ADVERTISEMENT

ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧ: ಸಚಿವ ಡಿ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 20 ಮೇ 2024, 13:39 IST
Last Updated 20 ಮೇ 2024, 13:39 IST
ಹಿರಿಯೂರು ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು
ಹಿರಿಯೂರು ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟಿಸಿದರು   

ಹಿರಿಯೂರು: ಹಳೆ ಪಿಂಚಣಿ ಯೋಜನೆ ಹಾಗೂ 7ನೇ ವೇತನ ಆಯೋಗದ ವರದಿ ಜಾರಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ನಗರದ ನೆಹರೂ ಮೈದಾನದಲ್ಲಿರುವ ಎ.ಕೃಷ್ಣಪ್ಪ ರೋಟರಿ ಸಭಾ ಭವನದಲ್ಲಿ ಕಾಂಗ್ರೆಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ವಿಧಾನಸಭೆ ಚುನಾವಣೆ ಸಮಯದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಜನರಿಗೆ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದೆ. ಬಾಯಿ ಬಿಟ್ಟರೆ ಬರೀ ಸುಳ್ಳು ಹೇಳುವ ಬಿಜೆಪಿಯವರು ಯಾವುದೇ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ. ಮಕ್ಕಳಿಗೆ ಜ್ಞಾನದ ದಾಸೋಹ ಉಣಬಡಿಸುವ ಶಿಕ್ಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ಒಂದು ಮತವೂ ಕಾಂಗ್ರೆಸ್ ಬಿಟ್ಟು ಬೇರೆಯವರಿಗೆ ಬೀಳದಂತೆ ಎಚ್ಚರ ವಹಿಸಬೇಕು. ಈ ಬಾರಿ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ’ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.

ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ‘ಹಿಂದಿನ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯಾವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ. ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಶಿಕ್ಷಕರಿಗೆ ಸ್ಪಂದಿಸಲಿಲ್ಲ. ಇಲ್ಲಿಯವರೆಗೆ ಶಿಕ್ಷಕ ಸಮೂಹದ ಯಾವ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದಾರೆ ಎಂಬುದನ್ನು ಅವರು ಹೇಳಬೇಕು’ ಎಂದು ಪ್ರಶ್ನಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹೊಸ ಪಿಂಚಣಿ ನೀತಿಯಿಂದಾಗಿ ಕೆಲವು ನೌಕರರಿಗೆ ನಿವೃತ್ತಿ ನಂತರ ಔಷಧಕ್ಕೂ ಹಣವಿಲ್ಲದ ದುಃಸ್ಥಿತಿ ಬಂದಿದೆ. 7ನೇ ವೇತನ ಆಯೋಗ ವರದಿ ಜಾರಿ ಹಾಗೂ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕಾಂಗ್ರೆಸ್ ಬದ್ಧವಾಗಿದ್ದು, ಈ ಬಾರಿ ಕಾಂಗ್ರೆಸ್‌ಗೆ ಮತ ಚಲಾಯಿಸಿ ಒಂದು ಅವಕಾಶ ಕಲ್ಪಿಸಿ’ ಎಂದು ಮನವಿ ಮಾಡಿದರು.

ಮಾಜಿ ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ‘ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ 18 ವರ್ಷ ಆಡಳಿತ ನಡೆಸಿದ ಬಿಜೆಪಿ ಅಭ್ಯರ್ಥಿ ಶಿಕ್ಷಕರು ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುವಾಗ ಸಮಸ್ಯೆಗಳಿಗೆ ಸ್ಪಂದಿಸಲಿಲ್ಲ. ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲಿಲ್ಲ. ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದು, ಸಮಸ್ಯೆಗಳನ್ನು ಈಡೇರಿಸಿದೆ. ಶಿಕ್ಷಕರು ಅದನ್ನು ಅರಿತು ಮತ ಚಲಾಯಿಸಬೇಕು’ ಎಂದರು.

ಕಾರ್ಮಿಕ ಮಂಡಳಿ ರಾಜ್ಯ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ‘ಸುಭದ್ರ ದೇಶ ಕಟ್ಟುವುದು ಕಾಂಗ್ರೆಸ್ ಗುರಿ. ಆದರೆ, ಬಿಜೆಪಿಯವರು ಮಾತೆತ್ತಿದರೆ ಸುಳ್ಳು ಹೇಳುತ್ತಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ರಾಮಮಂದಿರವನ್ನು ಬುಲ್ಡೋಜರ್‌ನಿಂದ ಕೆಡವುತ್ತಾರೆ ಎಂದು ಸ್ವತಃ ಪ್ರಧಾನಿಯವರೇ ಸುಳ್ಳು ಹೇಳುತ್ತಿರುವುದು ದುರದೃಷ್ಟಕರ’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಬಿ.ಪಿ.ತಿಪ್ಪೇಸ್ವಾಮಿ, ಉಪನ್ಯಾಸಕ ಷಫೀವುಲ್ಲಾ ಮಾತನಾಡಿದರು. ಕೆಪಿಸಿಸಿ ಉಸ್ತುವಾರಿ ರಾಮಲಿಂಗಯ್ಯ, ಅಮೃತೇಶ್ವರಸ್ವಾಮಿ, ಖಾದಿ ರಮೇಶ್, ಶಶಿಕಲಾ ಸುರೇಶಬಾಬು, ಆರ್.ನಾಗೇಂದ್ರನಾಯ್ಕ, ಗೀತಾ ನಾಗ್‌ಕುಮಾರ್, ಗೀತಾ ನಂದಿನಿಗೌಡ, ಬಿ.ಎಚ್.ಮಂಜುನಾಥ್, ಜೆ.ಆರ್. ಸುಜಾತಾ, ಶಿವರಂಜಿನಿ, ಕಲ್ಲಹಟ್ಟಿ ಹರೀಶ್, ಗುಡೇಶ್ ಕುಮಾರ್, ಮಹೇಶ್, ನಾಗರಾಜ್, ಮನೋಹರ್, ಮಹೇಶ್, ರಂಗಸ್ವಾಮಿ, ಸೌಮ್ಯ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.