ADVERTISEMENT

ಒಂದೆರಡು ದಿನದಲ್ಲಿ ಕಾಂಗ್ರೆಸ್‌ ಸೇರ್ಪಡೆ: ಎನ್‌.ವೈ.ಗೋಪಾಲಕೃಷ್ಣ ಸ್ಪಷ್ಟನೆ

ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 7:19 IST
Last Updated 2 ಏಪ್ರಿಲ್ 2023, 7:19 IST
ಎನ್‌.ವೈ.ಗೋಪಾಲಕೃಷ್ಣ
ಎನ್‌.ವೈ.ಗೋಪಾಲಕೃಷ್ಣ   

ಚಿತ್ರದುರ್ಗ: ‘ಎರಡು ವರ್ಷಗಳಿಂದ ಕಾಂಗ್ರೆಸ್‌ ನಾಯಕರು ಪಕ್ಷಕ್ಕೆ ಆಹ್ವಾನಿಸುತ್ತಿದ್ದಾರೆ. ಟಿಕೆಟ್‌ ನೀಡುವ ಭರವಸೆ ನೀಡಿದ್ದು, ಒಂದೆರಡು ದಿನದಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುತ್ತೇನೆ’ ಎಂದು ಮಾಜಿ ಶಾಸಕ ಎನ್‌.ವೈ.ಗೋಪಾಲಕೃಷ್ಣ ಖಚಿತಪಡಿಸಿದರು.

‘ವಯಸ್ಸಿನ ಕಾರಣಕ್ಕೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೆ. ಆದರೆ, ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರು ನಿರಂತರ ಮನವಿ ಮಾಡಿದರು. ಜತೆಗೆ ಮೊಳಕಾಲ್ಮುರು ಕ್ಷೇತ್ರದ ಜನರೂ ರಾಜಕೀಯ ಬಿಡಬಾರದು ಎಂದು ಒತ್ತಡ ಹಾಕಿ ಕ್ಷೇತ್ರಕ್ಕೆ ಆಹ್ವಾನಿಸಿದ್ದಾರೆ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘25 ವರ್ಷ ಮೊಳಕಾಲ್ಮುರು ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಳ್ಳಾರಿ ಗ್ರಾಮಾಂತರ ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕನಾಗಿ ಜನರ ಸೇವೆ ಮಾಡಿದ್ದೇನೆ. ಪುನಃ ತವರು ನೆಲಕ್ಕೆ ವಾಪಸ್ಸಾಗುತ್ತಿದ್ದೇನೆ. ಇದು ಕ್ಷೇತ್ರದ ಜನರ ನಿರ್ಧಾರ’ ಎಂದರು.

ADVERTISEMENT

‘ಇದೀಗ ಕಾಲ ಕೂಡಿ ಬಂದಿದ್ದು, ನಾನು ಬೆಳೆದ ಮನೆಗೆ ಹಿಂತಿರುಗುತ್ತಿದ್ದೇನೆ. ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಇಂದು ಸ್ವೀಕೃತವಾಗಿದೆ. ಕಾಂಗ್ರೆಸ್‌ ಪಕ್ಷದ ನಾಯಕರು ಇನ್ನೆರಡು ದಿನಗಳಲ್ಲಿ ಕರೆ ಮಾಡುವ ಸಾಧ್ಯತೆಯಿದ್ದು, ಕೂಡಲೇ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ. ಎರಡನೇ ಪಟ್ಟಿಯಲ್ಲಿ ಸಂಭ್ಯಾವ್ಯ ಅಭ್ಯರ್ಥಿಯಾಗಿ ನನ್ನ ಹೆಸರು ಬರುವ ಸಾಧ್ಯತೆ ಇದೆ. ಅವಕಾಶ ನೀಡಿದರೆ ಮೊಳಕಾಲ್ಮುರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

‘ನಾನು ರಾಜಕೀಯ ಬಂದಾಗ ಯೋಗೀಶ್‌ ಬಾಬು ಚಿಕ್ಕ ಹುಡುಗ. ನನಗೆ ಗೋ ಬ್ಯಾಕ್ ಹೇಳೋಕೆ ಅವರೆಲ್ಲ ಯಾರು? ಟಿಕೆಟ್‌ ಕಾರಣಕ್ಕೆ ಯೋಗೀಶ್ ಬಾಬು ಎಲ್ಲೆಂದರಲ್ಲಿ ಸ್ವಾಭಿಮಾನಿ ಕ್ಷೇತ್ರದ ಮರ್ಯಾದೆ ತೆಗೆಯುತ್ತಿದ್ದಾರೆ. ನನಗೆ ಟಿಕೆಟ್ ಕೊಟ್ಟಿಲ್ಲ ಅಂತ ಕಳೆದ ಬಾರಿ ನಾನು ಹಾಗೆ ಬಟ್ಟೆ ಹರಿದುಕೊಂಡಿಲ್ಲ. ನಾನು ಬೇರೆ ಊರಿನವನಲ್ಲ, ಮೊಳಕಾಲ್ಮುರು ಕ್ಷೇತ್ರದವನಾಗಿದ್ದು, ಇಲ್ಲಿಂದಲೇ ಸ್ಪರ್ಧೆ ಮಾಡಿ ಗೆಲ್ಲುವೆ’ ಎಂದರು.

ಬಿಜೆಪಿಯಲ್ಲಿ ನನಗಾದ ನೋವಿನ ಬಗ್ಗೆ ವರಿಷ್ಠರ ಬಳಿ ಹೇಳಿಕೊಂಡಿದ್ದೆ. ಆದರೆ ಯಾರೂ ಸ್ಪಂದಿಸಲಿಲ್ಲ. ಬಿಜೆಪಿಯಿಂದ ತೊಂದರೆ ಆಗಿಲ್ಲ, ಆದರೆ ಪಕ್ಷದಲ್ಲಿನ ಕೆಲವರಿಂದ ತೊಂದರೆ ಆಗಿದೆ.
–ಎನ್‌.ವೈ.ಗೋಪಾಲಕೃಷ್ಣ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.