ADVERTISEMENT

ಸೋಲಿನ ಭೀತಿಯಿಂದ ಚುನಾವಣೆ ಮುಂದೂಡಿಕೆ: ಮಾಜಿ ಸಚಿವ ಎಚ್‌.ಆಂಜನೇಯ

ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಆಯ್ಕೆಯಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 15:34 IST
Last Updated 3 ಅಕ್ಟೋಬರ್ 2021, 15:34 IST
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಭಾನುವಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಆಯ್ಕೆ ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು
ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಭಾನುವಾರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಆಯ್ಕೆ ಸಭೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿದರು   

ಹಿರೇಗುಂಟನೂರು (ಚಿತ್ರದುರ್ಗ): ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸೋಲಿನ ಭೀತಿ ಬಿಜೆಪಿಗೆ ಕಾಡುತ್ತಿದೆ. ಹೀಗಾಗಿ ಚುನಾವಣೆ ಮುಂದೂಡಿದೆ ಎಂದು ಮಾಜಿ ಸಚಿವ ಎಚ್‌.ಆಂಜನೇಯ ದೂರಿದರು.

ತಾಲ್ಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ ವತಿಯಿಂದಭಾನುವಾರ ಆಯೋಜಿಸಿದ್ದ 75ನೇ ವರ್ಷದ ಸ್ವಾತಂತ್ರ್ಯ ಸಂಭ್ರಮೋತ್ಸವ, ಮಹಾತ್ಮಗಾಂಧಿ ಗ್ರಾಮ ಸ್ವರಾಜ್ಯ ಹಾಗೂ ಪ್ರಾಜೆಕ್ಟ್ ಪ್ರಜಾಪ್ರತಿನಿಧಿ ಆಯ್ಕೆ ಸಭೆಯಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಶೇ 70ರಷ್ಟು ಕಾಂಗ್ರೆಸ್‌ ಬೆಂಬಲಿತರು ಗ್ರಾಮ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಹೀಗಾಗಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಗೆಲ್ಲುವುದು ಕಾಂಗ್ರೆಸ್‌ಗೆ ಕಷ್ಟದ ಕೆಲಸವಲ್ಲ. ಆದರೂ ಕಾರ್ಯಕರ್ತರು ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈಗಿನಿಂದಲೇ ಗೆಲುವಿಗಾಗಿ ಶ್ರಮಿಸಬೇಕಿದೆ’ ಎಂದರು.

ADVERTISEMENT

‘ಕಾಂಗ್ರೆಸ್ ಈ ಹಿಂದೆ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿದ್ದ ಸುಮಾರು ₹ 75 ಸಾವಿರ ಕೋಟಿ ಸಾಲ ಮನ್ನ ಮಾಡಿದೆ. ರೈತ ವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರು ಹಗಲಿರುಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಪಕ್ಷ ಬೆಂಬಲಿಸುತ್ತಿದೆ. ಆದರೆ, ಪ್ರಧಾನಿ ನರೇಂದ್ರಮೋದಿ ಗಮನಹರಿಸದೆ, ರೈತ ವಿರೋಧಿ ಆಡಳಿತ ನಡೆಸುತ್ತಿದ್ದಾರೆ’ ಎಂದು ದೂರಿದರು.

ಆಂಜನೇಯ–ಮಂಜುನಾಥ್‌ ವಾಗ್ವಾದ

ಭೀಮಸಮುದ್ರದ ಜಿ.ಎಸ್‌.ಮಂಜುನಾಥ್‌ ಹಾಗೂ ಮಾಜಿ ಸಚಿವ ಎಚ್‌.ಆಂಜನೇಯ ಅವರು ವೇದಿಕೆಯಲ್ಲಿಯೇ ವಾಗ್ವಾದ ನಡೆಸಿದರು. ಇದರಿಂದ ಸಭೆಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಆಂಜನೇಯ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಜಿ.ಎಸ್‌.ಮಂಜುನಾಥ್‌ ಅಸಮಾಧಾನ ಹೊರಹಾಕಿದರು. ಪೋಡಿಯಂ ಬಳಿಗೆ ಬರುತ್ತಿದ್ದ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು ತಡೆಯಲು ಪ್ರಯತ್ನಿಸಿದರು.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಮಗೆ ಟಿಕೆಟ್‌ ತಪ್ಪಿಸಲಾಗಿದೆ ಎಂದು ಜಿ.ಎಸ್‌.ಮಂಜುನಾಥ್‌ ಕಿಡಿಕಾರಿದರು. ಇಬ್ಬರು ನಾಯಕರ ಬೆಂಬಲಿಗರು ವೇದಿಕೆಗೆ ಧಾವಿಸಿದಾಗ ಗೊಂದಲ ಸೃಷ್ಟಿಯಾಯಿತು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಕಾರ್ಯಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಮಾಜಿ ಶಾಸಕ ಎ.ವಿ.ಉಮಾಪತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜು, ಮುಖಂಡರಾದ ಹನುಮಲಿ ಷಣ್ಮುಖ, ಜಿ.ಎಸ್.ಮಂಜುನಾಥ್, ಓ.ಶಂಕರ್, ಗೀತಾನಂದಿನಿಗೌಡ, ಲಕ್ಷ್ಮೀಕಾಂತ್, ಪ್ರಕಾಶ್, ನರಸಿಂಹರಾಜು, ಶಶಿಕಲಾ, ಡಿ.ಎನ್.ಮೈಲಾರಪ್ಪ, ರಾಜ್‌ಕುಮಾರ್ ಇದ್ದರು.

***

ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರ ಜನರ ಹಿತ ಕಾಯದೇ ಭ್ರಷ್ಟಾಚಾರದಲ್ಲಿಯೇ ಮುಳುಗಿದೆ. ಪ್ರತಿಯೊಬ್ಬರು ಒಗ್ಗಟ್ಟಿನಿಂದ ಪಕ್ಷವನ್ನು ಪುನಾ ಅಧಿಕಾರಕ್ಕೆ ತಂದು ಜನರ ಕಲ್ಯಾಣ ಮಾಡಲು ಮುಂದಾಗಬೇಕಿದೆ.

ಬಿ.ಎನ್.ಚಂದ್ರಪ್ಪ, ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.