ADVERTISEMENT

ಮಂತ್ರ ಮಾಂಗಲ್ಯ ಪರಿಕಲ್ಪನೆ ಸಾಮಾಜಿಕ ಬದುಕಿಗೆ ದಾರಿದೀಪ: ವಡ್ಡಗೆರೆ ನಾಗರಾಜಯ್ಯ

​ಪ್ರಜಾವಾಣಿ ವಾರ್ತೆ
Published 25 ಮೇ 2025, 14:24 IST
Last Updated 25 ಮೇ 2025, 14:24 IST
ಧರ್ಮಪುರ ಸಮೀಪದ ಕೋಡಿಹಳ್ಳಿಯಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಅಡಿ ನಡೆದ ಪಿ.ಶಾಂತಕುಮಾರ್ ಹಾಗೂ ಆರ್. ದೀಪ ವೈವಾಹಿಕ ಬದುಕಿಗೆ ಕಾಲಿಟ್ಟರು
ಧರ್ಮಪುರ ಸಮೀಪದ ಕೋಡಿಹಳ್ಳಿಯಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಅಡಿ ನಡೆದ ಪಿ.ಶಾಂತಕುಮಾರ್ ಹಾಗೂ ಆರ್. ದೀಪ ವೈವಾಹಿಕ ಬದುಕಿಗೆ ಕಾಲಿಟ್ಟರು    

ಧರ್ಮಪುರ: ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಸಾಮಾಜಿಕ ಬದುಕಿಗೆ ದಾರಿ ದೀಪ ಎಂದು ಸಾಹಿತಿ ವಡ್ಡಗೆರೆ ನಾಗರಾಜಯ್ಯ ಹೇಳಿದರು.

ಸಮೀಪದ ಕೋಡಿಹಳ್ಳಿ ಗ್ರಾಮದಲ್ಲಿ ಮಂತ್ರ ಮಾಂಗಲ್ಯದಡಿ ಭಾನುವಾರ ನೆರವೇರಿದ ಪಿ.ಶಾಂತಕುಮಾರ್ ಹಾಗೂ ಆರ್.ದೀಪಾ ಅವರ ಒಲವಿನ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾರ್ಶನಿಕ ಕವಿ ಕುವೆಂಪು ಅವರ ಜಾತ್ಯತೀತ ಪ್ರಜ್ಞೆ ಮತ್ತು ವೈಚಾರಿಕ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದುಬಾರಿ ವೆಚ್ಚದ ಮದುವೆಗಳನ್ನು ಆಯೋಜಿಸಿ ಸಂಕಷ್ಟಗಳನ್ನು ಮೈಮೇಲೆ ಎಳೆದುಕೊಳ್ಳುವ ಪ್ರವೃತ್ತಿ ಕೊನೆಯಾಗಬೇಕು. ಸಂಬಂಧಗಳು ಗಟ್ಟಿಯಾಗಿ ಉಳಿಯಲು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳಬೇಕು ಎಂಬ ಆಲೋಚನೆಯೇ ತಪ್ಪು. ಸಂಬಂಧವನ್ನು ಪರಸ್ಪರ ಗೌರವಿಸುವ ಮೂಲಕ ಬದುಕು ಕಟ್ಟಿಕೊಂಡಲ್ಲಿ ಅಂತಹ ಕುಟುಂಬಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು ಅವರು ತಿಳಿಸಿದರು.

ADVERTISEMENT

ಮಂತ್ರ ಮಾಂಗಲ್ಯ ಸರಳ ವಿವಾಹ ಪರಿಕಲ್ಪನೆ ಜಾತಿ, ಮತ, ಪಂಥಗಳನ್ನು ಮೀರಿದೆ. ಹಣವಂತರು ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಬೇರೆಯವರಿಗೆ ಮಾದರಿಯಾಗಬೇಕು. ಅದ್ದೂರಿ ಮದುವೆ ಮಾಡಿ ಸಾಲದ ಶೂಲಕ್ಕೆ ಬೀಳುವುದು ತಪ್ಪಬೇಕು. ಆಡಂಬರದ ಮದುವೆಗಳಿಂದ ಸಾಂಸಾರಿಕ ಬದುಕು ಸುಗಮವಾಗಿ ಸಾಗುತ್ತದೆ ಎಂದು ಹೇಳಲಾಗದು. ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿಯವರು ಕೂಡ ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಬದುಕಿಗೆ ಕಾಲಿಟ್ಟು, ಯಶಸ್ವಿಯಾಗಿ ಸಾಂಸಾರಿಕ ಜೀವನ ನಡೆಸಿದ್ದರು. ಸರಳ ತತ್ವಗಳನ್ನು ಅನುಕರಣೆ ಮಾಡುವ ಮೂಲಕ ಯುವ ಸಮುದಾಯ ಮಾದರಿ ಬದುಕು ಕಟ್ಟಿಕೊಳ್ಳಬೇಕು ಎಂದು ಮಧುಗಿರಿಯ ಮುಖ್ಯಶಿಕ್ಷಕ ರಾಜಣ್ಣ ಮನವಿ ಮಾಡಿದರು.

ಶಿವಶಂಕರ್ ಸೀಗೆಹಟ್ಟಿ ಮಾತನಾಡಿ, ಗೊಡ್ದು ಸಂಪ್ರದಾಯಗಳಿಗೆ ಪೂರ್ಣವಿರಾಮ ಹಾಕಿ, ವೈಚಾರಿಕ ತಳಹದಿಯ ಸರಳ ವಿವಾಹಕ್ಕೆ ಒತ್ತು ನೀಡಬೇಕು. ಪ್ರತಿ ಗ್ರಾಮದಲ್ಲೂ ವಿದ್ಯಾವಂತ ಯುವಕರು ಇಂತಹ ಸರಳ ವಿವಾಹ ಮಾಡಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಕೋಡಿಹಳ್ಳಿ ಸಂತೋಷ್, ಗೀತಾ, ದ್ವಾರನಕುಂಟೆ ಲಕ್ಷ್ಮಣ, ಜಯರಾಂ, ಸಕ್ಕರ ನಾಗರಾಜ್, ಭೂತರಾಜು, ಶಶಿಧರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.