ADVERTISEMENT

14ಕ್ಕೆ ಉಡುಪಿಯಲ್ಲಿ ಸಹಬಾಳ್ವೆ ಸಮಾವೇಶ

​ಪ್ರಜಾವಾಣಿ ವಾರ್ತೆ
Published 11 ಮೇ 2022, 9:37 IST
Last Updated 11 ಮೇ 2022, 9:37 IST

ಚಿತ್ರದುರ್ಗ: ಧರ್ಮ ಸಹಿಷ್ಣುತೆ ಸಂದೇಶವನ್ನು ಸಾರುವ ಉದ್ದೇಶದಿಂದ ಸಾಮರಸ್ಯ ನಡಿಗೆ ಹಾಗೂ ಸಹಬಾಳ್ವೆ ಸಮಾವೇಶವನ್ನು ಉಡುಪಿಯಲ್ಲಿ ಮೇ 14ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಜಿಲ್ಲಾ ಸಂಚಾಲಕ ಟಿ.ಷಫಿಯುಲ್ಲಾ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆಲ ಶಕ್ತಿಗಳು ಇಡೀ ವಾತಾವರಣ ಹಾಳು ಮಾಡುತ್ತಿವೆ. ಇದು ಶರಣರು, ಸಂತರು ಕಟ್ಟಿದ ನಾಡು. ಸೌಹಾರ್ದ, ಸಾಮರಸ್ಯ ಇಲ್ಲಿ ನೆಲೆಸಿದೆ. ಇಂತಹ ನಾಡನ್ನು ಹಾಳು ಮಾಡುತ್ತಿರುವುದು ನಿಜಕ್ಕೂ ದುರಂತ’ ಎಂದು ಬೇಸರ ವ್ಯಕ್ತಪಡಿಸಿದರು.

‘ಎಲ್ಲ ಧರ್ಮಿಯರು ಒಂದಾಗಿ ಬದುಕುವ ಆಶಯ ಇಟ್ಟುಕೊಂಡು ಸಮಾವೇಶ ನಡೆಸಲಾಗುತ್ತಿದೆ. 16 ಧರ್ಮಗುರುಗಳು ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ. ನಾಡಿನ ಸಂಸ್ಕೃತಿ, ಸೌಹಾರ್ದ ವಾತಾವರಣ ಕದಡಲು ಅವಕಾಶ ನೀಡುವುದಿಲ್ಲ. ಮೂವರು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಪಾಲ್ಗೊಳ್ಳಲಿದ್ದಾರೆ. ಚಿತ್ರದುರ್ಗದಿಂದಲೂ ಸಮಾವೇಶಕ್ಕೆ ತೆರಳುತ್ತಿದ್ದೇವೆ’ ಎಂದರು.

ADVERTISEMENT

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಶಿವು ಯಾದವ್‌ ಮಾತನಾಡಿ, ‘ಹಿಜಾಬ್‌ ವಿಚಾರದಿಂದ ಆರಂಭವಾದ ವಿವಾದ ನಿತ್ಯವೂ ಒಂದಿಲ್ಲೊಂದು ಸ್ವರೂಪ ಪಡೆಯುತ್ತಿದೆ. ವಿಛಿದ್ರಕಾರಿ ಶಕ್ತಿಗಳು ಸಮಾಜದ ಶಾಂತಿಯನ್ನು ಕದಡುವ ಹುನ್ನಾರ ಮಾಡುತ್ತಿವೆ. ಇಂತಹ ದೃಷ್ಕೃತ್ಯ ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.

‘ಇತ್ತೀಚಿನ ಎರಡು ತಿಂಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಆತಂಕಕಾರಿಯಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಹಗರಣ, ವೈಫಲ್ಯಗಳನ್ನು ಮುಚ್ಚಿಹಾಕಲು ಧಾರ್ಮಿಕ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಸರ್ಕಾರವೇ ಇದಕ್ಕೆ ಪರೋಕ್ಷ ಬೆಂಬಲ ನೀಡುತ್ತಿದೆ. ಜಾತ್ಯತೀತ ರಾಷ್ಟ್ರವಾಗಿರುವ ಭಾರತ, ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ’ ಎಂದು ಹೇಳಿದರು.

ಮುಖಂಡರಾದ ಟಿಪ್ಪು ಖಾಸಿಂ ಅಲಿ, ನಿವೃತ್ತ ಪ್ರಾಧ್ಯಾಪಕ ಶಿವಕುಮಾರ್, ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಯ ಅರುಂಧತಿ, ಜಮಾತೆ ಇಸ್ಲಾಮಿ ಹಿಂದ್‌ ಸಂಘಟನೆಯ ಮೊಹಮ್ಮದ್ ಸಮ್ಮದ್ ಖಾನ್, ಸುಬಾನುಲ್ಲಾ, ಹೊಳಿಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.