
ಚಿತ್ರದುರ್ಗ: ‘ದೇಶದ ಗ್ರಾಮೀಣ ಜನರ ಜೀವನಾಡಿಯಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದು ಮಾಡಿ ವಿ.ಬಿ ಜಿ ರಾಮ್ ಜಿ ಕಾರ್ಯಕ್ರಮ ಜಾರಿಗೊಳಿಸಿರುವುದು ಖಂಡನೀಯ. ಕೇಂದ್ರ ಸರ್ಕಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಗೆ ಅವಮಾನ ಮಾಡಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಾಗ್ದಾಳಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯ ಸ್ವರೂಪ ಬದಲಾವಣೆ ಖಂಡಿಸಿ ಸೋಮವಾರ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
‘ಬಿಜೆಪಿ ಆಡಳಿತವು ದೇಶದಾದ್ಯಂತ ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಮನಮೋಹನ್ ಸಿಂಗ್ ಅವರು ಮಹಾತ್ಮಕಾಂಕ್ಷೆಯಿಂದ ರೂಪಿಸಿದ್ದ ಉದ್ಯೋಗ ಖಾತ್ರಿ ಯೋಜನೆ ಬಡವರ ಕೈಗೆ ಉದ್ಯೋಗ ನೀಡಿತ್ತು. ಗ್ರಾಮೀಣ ಜನರ ಜೀವನಕ್ಕೆ ಆಧಾರವಾಗಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು ರದ್ದು ಮಾಡಿ ಜಿ ರಾಮ್ ಜಿ ಹೆಸರಿನ ಕಾರ್ಯಕ್ರಮ ಜಾರಿಗೊಳಿಸಿದೆ. ಆ ಮೂಲಕ ದೇಶದ ಬಡವರಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.
‘ಜಿ ರಾಮ್ ಜಿ ಕಾರ್ಯಕ್ರಮ ರದ್ದು ಮಾಡಿ ಉದ್ಯೋಗ ಖಾತ್ರಿ ಯೋಜನೆ ಮರು ಸ್ಥಾಪಿಸುವವರೆಗೂ ನಾವು ಹೋರಾಟ ನಡೆಸಬೇಕಿದೆ. ಗ್ರಾಮೀಣ ಕೂಲಿ ಕಾರ್ಮಿಕರಿಗೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೃಷಿಕ ಬದುಕಿಗೆ, ಆಸ್ತಿಗಳ ರಕ್ಷಣೆಗೆ ಉದ್ಯೋಗ ಖಾತ್ರಿ ಯೋಜನೆ ಆಸರೆಯಾಗಿತ್ತು. ಬಿಜೆಪಿ ಸರ್ಕಾರ ಈ ಹಿಂದೆಯೂ ಯೋಜನೆ ಬದಲಿಸಲು ಯತ್ನಿಸಿತ್ತು. ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸಿತ್ತು. ಈಗ ಯೋಜನೆಯನ್ನೇ ರದ್ದು ಮಾಡಿರುವುದು ಅಕ್ಷಮ್ಯ’ ಎಂದು ಹೇಳಿದರು.
ಶಾಸಕ ಬಿ.ಜಿ ಗೋವಿಂದಪ್ಪ ‘ಕೇಂದ್ರ ಬಿಜೆಪಿ ಸರ್ಕಾರ ಜಾರಿಗೊಳಿಸುತ್ತಿರುವ ನೀತಿಗಳು ಜನವಿರೋಧಿ, ರೈತವಿರೋಧಿಯಾಗಿವೆ. ಗ್ರಾಮೀಣ, ಎಸ್‌ಸಿ, ಎಸ್‌ಟಿ ಸದಸ್ಯರಿಗೆ ನೀಡುವ ಕನಿಷ್ಠ ವೇತನ ಕಾಯ್ದೆಯನ್ನು ಸಂಪೂರ್ಣ ನಿಲ್ಲಿಸಲು ಕೇಂದ್ರ ಸರ್ಕಾರ ಹೊರಟಿದೆ. ಉದ್ಯೋಗ ಖಾತ್ರಿ ಯೋಜನೆ ರದ್ದು ಮಾಡುವ ಮೂಲಕ ರಾಷ್ಟ್ರದ 130 ಕೋಟಿಗೂ ಹೆಚ್ಚು ಜನರ ನಂಬಿಕೆಗೆ ಧಕ್ಕೆ ತಂದಿದೆ. ಇದರ ವಿರುದ್ಧ ದೇಶದಾದ್ಯಂತ ಹೋರಾಟ ನಡೆಸುವುದು ಅನಿವಾರ್ಯವಾಗಿದೆ’ ಎಂದರು.
‘2019 ರಿಂದ ಇಲ್ಲಿವರೆಗೆ ರಾಜ್ಯಕ್ಕೆ ₹1.26 ಸಾವಿರ ಕೋಟಿ ಅನುದಾನ ಕೇಂದ್ರ ಸರ್ಕಾರದಿಂದ ಬರಬೇಕಾಗಿದೆ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ಪಡೆಯದೇ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ವಿಶ್ವ ಮಟ್ಟದಲ್ಲಿ ಮಾದರಿಯಾಗಿತ್ತು. ಅದನ್ನು ಬದಲಾವಣೆ ಮಾಡಿರುವುದು ಖಂಡನೀಯ’ ಎಂದರು.
ಶಾಸಕ ಟಿ.ರಘುಮೂರ್ತಿ ‘ಉದ್ಯೋಗ ಖಾತ್ರಿಯಲ್ಲಿ ಮಾಡಿರುವ ಬದಲಾವಣೆಗಳನ್ನು ಕಾಂಗ್ರೆಸ್ ವಿರೋಧಿಸಿದೆ. ದೇಶದಾದ್ಯಂತ ದೊಡ್ಡ ಹೋರಾಟಗಳು ನಡೆಯುತ್ತಿವೆ. ಈ ಸಂಬಂಧ ಕೇಂದ್ರ ಸರ್ಕಾರ ಮೊದಲಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನೇ ಮುಂದುವರಿಸಬೇಕು. 100 ದಿನಗಳ ಕೆಲಸ ನೀಡುತ್ತಿದ್ದ ಯೋಜನೆಯನ್ನು 125 ನೀಡುವುದಾಗಿ ಹೇಳುತ್ತಿದೆ. ಆದರೆ ಸಾಕಷ್ಟು ಅನುದಾನ ನೀಡದ ಕಾರಣ ಈಗ 100 ದಿನಗಳೂ ಕೆಲಸ ದೊರೆಯದಂತಹ ಪರಿಸ್ಥಿತಿ ಎದುರಾಗಿದೆ’ ಎಂದರು.
ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ‘ಎನ್‌ಡಿಎ ಸರ್ಕಾರದ ನೀತಿಗಳಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಬಿಜೆಪಿ, ಆರ್‌ಎಸ್‌ಎಸ್ ಸೇರಿ ಸಂಘ ಪರಿವಾರದಿಂದ ದೇಶವನ್ನು ರಕ್ಷಣೆ ಮಾಡಬೇಕಾಗಿದೆ. ಮಹಾತ್ಮ ಗಾಂಧಿಯವರು ಈ ದೇಶಕ್ಕೆ ತಂದೆಯಾಗಿದ್ದರೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ತಾಯಿ ಇದ್ದಂತೆ. ಇವರ ಚಿಂತನೆಗಳಿಗೆ ಧಕ್ಕೆಯಾಗದಂತೆ ರಕ್ಷಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
ಪ್ರತಿಭಟನಕಾರರು ನೀಲಕಂಠೇಶ್ವರ ದೇವಾಲಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬಿ.ಡಿ.ರಸ್ತೆ ಮೂಲಕ ಅಂಬೇಡ್ಕರ್ ವೃತ್ತಕ್ಕೆ ಪಾದಯಾತ್ರೆ ಮೂಲಕ ತಲುಪಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ಅದಿ ಜಾಂಭವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಮುಖಂಡರಾದ ಬಿ.ಎನ್.ಚಂದ್ರಪ್ಪ, ಸಂಪತ್ ಕುಮಾರ್, ಮೈಲಾರಪ್ಪ, ಗೀತಾ ನಂದಿನಿ ಗೌಡ, ಮನಿರಾ ಮುಕಾಂದರ್, ಅಲ್ಲಾ ಭಕ್ಷಿ, ಚೋಟು, ಮರುಳಾರಾಧ್ಯ, ಲಕ್ಷ್ಮಿಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.