ADVERTISEMENT

ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಮನೆ ಮೇಲೆ ಮುಂದುವರಿದ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 4:47 IST
Last Updated 23 ಏಪ್ರಿಲ್ 2023, 4:47 IST
ಧರ್ಮಪುರ ಸಮೀಪದ ಚಿಲ್ಲಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಶನಿವಾರ ಪ್ರಚಾರ ನಡೆಸಿದರು
ಧರ್ಮಪುರ ಸಮೀಪದ ಚಿಲ್ಲಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಶನಿವಾರ ಪ್ರಚಾರ ನಡೆಸಿದರು   

ಧರ್ಮಪುರ: ಹಿರಿಯೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ. ರವೀಂದ್ರಪ್ಪ ಅವರ ನಿವಾಸದ ಮೇಲಿನ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಶನಿವಾರವೂ ಮುಂದುವರಿಯಿತು.

ಸಮೀಪದ ಮುಂಗುಸುವಳ್ಳಿ ಗ್ರಾಮದ ತೋಟದ ಮನೆಯಲ್ಲಿ ‌‌‌‌ಆದಾಯ ತೆರಿಗೆ ಅಧಿಕಾರಿಗಳ ಪರಿಶೀಲನೆ ನಡೆಸಿದರು. 20ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದ ಅಧಿಕಾರಿಗಳು ವಿವಿಧೆಡೆ ಶೋಧ ನಡೆಸಿದರು. ಶುಕ್ರವಾರ ರಾತ್ರಿ ಕೆಲವು ಅಧಿಕಾರಿಗಳು ಹಿರಿಯೂರಿಗೆ ಹೋಗಿದ್ದರು. ಉಳಿದವರು ತೋಟದ ಮನೆಯಲ್ಲಿ ಉಳಿದುಕೊಂಡು ಶೋಧ ಕಾರ್ಯ ನಡೆಸಿದರು. ಅಲ್ಲಿಯೇ ವಿವಿಧ ಕಾರ್ಯಗಳಿಗೆ ನೇಮಕಗೊಂಡಿದ್ದ ಕೂಲಿ ಕಾರ್ಮಿಕರು ಎಂದಿನಂತೆಯೇ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದು ಕಂಡುಬಂತು.

ಅಧಿಕಾರಿಗಳ ಒಂದು ತಂಡ ರವೀಂದ್ರಪ್ಪ ಅವರ ಮಗ ಡಾ.ಸತ್ಯನಾರಾಯಣ ಅವರನ್ನು ಬೆಂಗಳೂರಿಗೆ ಕರೆದೊಯ್ದಿದ್ದು, ಅಲ್ಲಿನ ನಿವಾಸದಲ್ಲೂ ಶೋಧ ಕಾರ್ಯ ಮುಂದುವರಿಸಿದ್ದಾರೆ.

ADVERTISEMENT

ಸಣ್ಣ ನೀರಾವರಿ ಇಲಾಖೆಯಲ್ಲಿ ಮುಖ್ಯ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ರವೀಂದ್ರಪ್ಪ 2021ರಲ್ಲಿ ನಿವೃತ್ತರಾಗಿ ಮುಂಗುಸುವಳ್ಳಿ ತೋಟದ ಮನೆಯಲ್ಲಿ ವಾಸವಿದ್ದರು. ಈಗ ಹಿರಿಯೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾಗ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವುದು ಜೆಡಿಎಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದ್ದು, ಕಾರ್ಯಕರ್ತರು ಶನಿವಾರ ಅವರ ನಿವಾಸದ ಮುಂದೆ ಜಮಾಯಿಸಿದ್ದರು.

ರವೀಂದ್ರಪ್ಪ ಪ್ರಚಾರ ಕೈಗೊಳ್ಳಲು ಅಧಿಕಾರಿಗಳು ಅವಕಾಶ ನೀಡಿದರು.

‘ಅಧಿಕಾರಿಗಳ ಶೋಧ ಮುಂದುವರಿದಿದೆ. ಇದರ ಬಗ್ಗೆ ಸಂಪೂರ್ಣ ಪರಿಶೀಲನೆ ಮುಗಿಯುವವರೆಗೂ ಏನೂ ಹೇಳುವಂತಿಲ್ಲ ಎಂದು ತೆರಿಗೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಆತಂಕಪಡುವ ಅವಶ್ಯಕತೆ ಇಲ್ಲ. ಎಲ್ಲಿಯೂ ಸಮಸ್ಯೆಯಾಗಿಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಗಿದೆ’ ಎಂದು ರವೀಂದ್ರಪ್ಪ ತಿಳಿಸಿದರು.

ಶನಿವಾರ ಚಿಲ್ಲಹಳ್ಳಿ, ಗೂಳ್ಯ, ಸೂಗೂರು, ಸಾಲುಣಿಸೆ, ಕಂಭತ್ತನಹಳ್ಳಿ ಸೇರಿ ಹಲವೆಡೆ ಅವರು ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.