒಂದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎನ್ನುತ್ತಾರೆ ಬೆಳೆಗಾರ ರಾಘವೇಂದ್ರ. 

ಈ ಬಾರಿ ಮಾರುಕಟ್ಟೆಯಲ್ಲಿ ಹೂವಿಗೆ ಹೆಚ್ಚು ಬೇಡಿಕೆ ಇದ್ದು, ಉತ್ತಮ ಬೆಲೆಯೂ ದೊರಕಿದ್ದರಿಂದ ಒಂದು ಎಕರೆಯಲ್ಲಿ ಬೆಳೆದ ಸೇವಂತಿಗೆ ₹3 ಲಕ್ಷಕ್ಕೂ ಅಧಿಕ ಆದಾಯ ತಂದುಕೊಟ್ಟಿದೆ.
–ಸುರೇಶ್, ಸೇವಂತಿಗೆ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.