ADVERTISEMENT

ಮಾದಿಗ ಸಮುದಾಯದ ಮುಖಂಡರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ

ಮಾದಿಗ ಸಮುದಾಯದ ಕಾಂಗ್ರೆಸ್‌ ಮುಖಂಡರ ಕೋರಿಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 15:00 IST
Last Updated 5 ಆಗಸ್ಟ್ 2021, 15:00 IST
ಕಾಂಗ್ರೆಸ್‌ನ ಎಡಗೈ ಸಮುದಾಯದ ಮುಖಂಡರ ನಿಯೋಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು
ಕಾಂಗ್ರೆಸ್‌ನ ಎಡಗೈ ಸಮುದಾಯದ ಮುಖಂಡರ ನಿಯೋಗ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿತು   

ಚಿತ್ರದುರ್ಗ: ಪರಿಶಿಷ್ಟ ಜಾತಿಯಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ ಮಾದಿಗ ಸಮುದಾಯದ ಮುಖಂಡರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ (ಕೆಪಿಸಿಸಿ) ಕಾರ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಹಲವು ನಾಯಕರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಮಾಜಿ ಸಚಿವ ಎಚ್.ಆಂಜನೇಯ, ಆರ್.ಬಿ.ತಿಮ್ಮಾಪುರ, ರಾಜ್ಯಸಭೆ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸದಸ್ಯ ಕೆ.ಬಿ.ಕೃಷ್ಣಮೂರ್ತಿ ನೇತೃತ್ವದ ನಿಯೋಗ ದೆಹಲಿಗೆ ಭೇಟಿ ನೀಡಿ ಕೋರಿಕೆ ಸಲ್ಲಿಸಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.

‘ಮಾದಿಗ ಸಮುದಾಯ ಕರ್ನಾಟಕದಲ್ಲಿ ದೊಡ್ಡ ಸಂಖ್ಯೆಯಲ್ಲಿದೆ. ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ವಿಶೇಷ ಯೋಜನೆಗಳು ಜಾರಿಗೊಳಿಸಿದೆ. ಕೋಮುವಾದಿ ಪಕ್ಷ ತಪ್ಪು ಸಂದೇಶ ರವಾನಿಸಿ ಸಮುದಾಯದ ಮತ ಸೆಳೆಯಲು ಪ್ರಯತ್ನಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಸಮುದಾಯದ ನಾಯಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಹಾಗೂ ಪದಾಧಿಕಾರಿಗಳ ನೇಮಕಾತಿಯಲ್ಲಿ ಹೆಚ್ಚು ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಸಮುಯದಾಯದ ಯುವಕರಿಗೆ ಆಮಿಷವೊಡ್ಡಿ ಕೋಮುವಾದಿ ಪಕ್ಷ ತನ್ನಡೆಗೆ ಸೆಳೆಯುವ ಪ್ತಯತ್ನ ಮಾಡುತ್ತಿದೆ. ಆದರೂ, ಸಮುದಾಯದ ಶೇ 95ರಷ್ಟು ಜನರು ಕಾಂಗ್ರೆಸ್ ನಿಷ್ಠೆ ಬಿಟ್ಟಿಲ್ಲ. ಸಮುದಾಯದ ಬದ್ಧತೆ ಗುರುತಿಸಿ ಸಾಮಾಜಿಕ ನ್ಯಾಯದಡಿ ಪ್ರಮುಖ ಹುದ್ದೆಗಳಲ್ಲಿ ಸ್ಥಾನ ಕಲ್ಪಿಸಬೇಕು’ ಎಂದು ಮನವಿ ಮಾಡಿರುವುದಾಗಿ ಮಾಜಿ ಸಚಿವ ಎಚ್‌.ಆಂಜನೇಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.