ADVERTISEMENT

ಕಳಪೆ ರಸಗೊಬ್ಬರ ಪ್ರಕರಣ ಸಿಐಡಿಗೆ: ಬಿ.ಸಿ. ಪಾಟೀಲ

ತಮಿಳುನಾಡಿನಿಂದ ಪೂರೈಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:29 IST
Last Updated 16 ಆಗಸ್ಟ್ 2022, 4:29 IST
ಬಿ.ಸಿ.ಪಾಟೀಲ
ಬಿ.ಸಿ.ಪಾಟೀಲ   

ಚಿತ್ರದುರ್ಗ: ರಾಜ್ಯದ ಹಲವೆಡೆ ಬೆಳಕಿಗೆ ಬಂದಿರುವ ಕಳಪೆ ರಸಗೊಬ್ಬರ ಪೂರೈಕೆ ಪ್ರಕರಣಗಳ ತನಿಖೆಯ ಹೊಣೆಯನ್ನು ಸಿಐಡಿಗೆ ವಹಿಸುವ ಅಗತ್ಯವಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.

‘ಚಿತ್ರದುರ್ಗ, ಗದಗ, ಮೈಸೂರು ಸೇರಿ ರಾಜ್ಯದ ಹಲವೆಡೆ ಕಳಪೆ ಗುಣಮಟ್ಟದ ರಸಗೊಬ್ಬರ ಮಾರಾಟವಾಗಿರುವುದು ಗಮನಕ್ಕೆ ಬಂದಿದೆ. ತಮಿಳುನಾಡಿನ ಸೇಲಂ ಜಿಲ್ಲೆಯ ‘ವೆಂಕಟೇಶ್ವರ ಫರ್ಟಿಲೈಜರ್ಸ್‌’ನಿಂದ ಈ ಗೊಬ್ಬರ ಪೂರೈಕೆ ಆಗಿರುವುದು ಗೊತ್ತಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅಂತರರಾಜ್ಯ ಪೊಲೀಸರ ನೆರವು ಪಡೆಯುವ ಅಗತ್ಯ ಇರುವುದರಿಂದ ತನಿಖೆಯ ಹೊಣೆಯನ್ನು ಸಿಐಡಿ ನೀಡುವುದು ಸೂಕ್ತ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕರ್ನಾಟಕದಲ್ಲಿ ರಸಗೊಬ್ಬರಕ್ಕೆ ಹೆಚ್ಚು ಸಬ್ಸಿಡಿ ಸಿಗುತ್ತಿದೆ. ಚೀಲ ಯೂರಿಯಾ ರಸಗೊಬ್ಬರಕ್ಕೆ ₹ 1,400 ಸಬ್ಸಿಡಿ ನೀಡಲಾಗುತ್ತಿದೆ. ನೆರೆಯ ರಾಜ್ಯಗಳಿಗೆ ರಸಗೊಬ್ಬರ ಕಳ್ಳಸಾಗಣೆ ಆಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಕೊಡಗು ಜಿಲ್ಲೆಯಿಂದ ಕೇರಳಕ್ಕೆ ರವಾನೆಯಾಗುತ್ತಿದ್ದ ರಸಗೊಬ್ಬರವನ್ನು ವಶಕ್ಕೆ ಪಡೆಯಲಾಗಿದೆ. ಕೋಲಾರ ಜಿಲ್ಲೆಯಲ್ಲಿಯೂ ಇಂತಹದೇ ಪ್ರಕರಣವನ್ನು ಪತ್ತೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ಕೃಷಿ ಸಚಿವರಾದ ಬಳಿಕ ರಾಜ್ಯದಲ್ಲಿ ₹ 28 ಕೋಟಿ ಮೌಲ್ಯದ ಕಳಪೆ ರಸಗೊಬ್ಬರ ಹಾಗೂ ಬಿತ್ತನೆ ಬೀಜವನ್ನು ವಶಕ್ಕೆ ಪಡೆಯಲಾಗಿದೆ. 144 ಪರವಾನಗಿಗಳನ್ನು ರದ್ದುಪಡಿಸಲಾಗಿದ್ದು, 500ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೊಂದು ದೊಡ್ಡ ಜಾಲವಾಗಿದ್ದು, ಶೀಘ್ರವೇ ಭೇದಿಸಲಾಗುವುದು. ಜಾಗೃತ ದಳವನ್ನು ಬಲಪಡಿಸಿ ನಿಗಾ ಇಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ
ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.