ADVERTISEMENT

ಸಿಎಂ ಘೋಷಣೆ ಸ್ವಾಗತಾರ್ಹ: ಕುಂಚಿಟಿಗ ಶ್ರೀ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 13:53 IST
Last Updated 31 ಅಕ್ಟೋಬರ್ 2020, 13:53 IST
ಶಾಂತವೀರ ಸ್ವಾಮೀಜಿ
ಶಾಂತವೀರ ಸ್ವಾಮೀಜಿ   

ಹೊಸದುರ್ಗ: ‘ಶಿರಾದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಕುಂಚಿಟಿಗ ಸಮಾಜಕ್ಕೆ ಮೀಸಲಾತಿ ಕೊಡುತ್ತೇವೆ ಎಂದು ಘೋಷಿಸಿರುವುದು ಸ್ವಾಗತಾರ್ಹ’ ಎಂದು ಇಲ್ಲಿನ ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ.

‘ಈಚೆಗೆ ಶ್ರೀಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕುಂಚಿಟಿಗ ಸಮಾಜದ ಮೀಸಲಾತಿ, ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ತಿಳಿಸಬೇಕು ಎಂದು ಮನವಿ ಮಾಡಲಾಗಿತ್ತು. ನಮ್ಮ ಬೇಡಿಕೆಯಂತೆ ವಿಜಯೇಂದ್ರ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿರುವುದು ಕುಂಚಿಟಿಗ ಸಮಾಜಕ್ಕೆ ಸಂತಸ ತಂದಿದೆ’ ಎಂದರು.

‘ರಾಜ್ಯದ ಕುಂಚಿಟಿಗ ಸಮಾಜದ ಬಹುದಿನದ ಬೇಡಿಕೆಗೆ ಸ್ಪಂದಿಸಿ ಕುಂಚಿಟಿಗರಿಗೆ ಮೀಸಲಾತಿ ಕೊಡುತ್ತೇವೆ ಎಂದು ಭರವಸೆಯ ಕೊಟ್ಟ ಮೊದಲ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಅವರು ಮೊದಲ ಬಾರಿ ಮುಖ್ಯಮಂತ್ರಿಗಳಾದಾಗ ಬಜೆಟ್‌ನಲ್ಲಿ ಕುಂಚಿಟಿಗ ಮಹಾಸಂಸ್ಥಾನ ಮಠಕ್ಕೆ ಅನುದಾನ ಘೋಷಣೆ ಮಾಡಿದ್ದರು. ಶ್ರೀಮಠದ ನೇತೃತ್ವದಲ್ಲಿ ಹಲವೆಡೆ ನಡೆದ ಕುಂಚಿಟಿಗರ ಸಮಾವೇಶ ಮತ್ತು ಸಂಗಮೇಶ್ವರ ಜಯಂತಿಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರಿಗೆ ಕುಂಚಿಟಿಗರ ಸಮಸ್ಯೆ ಮನವರಿಕೆಯಾಗಿದೆ. ನಮ್ಮ ಬೇಡಿಕೆಗಳಿಗೆ ಮೊದಲಿನಿಂದಲೂ ಸ್ಪಂದಿಸುತ್ತಿರುವ ಯಡಿಯೂರಪ್ಪ ಅವರ ಸಹಕಾರ ಮರೆಯಲಾಗದು’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.