ADVERTISEMENT

ಸುದ್ದಿಗೋಷ್ಠಿಗೆ ನುಗ್ಗಿ ಗಲಾಟೆ: ಮಾಜಿ ಸಚಿವ ಗೋವಿಂದ ಕಾರಜೋಳ ಜೊತೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 23:30 IST
Last Updated 18 ಡಿಸೆಂಬರ್ 2023, 23:30 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಚಿತ್ರದುರ್ಗ: ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಏಕಾಏಕಿ ನುಗ್ಗಿದ ಮಾದಿಗ ಮಹಾಸಭಾದ ಸದಸ್ಯರು ಕಾರಜೋಳ ಜೊತೆ ವಾಗ್ವಾದ ನಡೆಸಿದರು. ಈ ಸಂಬಂಧ ನಗರ ಪೊಲೀಸ್‌ ಠಾಣೆಯಲ್ಲಿ ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಮಾಜಿ ಸಚಿವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ಬಂದ ಮಹಾಸಭಾದ ಸದಸ್ಯರು, ಬಿಜೆಪಿ ಅವಧಿಯಲ್ಲಿ ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನಿಸಿದರು.

ಗಲಾಟೆ ಸಂಬಂಧ ಹನುಮಂತಪ್ಪ ದುರ್ಗ, ದೇವರಾಜ್‌, ಸತೀಶ್‌ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ADVERTISEMENT

‘ಅಧಿಕಾರದಲ್ಲಿದ್ದಾಗ ಮಾದಿಗ ಸಮುದಾಯಕ್ಕೆ ನೀವು ಅನ್ಯಾಯ ಮಾಡಿದ್ದೀರಿ. ಸಮುದಾಯದ ಬಗ್ಗೆ ಮಾತನಾಡಲು ನಿಮಗೆ ಯಾವ ನೈತಿಕತೆ ಇದೆ’ ಎಂದು ಹನುಮಂತಪ್ಪ ದುರ್ಗ ನೇತೃತ್ವದ ಗುಂಪು ಕಾರಜೋಳ ಅವರನ್ನು ಪ್ರಶ್ನಿಸಿತು.

ಏಕಾಏಕಿ ಎದುರಾದ ಈ ಪ್ರಶ್ನೆ ಕೇಳಿ ಕಾರಜೋಳ ಕುಪಿತರಾದರು.

‘ಸಮುದಾಯದ ಬಗ್ಗೆ ಮಾತನಾಡಲು ಕಾಲಾವಕಾಶವಿದೆ. ಬಿಜೆಪಿ ಪತ್ರಿಕಾಗೋಷ್ಠಿಗೆ ನುಗ್ಗಿ ಗಲಾಟೆ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ ಪ್ರೇರಿತ ಗೂಂಡಾಗಿರಿಗೆ ಇದು ನಿದರ್ಶನ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಗಲಾಟೆ ಮಾಡಿದವರನ್ನು ಬಂಧಿಸಬೇಕು’ ಎಂದು ಕಾರಜೋಳ ಆಗ್ರಹಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿ ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.