ADVERTISEMENT

ಚಿತ್ರದುರ್ಗ: ಸೋಲಿಗೆ ಕಾಂಗ್ರೆಸ್‌ ಸಾಮೂಹಿಕ ಹೊಣೆ

ಬೆನ್ನು ತಿರುಗಿಸಿ ಓಡಿ ಹೋಗುವುದಿಲ್ಲ: ಬಿ.ಎನ್‌.ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2019, 9:26 IST
Last Updated 24 ಮೇ 2019, 9:26 IST
ಬಿ.ಎನ್. ಚಂದ್ರಪ್ಪ
ಬಿ.ಎನ್. ಚಂದ್ರಪ್ಪ   

ಚಿತ್ರದುರ್ಗ: ಲೋಕಸಭಾ ಚುನಾವಣೆಯ ಚಿತ್ರದುರ್ಗ ಕ್ಷೇತ್ರದ ಸೋಲಿಗೆ ಕಾಂಗ್ರೆಸ್‌ ಜಿಲ್ಲಾ ನಾಯಕರು ಸಾಮೂಹಿಕ ಹೊಣೆ ಹೊತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯ ಗೆಲುವು ಅನಿರೀಕ್ಷಿತ ಹಾಗೂ ಅಚ್ಚರಿಯ ಫಲಿತಾಂಶ ಎಂದು ವಿಶ್ಲೇಷಣೆ ಮಾಡಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಮಾಲೀಕರು. ಮತದಾರರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇನೆ. ಸೋಲಿಗೆ ಹೆದರಿ, ಬೆನ್ನು ಹಾಕಿ ಓಡಿ ಹೋಗುವುದಿಲ್ಲ. ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತೇವೆ. ಚಿತ್ರದುರ್ಗದಲ್ಲೇ ನೆಲೆಸಿ ಪಕ್ಷ ಸಂಘಟನೆ ಮಾಡುತ್ತೇನೆ’ ಎಂದು ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕ್ಷೇತ್ರದ ಸಂಸದನಾಗಿ ಐದು ವರ್ಷ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರ ರೀತಿಯಲ್ಲಿ ಪ್ರತಿ ಹಳ್ಳಿ ಸುತ್ತಿದ್ದೇನೆ. ಮತದಾರರು ಮತ್ತೊಮ್ಮೆ ಕೈಹಿಡಿಯಬಲ್ಲರು ಎಂಬ ಆತ್ಮವಿಶ್ವಾಸವಿತ್ತು. ಸೋಲಿನ ಅಳುಕು, ಆತಂಕ ಕೊಂಚವೂ ಇರಲಿಲ್ಲ. ಫಲಿತಾಂಶ ನಿರೀಕ್ಷೆ ಮೀರಿ ಬದಲಾಗಿದ್ದು ಹೇಗೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ADVERTISEMENT

‘ಸಂಸದರ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಿದ್ದೆ. ಕಾಂಗ್ರೆಸ್‌ ತತ್ವ ಹಾಗೂ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡಿದ್ದೆ. ಪಕ್ಷದ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಸಾಕಷ್ಟು ದುಡಿದಿದ್ದರು. ಮಿತ್ರ ಪಕ್ಷ ಜೆಡಿಎಸ್‌ ಮುಖಂಡರು ಸಂಪೂರ್ಣ ಸಹಕಾರ ನೀಡಿದ್ದರು. ಸೋಲುತ್ತೇನೆ ಎಂಬ ಸಣ್ಣ ಅನುಮಾನವೂ ಇರಲಿಲ್ಲ’ ಎಂದರು.

‘ಕ್ಷೇತ್ರ ವ್ಯಾಪ್ತಿಯ ಪಕ್ಷ ಸಂಘಟನೆಯಲ್ಲಿ ಕಾಂಗ್ರೆಸ್‌ ವಿಫಲವಾಗಿಲ್ಲ. ಚುನಾವಣೆ ಘೋಷಣೆಗೂ ಮುನ್ನವೇ ವ್ಯವಸ್ಥಿತ ಪ್ರಚಾರ ನಡೆಸಿದೆವು. ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಮೈಮರೆತು ಕುಳಿತುಕೊಳ್ಳಲಿಲ್ಲ. ಸೋಲು ಮತ್ತು ಗೆಲುವಿನ ಬಗ್ಗೆ ಪಕ್ಷ ವಿಶ್ಲೇಷಣೆ ಮಾಡಲಿದೆ’ ಎಂದು ಹೇಳಿದರು.

ಮಾಜಿ ಶಾಸಕರಾದ ಉಮಾಪತಿ, ಡಿ.ಸುಧಾಕರ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಫಾತ್ಯರಾಜನ್‌, ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‌ ಬಾಬು, ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್‌.ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.