ಹೊಸದುರ್ಗ: ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಎರಡು ದಿನ ನಡೆದ ದಾವಣಗೆರೆ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಟೂರ್ನಿಯಲ್ಲಿ ಸ್ಥಳೀಯ ಸರ್ಕಾರಿ ಪ್ರಥಮದರ್ಜೆ ಕಾಲೇಜು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ದಾವಣಗೆರೆ ವಿಶ್ವವಿದ್ಯಾಲಯದ 27 ಕಾಲೇಜು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಬಿರು ಬಿಸಿಲಿನಲ್ಲಿಯೂ ಗೆಲುವಿಗಾಗಿ ತೀವ್ರ ಹೋರಾಟ ಕಂಡುಬಂತು. ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ಹೊಸದುರ್ಗ ಕಾಲೇಜು ತಂಡಗಳು ಉತ್ತಮ ಪ್ರದರ್ಶನ ನೀಡಿದವು.
ಪುರುಷರ ವಿಭಾಗದ ಅಂತಿಮ ಹಣಾಹಣಿಯಲ್ಲಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ತಂಡ ದಿಟ್ಟ ಆಟ ಆಡಿ ಗೆಲುವಿನ ನಗೆ ಬೀರಿತು.
ಫೈನಲ್‌ನಲ್ಲಿ ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜಿನ ವಿರುದ್ಧ ರೋಚಕ ಪೈಪೋಟಿ ನಡೆಯಿತು. ಮೊದಲ ಸೆಟ್‌ನಲ್ಲಿ ಮಲ್ಲಾಡಿಹಳ್ಳಿ ಜಯಿಸಿದರೆ, ಎರಡನೇ ಸೆಟ್‌ನಲ್ಲಿ ಹೊಸದುರ್ಗ ತಂಡ ಗೆಲುವು ಸಾಧಿಸಿತು. ನಿರ್ಣಾಯಕ ಎನಿಸಿದ್ದ ಮೂರನೇ ಸೆಟ್‌ನಲ್ಲಿ ಹೊಸದುರ್ಗ 15–4 ಪಾಯಿಂಟ್ಸ್‌ನಿಂದ ಎದುರಾಳಿಗಳನ್ನು ಮಣಿಸಿ ಸಂಭ್ರಮಿಸಿತು.
ಮಂಗಳವಾರ ನಡೆದ ಟೂರ್ನಿಯನ್ನು ಶಾಸಕ ಬಿ.ಜಿ. ಗೋವಿಂದಪ್ಪ ಉದ್ಘಾಟಿಸಿದರು. 27 ಕಾಲೇಜಿನ ವಿದ್ಯಾರ್ಥಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ತರಬೇತುದಾರರು ಸೇರಿದಂತೆ ಇತರೆಡೆಯಿಂದ ಬಂದವರಿಗೆ ಊಟ, ವಸತಿ ಸೌಲಭ್ಯ ಕಲ್ಪಿಸಲಾಗಿತ್ತು.
ಮೊದಲ ಬಾರಿಗೆ ಆಯೋಜನೆ: 2010ರಿಂದಲೂ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಕ್ರೀಡಾಕೂಟ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಹೊಸದುರ್ಗದಲ್ಲಿ ಆಯೋಜಿಸಲಾಗಿತ್ತು.
ಹೊಸದುರ್ಗ ಪ್ರಥಮ ದರ್ಜೆ ಕಾಲೇಜು ತಂಡ ಟೂರ್ನಿಯಲ್ಲಿ ಈವರೆಗೆ 11 ಬಾರಿ ಚಾಂಪಿಯನ್ ಆಗಿದೆ. ಮೂರು ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟಕ್ಕೆ ಆಯ್ಕೆಯಾದವರಲ್ಲಿ ಹೊಸದುರ್ಗ ಕಾಲೇಜಿನ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ ಎಂದು ಕ್ರೀಡಾ ಸಂಚಾಲಕ ಶೈಲೇಂದ್ರ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಆರ್ ಸತೀಶ್ ತಿಳಿಸಿದರು.
ಮಲ್ಲಾಡಿಹಳ್ಳಿಯ ಶತಮಾನೋತ್ಸವ ದೈಹಿಕ ಶಿಕ್ಷಣ ಕಾಲೇಜು ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರೆ, ಚನ್ನಗಿರಿ ಪ್ರಥಮ ದರ್ಜೆ ಕಾಲೇಜು ತೃತೀಯ ಹಾಗೂ ದಾವಣಗೆರೆಯ ಎ.ಆರ್.ಎಂ. ಕಾಲೇಜು 4ನೇ ಸ್ಥಾನ ಗಳಿಸಿದೆ.
ಕಾಲೇಜಿನ ಕ್ರೀಡಾಪಟುಗಳಿಗೆ ಮುಖಂಡ ಅರುಣ್ ಬಿ.ಜಿ. ಅವರು ಸಮವಸ್ತ್ರ ಕೊಡಿಸಿದ್ದರು. ಪ್ರಾಂಶುಪಾಲ ಅಶ್ವತ್ಥ್ ಯಾದವ್, ದಾವಣಗೆರೆ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ತಿಪ್ಪೇಸ್ವಾಮಿ, ಕೆಡಿಪಿ ಸದಸ್ಯೆ ದೀಪಿಕಾ ಸತೀಶ್, ಐ.ಕ್ಯೂ.ಎ.ಸಿ.ಯ ಸತೀಶ್ ಎಂ.ಇ, ಕ್ರೀಡಾ ಸಂಚಾಲಕ ಶೈಲೇಂದ್ರ, ತರಬೇತುದಾರ ಸತೀಶ್ ಜಿ, ಸಂಚಾಲಕ ಜಯಪ್ರಕಾಶ್ ಆರ್ ಅವರು ವಿಜೇತ ತಂಡವನ್ನು ಅಭಿನಂದಿಸಿದ್ದಾರೆ.
ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾದರೆ ವಿದ್ಯಾರ್ಥಿಗಳ ಉದ್ಯೋಗಕ್ಕೂ ಅವಕಾಶ ಕಲ್ಪಿಸುತ್ತದೆ. ನಮ್ಮ ಕಾಲೇಜಿನಲ್ಲಿ ತರಬೇತಿ ಉತ್ತಮವಾಗಿದೆ. ಶಾಸಕ ಬಿ.ಜಿ. ಗೋವಿಂದಪ್ಪ ಅವರ ಸಂಪೂರ್ಣ ಸಹಕಾರವಿದೆಅಶ್ವತ್ ಯಾದವ್ ಪ್ರಾಂಶುಪಾಲ
ಹೊಸದುರ್ಗ ಕಾಲೇಜಿನ ವಿದ್ಯಾರ್ಥಿಗಳ ಮೊಗದಲ್ಲಿ ಗೆಲುವಿನ ನಗೆ ಇತ್ತು. ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಠ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದು ಉತ್ತಮ ಸಾಧನೆ ಮಾಡಿದ್ದಾರೆಬಿ.ಜಿ.ಗೋವಿಂದಪ್ಪ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.