
ಚಿತ್ರದುರ್ಗ: ಮಧ್ಯ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಪಾಲಿಗೆ ಶೈಕ್ಷಣಿಕ ಸಂಜೀವಿನಿಯಂತಿರುವ ಐತಿಹಾಸಿಕ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಇದೇ ಮೊದಲ ಬಾರಿಗೆ ಪದವಿ ಪರೀಕ್ಷೆ ಪೂರ್ಣಗೊಂಡ 10 ದಿನದಲ್ಲೇ ಫಲಿತಾಂಶ ಪ್ರಕಟಗೊಳಿಸುತ್ತಿದೆ. ಜ. 24ರಂದು ಪೂರ್ಣಗೊಂಡ ಪರೀಕ್ಷೆಗಳ ಫಲಿತಾಂಶ ಬುಧವಾರ (ಫೆ.4) ಬಹಿರಂಗಗೊಳ್ಳುತ್ತಿದೆ.
ಕುವೆಂಪು ವಿವಿ, ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ ಸ್ವಾಯತ್ತ ಮಾನ್ಯತೆ ಹೊಂದಿದ ಏಕೈಕ ಕಾಲೇಜು ಇದಾಗಿದ್ದು ಹಲವು ವಿಶೇಷತೆಗಳಿಂದ ಪ್ರತಿ ವರ್ಷ ಗಮನ ಸೆಳೆಯುತ್ತದೆ. ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಂದ ಪ್ರಸಿದ್ಧಿ ಪಡೆದಿದೆ. ಕಾಲೇಜು ಶಿಕ್ಷಣ ಇಲಾಖೆ, ಯುಜಿಸಿ ನಿಯಮಾನುಸಾರ ಕಾಲೇಜು ಆವರಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ಎಪ್ಪತ್ತರ ದಶಕದಿಂದಲೂ ಲಕ್ಷಾಂತರ ವಿದ್ಯಾರ್ಥಿಗಳು ಕಲಾ ಕಾಲೇಜುನಲ್ಲಿ ಪದವಿ ಪಡೆದು ದೇಶವಿದೇಶಗಳಲ್ಲಿ ನೆಲೆ ನಿಂತಿದ್ದಾರೆ. 2015–16ರಲ್ಲಿ ದಾವಣಗೆರೆ ವಿವಿ ಅನುಮೋದನೆಯೊಂದಿಗೆ ಸ್ವಾಯತ್ತತೆ ಪಡೆದಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇವಲ 10 ದಿನದಲ್ಲಿ ಮೌಲ್ಯಮಾಪನ, ಅಂಕಗಳ ಆನ್‌ಲೈನ್ ಸೇರ್ಪಡೆ, ತಾಂತ್ರಿಕ ಪರಿಶೀಲನೆ ಪೂರ್ಣಗೊಳಿಸಿ ಫಲಿತಾಂಶ ಪ್ರಕಟಗೊಳಿಸಿ ಹೊಸ ದಾಖಲೆ ಬರೆಯುತ್ತಿದೆ.
ಬಿಎ, ಬಿ.ಕಾಂ, ಬಿಬಿಎ, ಬಿಎಫ್‌ಎಸ್‌ಐ (ಬ್ಯಾಚುಲರ್ ಆಫ್ ಫೈನಾನ್ಸ್, ಸರ್ವೀಸ್, ಇನ್ವೆಂಟ್‌ಮೆಂಟ್) ಪದವಿ ತರಗತಿಗಳಲ್ಲಿ ಪರೀಕ್ಷೆ ಬರೆದಿದ್ದ 1,284 ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಪಡೆಯಲಿದ್ದಾರೆ. 1, 3, 5ನೇ ಸೆಮಿಸ್ಟರ್ ಪದವಿ ತರಗತಿಗಳ ಪರೀಕ್ಷೆ ಡಿ.22ರಂದು ಆರಂಭಗೊಂಡಿತ್ತು, ಜ.24ರಂದು ಪೂರ್ಣಗೊಂಡಿತ್ತು.
ಕಾಲೇಜಿನಲ್ಲಿ ಪ್ರತ್ಯೇಕ ಪರೀಕ್ಷಾ ವಿಭಾಗವಿದ್ದು, ಪರೀಕ್ಷಾ ನಿಯಂತ್ರಣಾಧಿಕಾರಿ ನೇತೃತ್ವ ವಹಿಸಿದ್ದಾರೆ. ತಾಂತ್ರಿಕ ನೈಪುಣ್ಯತೆ ಹೊಂದಿದ ಸಿಬ್ಬಂದಿ ಹೊಂದಿರುವ ಕಾರಣ ಅತ್ಯಂತ ಶೀಘ್ರವಾಗಿ ಫಲಿತಾಂಶ ಬಹಿರಂಗಗೊಳಿಸಲು ಸಾಧ್ಯವಾಗಿದೆ. ಪ್ರಾಂಶುಪಾಲರು, ಪರೀಕ್ಷಾ ನಿಯಂತ್ರಣಾಧಿಕಾರಿ, ಮೌಲ್ಯಮಾಪನ ಕಸ್ಟಡಿಯನ್, ಮೌಲ್ಯಮಾಪಕರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರ ನೌಕರರು ಹಗಲು– ರಾತ್ರಿ ಕೆಲಸ ಮಾಡಿರುವ ಫಲವಾಗಿ ಬುಧವಾರ ಫಲಿತಾಂಶ ಹೊರಬೀಳುತ್ತಿದೆ.
ನಗರದ ಹೃದಯ ಭಾಗದಲ್ಲಿರುವ ಕಾಲೇಜು ಬಿ.ಡಿ ರಸ್ತೆಯ ಹೃದಯ ಭಾಗದಲ್ಲಿದೆ, ಹಸಿರಿನಿಂದ ಕಂಗೊಳಿಸುವ ಕಾಲೇಜು ಆವರಣ 23 ಎಕರೆ ವಿಸ್ತೀರ್ಣ ಹೊಂದಿದೆ. ಪಠ್ಯ ಚಟುವಟಿಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಯಲ್ಲೂ ಮಧ್ಯ ಕರ್ನಾಟಕ ಭಾಗದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಕ್ರೀಡಾ ವಿಭಾಗದಲ್ಲಿ ಹಲವು ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದ್ದಾರೆ. ಎನ್‌ಸಿಸಿ ಚಟುವಟಿಕೆ ಉತ್ತಮವಾಗಿ ನಡೆಯುತ್ತಿದ್ದು, ಹಲವು ಸ್ವಯಂ ಸೇವಕರು ಪ್ರತಿ ವರ್ಷ ದೆಹಲಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುತ್ತಾರೆ.
ಸ್ನಾತಕೋತ್ತರ ಮಾನ್ಯತೆಯೂ ಕಾಲೇಜಿಗಿದ್ದು ಕನ್ನಡ, ಇಂಗ್ಲಿಷ್, ರಾಜಕೀಯ ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಆರ್ಥಿಕ ವಿಜ್ಞಾನಗಳ ತರಗತಿಗಳು ನಡೆಯುತ್ತವೆ. ಹಂಪಿ ಕನ್ನಡ ವಿವಿಯಿಂದ ಸಂಶೋಧನಾ ಮಾನ್ಯತೆಯೂ ಸಿಕ್ಕಿದ್ದು ಕನ್ನಡ ಮತ್ತು ಇತಿಹಾಸ ವಿಷಯಗಳ ಸಂಶೋಧನಾ ಚಟುವಟಿಕೆ ನಡೆಯುತ್ತವೆ.
‘ನಮ್ಮ ಕಾಲೇಜಿನಲ್ಲಿ ಪಾಠ ಬೋಧನೆ ನಿಗದಿತ ಅವಧಿಯಲ್ಲಿ ಪೂರ್ಣಗೊಂಡು ಸರಿಯಾದ ಸಮಯಕ್ಕೆ ಪರೀಕ್ಷೆಯೂ ಮುಗಿಯಿತು. ಇದೀಗ ಫಲಿತಾಂಶವೂ ಪ್ರಕಟಗೊಳ್ಳುತ್ತಿರುವ ಕಾರಣ ಮುಂದಿನ ಸೆಮಿಸ್ಟರ್ ತರಗತಿಗಳು ಫೆ. 10ರಿಂದಲೇ ಆರಂಭಗೊಳ್ಳುತ್ತಿವೆ’ ಎಂದು ಬಿಎ ವಿದ್ಯಾರ್ಥಿನಿಯೊಬ್ಬರು ತಿಳಿಸಿದರು.
ಅಧ್ಯಾಪಕ ವರ್ಗ ಪರೀಕ್ಷಾ ನಿಯಂತ್ರಾಣಧಿಕಾರಿ ಮೌಲ್ಯಮಾಪನ ಕಸ್ಟೋಡಿಯನ್ ಬದ್ಧತೆಯಿಂದ ಫಲಿತಾಂಶ ಸಿದ್ಧಗೊಂಡಿದೆ. ಶೀಘ್ರ ಕಾಲೇಜು ಚಟುವಟಿಕೆ ಪೂರ್ಣಗೊಳಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುತ್ತದೆಕರಿಯಪ್ಪ ಮಾಳಿಗೆ ಪ್ರಾಚಾರ್ಯ ಸರ್ಕಾರಿ ಕಲಾ ಕಾಲೇಜು
ರಿತ ಬೋಧಕ ವರ್ಗ ಸ್ವತಂತ್ರ ಪರೀಕ್ಷಾ ವಿಭಾಗ ತಾಂತ್ರಿಕ ರ್ವಗದ ಶ್ರಮ ಹಾಗೂ ಪ್ರಾಂಶುಪಾಲರ ಪ್ರೋತ್ಸಾಹದಿಂದ ಬಲುಬೇಗನೆ ಫಲಿತಾಂಶ ನೀಡಲು ಸಾಧ್ಯವಾಗಿದೆಬಿ.ಸುರೇಶ್ ಪರೀಕ್ಷಾ ನಿಯಂತ್ರಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.