ADVERTISEMENT

‘ಪರ್ಸಂಟೇಜ್‌’ ಶಾಸಕರು ಇರುವುದು ಬಿಜೆಪಿಯಲ್ಲೇ: ಕಟೀಲ್‌ಗೆ‌ ಕಾಂಗ್ರೆಸ್ ತಿರುಗೇಟು

ನಳಿನ್‌ ಕುಮಾರ್‌ ಕಟೀಲ್‌ ಆರೋಪಕ್ಕೆ ಕಾಂಗ್ರೆಸ್ ಜಿಲ್ಲಾ ಘಟಕ‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 11:48 IST
Last Updated 29 ಜನವರಿ 2021, 11:48 IST
ಎಂ.ಕೆ.ತಾಜ್‌ಪೀರ್‌
ಎಂ.ಕೆ.ತಾಜ್‌ಪೀರ್‌   

ಚಿತ್ರದುರ್ಗ: ಅಭಿವೃದ್ಧಿ ಕಾಮಗಾರಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ‘ಪರ್ಸಂಟೇಜ್‌’ ಪಡೆಯುವ ಶಾಸಕರು ಇರುವುದು ಬಿಜೆಪಿಯಲ್ಲಿಯೇ ಹೊರತು ಕಾಂಗ್ರೆಸ್‌ನಲ್ಲಿ ಅಲ್ಲ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌ ತಿರುಗೇಟು ನೀಡಿದರು.

‘ಕಾಂಗ್ರೆಸ್‌ ಮತ್ತೊಂದು ಹೆಸರೇ ಭ್ರಷ್ಟಾಚಾರ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಆರೋಪಕ್ಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಪ್ರತಿಕ್ರಿಯೆ ನೀಡಿದರು.

‘ಪರ್ಸಂಟೇಜ್‌ ಪಡೆಯುವ ಶಾಸಕರನ್ನು ಪಕ್ಕದಲ್ಲೇ ಇಟ್ಟುಕೊಂಡು ಕಾಂಗ್ರೆಸ್‌ ಬಗ್ಗೆ ಮಾತನಾಡಿದ್ದು ವ್ಯಂಗ್ಯವಾಗಿದೆ. ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಲು ಇಂತಹ ಶಾಸಕರೇ ಕಾರಣರಾಗಿದ್ದಾರೆ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರನ್ನು ವಿಚಾರಿಸಿದರೆ ಸತ್ಯ ಬಯಲಿಗೆ ಬರುತ್ತದೆ’ ಎಂದರು.

ADVERTISEMENT

‘ಚೆಕ್‌ ಮೂಲಕ ಲಂಚ ಪಡೆದು ಜೈಲಿಗೆ ಹೋಗಿಬಂದವರು ಬಿಜೆಪಿಯಲ್ಲೇ ಇದ್ದಾರೆ. ಆರ್‌ಟಿಜಿಎಸ್‌, ಡಿಡಿ ರೂಪದಲ್ಲಿಯೂ ಲಂಚ ಪಡೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಕೋವಿಡ್‌ ನೆಪದಲ್ಲಿ ಭ್ರಷ್ಟಾಚಾರ ಎಗ್ಗಿಲ್ಲದೇ ನಡೆದಿದೆ. ಹಣ ಇದ್ದವರಿಗಷ್ಟೇ ಸಚಿವ ಸ್ಥಾನ ಸಿಗುತ್ತಿದೆ ಎಂಬ ಸತ್ಯವನ್ನು ಬಸವರಾಜ ಪಾಟೀಲ ಯತ್ನಾಳ್‌ ಹೇಳಿರುವುದು ಬಿಜೆಪಿಯಲ್ಲಿರುವ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಿದೆ’ ಎಂದು ದೂರಿದರು.

‘ಕಾರ್ಯಕಾರಿಣಿಯಲ್ಲಿ ಪಕ್ಷದ ಕಾರ್ಯಕ್ರಮ, ಕೊಡುಗೆಗಳ ಬಗ್ಗೆ ಹೇಳಿಕೊಳ್ಳುವ ಬದಲಿಗೆ ಕಾಂಗ್ರೆಸ್‌ ಅವಹೇಳನ ಮಾಡಿ ಜನರ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ಕಾಂಗ್ರೆಸ್‌ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸುವ ಕೀಳು ಮಟ್ಟದ ರಾಜಕೀಯಕ್ಕೆ ಬಿಜೆಪಿ ಕೈಹಾಕಿದೆ. ಟೀಕೆ, ಅಪಪ್ರಚಾರ ಮಾಡುವುದನ್ನು ಬಿಟ್ಟು ಇನ್ನಾದರೂ ಪ್ರಾಮಾಣಿಕವಾಗಿ ಕೆಲಸ ಮಾಡಿ’ ಎಂದರು.

‘ಖಲಿಸ್ತಾನಿ ಭಯೋತ್ಪಾದನೆಯನ್ನು ದೇಶದಲ್ಲಿ ಮಟ್ಟ ಹಾಕಿದ್ದು ಕಾಂಗ್ರೆಸ್‌. ಇಂದಿರಾ ಗಾಂಧಿ ಅವರು ಕೈಗೊಂಡ ಕಠಿಣ ಕ್ರಮಗಳ ಬಗ್ಗೆ ದೇಶಕ್ಕೆ ಗೊತ್ತಿದೆ. ವಿನಾ ಕಾರಣ ಖಲಿಸ್ತಾನಿ ಜೊತೆ ಕಾಂಗ್ರೆಸ್‌ ತಳುಕು ಹಾಕುವುದು ಖಂಡನೀಯ. ರೈತರ ಹೋರಾಟವನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಹೊರತು ಖಲಿಸ್ತಾನಿಗಳನ್ನಲ್ಲ. ದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿಂದೆ ಕೇಂದ್ರ ಸರ್ಕಾರದ ಕೈವಾಡ ಇರುವುದು ಬೆಳಕಿಗೆ ಬಂದಿದೆ. ರೈತರ ಹೋರಾಟದ ದಿಕ್ಕು ತಪ್ಪಿಸಲು ಬಿಜೆಪಿ ಸಂಚು ನಡೆಸಿದೆ’ ಎಂದು ಆರೋಪಿಸಿದರು.

ಕಾಮಗಾರಿ ಗುಣಮಟ್ಟ ಪ್ರಶ್ನೆ
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ನಾಲ್ಕು ಬಾರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಕಾಳಜಿ ಇಲ್ಲ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಎಸ್.ಮಂಜುನಾಥ್‌ ಆರೋಪಿಸಿದರು.

‘ಕಾಮಗಾರಿಗಳು ಯೋಜನಾಬದ್ಧವಾಗಿ ನಡೆಯುತ್ತಿಲ್ಲ. ಸಿ.ಸಿ. ರಸ್ತೆಯ ಗುಣಮಟ್ಟ ಚೆನ್ನಾಗಿಲ್ಲ. ಚರಂಡಿಗಳನ್ನು ಸಿಮೆಂಟ್‌ ಇಟ್ಟಿಗೆಯಲ್ಲಿ ನಿರ್ಮಿಸಲಾಗುತ್ತಿದೆ. ಜನರ ತೆರಿಗೆ ಹಣ ಅನಗತ್ಯವಾಗಿ ಪೋಲಾಗುತ್ತಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಹಣ ನೀಡುವಂತೆ ಬಿಜೆಪಿ ಶಾಸಕರು ಕೋರಿದ್ದಾರೆ. ಹಾಗಾದರೆ ಅನುದಾನ ಬಿಡುಗಡೆ ಮಾಡಿರುವುದಾಗಿ ಈವರೆಗೆ ಹೇಳಿದ್ದು ಸುಳ್ಳೇ’ ಎಂದು ಪ್ರಶ್ನಿಸಿದರು.

‘‌ಬೆಂಕಿ ಹಚ್ಚಿದ್ದು ಬಿಜೆಪಿ’
ರಾಮ ಜನ್ಮ ಭೂಮಿ ಸೇರಿದಂತೆ ಹಲವು ವಿಚಾರದಲ್ಲಿ ದೇಶಕ್ಕೆ ಬೆಂಕಿ ಹಚ್ಚಿದ್ದು ಬಿಜೆಪಿ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಕೆ.ಎಂ.ಹಾಲೇಶ್‌ ದೂರಿದರು.

‘ಶಿರಾ ಉಪಚುನಾವಣೆ ಸಂದರ್ಭದಲ್ಲಿ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮ ಘೋಷಣೆ ಮಾಡಿತು. ಅಧ್ಯಕ್ಷರ ನೇಮಕ, ಅನುದಾನ ಹಂಚಿಕೆ ಮಾಡದೇ ವಂಚಿಸಿತು. ಸಾಮಾಜಿಕ ನ್ಯಾಯ ಒದಗಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹಿಂದುಳಿದ ವರ್ಗದ ನಾಯಕರನ್ನು ಬಿಜೆಪಿ ತಾತ್ಸಾರ ಮಾಡುತ್ತಿದೆ. ಸ್ವಾಭಿಮಾನ ಇದ್ದರೆ ಹಿಂದುಳಿದ ವರ್ಗದ ನಾಯಕರು ಬಿಜೆಪಿ ತೊರೆಯಲಿ’ ಎಂದು ಸವಾಲು ಎಸೆದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ಮುಖಂಡರಾದ ಡಿ.ಎನ್‌.ಮೈಲಾರಪ್ಪ, ಲಕ್ಷ್ಮೀಕಾಂತ ಇದ್ದರು.

***

ಚಿತ್ರದುರ್ಗ ನಗರದಲ್ಲಿ ಒಳಚರಂಡಿ ಕಾಮಗಾರಿ (ಯುಜಿಡಿ) ದಶಕದಿಂದ ನಡೆಯುತ್ತಿದೆ. ಇದು ಪೂರ್ಣಗೊಳ್ಳದ ಪರಿಣಾಮ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಇದರಲ್ಲಿ ದೊಡ್ಡ ಹಗರಣ ನಡೆದಿದೆ.
–ಎಂ.ಕೆ.ತಾಜ್‌ಪೀರ್‌,ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.