ADVERTISEMENT

ವಂಚನೆಗೆ ಆರ್‌ಬಿಐ ಕಡಿವಾಣ ಹಾಕಲಿ

ಸಹಕಾರ ಸಪ್ತಾಹ ಸಮಾರಂಭದಲ್ಲಿ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಮನವಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:29 IST
Last Updated 19 ನವೆಂಬರ್ 2019, 12:29 IST
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ‘66ನೇ ಅಖಿಲ ಭಾರತ ಸಹಕಾರ ಸಪ್ತಾಹ’ವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ‘66ನೇ ಅಖಿಲ ಭಾರತ ಸಹಕಾರ ಸಪ್ತಾಹ’ವನ್ನು ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು.   

ಚಿತ್ರದುರ್ಗ: ಸಹಕಾರ ಕ್ಷೇತ್ರದ ಸಂಘ–ಸಂಸ್ಥೆಗಳಲ್ಲಿ ಆಗುತ್ತಿರುವ ವಂಚನೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ ಕಡಿವಾಣ ಹಾಕಬೇಕು. ಬಡವರ ಹೂಡಿಕೆಯ ಹಣಕ್ಕೆ ರಕ್ಷಣೆ ಒದಗಿಸಲು ಕಠಿಣ ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾಲು ಉತ್ಪಾದಕರ ಮಹಾಮಂಡಳ ಸೇರಿದಂತೆ ಸಹಕಾರ ಕ್ಷೇತ್ರದ ಹಲವು ಸಂಸ್ಥೆಗಳು ಮುರುಘಾ ಮಠದ ಅನುಭವ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ‘66ನೇ ಅಖಿಲ ಭಾರತ ಸಹಕಾರ ಸಪ್ತಾಹ’ದಲ್ಲಿ ಅವರು ಮಾತನಾಡಿದರು.

‘ಸಹಕಾರ ವಲಯದಲ್ಲಿ ಇತ್ತೀಚೆಗೆ ವಂಚನೆ ಹೆಚ್ಚಾಗುತ್ತಿದೆ. ಸಹಕಾರಿ ಬ್ಯಾಂಕುಗಳ ಹಣ ದುರ್ಬಳಕೆಯಾಗುತ್ತಿದೆ. ಮಹರಾಷ್ಟ್ರ–ಪಂಜಾಬ್‌ ಸಹಕಾರಿ ಬ್ಯಾಂಕ್‌ನಲ್ಲಿ ನಾಲ್ಕು ಸಾವಿರ ಕೋಟಿಯ ಅವ್ಯವಹಾರ ನಡೆದಿದೆ. ಬ್ಯಾಂಕಿನ ಆಡಳಿತ ವರ್ಗವೇ ಹಣ ದುರುಪಯೋಗ ಪಡಿಸಿಕೊಂಡಿದೆ. ಉಳಿತಾಯದ ಹಣ ಹೂಡಿಕೆ ಮಾಡಿದ ಖಾತೆದಾರರು ಸಮಸ್ಯೆಗೆ ಸಿಲುಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಕೋ–ಆಪರೇಟಿವ್‌ ಬ್ಯಾಂಕ್‌ಗಳಲ್ಲಿ ಮಾತ್ರ ಹಣ ದುರುಪಯೋಗ ಆಗುತ್ತಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಉದ್ಘಾಟಿಸಿದ ಚಿತ್ರದುರ್ಗದ ಸಹಕಾರಿ ಬ್ಯಾಂಕ್‌ ವರ್ಷಕ್ಕೂ ಮೊದಲೇ ಬಾಗಿಲು ಮುಚ್ಚಿತು. ಖಾಸಗಿ ವಲಯದ ಸಕ್ಕರೆ ಕಾರ್ಖಾನೆಗಳು ಲಾಭದಲ್ಲಿವೆ. ಆದರೆ, ಸಹಕಾರಿ ಕ್ಷೇತ್ರದ ಸಕ್ಕರೆ ಕಾರ್ಖಾನೆ ನಷ್ಟ ಅನುಭವಿಸುತ್ತಿವೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಸಹಕಾರ ಕ್ಷೇತ್ರದಲ್ಲಿ ಸಾಲ ಪಡೆದವರೇ ಮತ್ತೆ ಫಲಾನುಭವಿಗಳಾಗುತ್ತಿದ್ದಾರೆ. ಹೊಸಬರಿಗೆ ಸಾಲ ಸಿಗುತ್ತಿಲ್ಲ ಎಂಬ ಆರೋಪವಿದೆ. ಸಹಕಾರಿ ಸಂಘ, ಸಂಸ್ಥೆಗಳ ಸದಸ್ಯತ್ವ ಕೂಡ ಮುಕ್ತವಾಗಿ ಸಿಗುತ್ತಿಲ್ಲ. ಸಹಕಾರ ಕ್ಷೇತ್ರದ ಸದಸ್ಯತ್ವದ ನಿರೀಕ್ಷೆಯಲ್ಲಿ ಲಕ್ಷಾಂತರ ಜನ ಕಾಯುತ್ತಿದ್ದಾರೆ’ ಎಂದರು.

ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಎನ್‌.ಗಂಗಣ್ಣ, ‘ರಾಜ್ಯದಲ್ಲಿ 43 ಸಾವಿರಕ್ಕೂ ಅಧಿಕ ಸಹಕಾರ ಸಂಘಗಳಿವೆ. ಸುಮಾರು ಎರಡು ಕೋಟಿ ಜನರು ಸಹಕಾರಿ ಕ್ಷೇತ್ರದ ಫಲಾನುಭವಿಗಳಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರು, ನಿರುದ್ಯೋಗಿಗಳು ಹಾಗೂ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದರು.

‘ಸಹಕಾರ ವಲಯ ಶಾಶ್ವತವಾಗಿ ಉಳಿಯಲಿದೆ. ಸುಮಾರು 24 ಲಕ್ಷ ಹಾಲು ಉತ್ಪಾದಕರು ರಾಜ್ಯದಲ್ಲಿದ್ದಾರೆ. ಆರ್‌ಸಿಇಪಿ ಒಪ್ಪಂದ ಜಾರಿಯಾದರೆ ಇವರ ಬದುಕು ಸರ್ವನಾಶವಾಗಲಿದೆ. ಆರ್‌ಸಿಇಪಿ ಒಪ್ಪಂದಕ್ಕೆ ಪ್ರಧಾನಿ ಮೋದಿ, ಮುಂದೆ ಕೂಡ ಸಹಿ ಹಾಕುವುದಿಲ್ಲ ಎಂಬ ವಿಶ್ವಾಸವಿದೆ’ ಎಂದು ಆಶಿಸಿದರು.

ಶಕುಂತಲಾ ಕೆ.ಬೆಳ್ದಾಳೆ, ಎಸ್‌.ಆರ್‌.ಗಿರೀಶ್‌, ಎನ್‌.ಚಂದ್ರಪ್ಪ, ಡಿ.ಆನಂದ್, ಸಿ.ವೀರಭದ್ರಬಾಬು, ಆರ್‌.ಬಸವರಾಜ್‌ ಪಾಟೀಲ್‌, ಆರ್‌.ರಾಮರೆಡ್ಡಿ, ಡಿ.ಎಂ.ಲಿಂಗರಾಜು, ಎಚ್‌.ಎಸ್‌.ಪೂರ್ಣಿಮಾ, ಶಿವಕುಮಾರಗೌಡ ಪಾಟೀಲ, ಶೇಖರಗೌಡ ಮಾಲಿಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.