ADVERTISEMENT

ಚಿತ್ರದುರ್ಗ | 'ಸಹಕಾರಿ ಮಾರುಕಟ್ಟೆ ವ್ಯವಸ್ಥೆ ವಿಸ್ತಾರಗೊಳ್ಳಲಿ'

ರೈತ ಸಮಾವೇಶ, ಸಂವಾದದಲ್ಲಿ ಕಿಸಾನ್ ಸಂಘದ ಪ್ರಚಾರಕ ಪುಟ್ಟಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 6:07 IST
Last Updated 16 ನವೆಂಬರ್ 2025, 6:07 IST
ಸ್ವದೇಶಿ ಮೇಳದ ಅಂಗವಾಗಿ ಶನಿವಾರ ನಡೆದ ರೈತ ಸಮಾವೇಶ, ಸಂವಾದವನ್ನು ಕಿಸಾನ್ ಸಂಘದ ಉತ್ತರ ಪ್ರಾಂತ ಪ್ರಚಾರಕ ಪುಟ್ಟಸ್ವಾಮಿ ಉದ್ಘಾಟಿಸಿದರು
ಸ್ವದೇಶಿ ಮೇಳದ ಅಂಗವಾಗಿ ಶನಿವಾರ ನಡೆದ ರೈತ ಸಮಾವೇಶ, ಸಂವಾದವನ್ನು ಕಿಸಾನ್ ಸಂಘದ ಉತ್ತರ ಪ್ರಾಂತ ಪ್ರಚಾರಕ ಪುಟ್ಟಸ್ವಾಮಿ ಉದ್ಘಾಟಿಸಿದರು   

ಚಿತ್ರದುರ್ಗ: ‘ರೈತರು ಸಾವಯವ ಕೃಷಿಗೆ ಆದ್ಯತೆ ನೀಡಬೇಕು. ಬಹುಬೆಳೆ ಪದ್ಧತಿ ಅನುಸರಿಸಿಕೊಂಡು ನಷ್ಟವಾಗುವುದನ್ನು ತಡೆಯಬೇಕು. ಜೊತೆಗೆ ರೈತರ ಸಹಕಾರಿ ಮಾರುಕಟ್ಟೆಗಳು ವ್ಯವಸ್ಥೆ ವಿಸ್ತಾರಗೊಳ್ಳಬೇಕು’ ಎಂದು ಕಿಸಾನ್ ಸಂಘದ ಉತ್ತರ ಪ್ರಾಂತ ಪ್ರಚಾರಕ ಪುಟ್ಟಸ್ವಾಮಿ ಹೇಳಿದರು.

ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಅಂಗವಾಗಿ ಶನಿವಾರ ನಡೆದ ರೈತ ಸಮಾವೇಶ, ಸಂವಾದದಲ್ಲಿ ಅವರು ಮಾತನಾಡಿದರು.

‘ಹಿಂದೆ ನಮ್ಮ ರೈತರು ಕೃಷಿಗೆ ಅಗತ್ಯವಾಗಿ ಬೇಕಾದ ಪರಿಕರಗಳನ್ನು ಅವರೇ ತಯಾರು ಮಾಡಿಕೊಳ್ಳುತ್ತಿದ್ದರು. ಅದರೆ ಇಂದು ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸುವಂತಾಗಿದೆ. ರೈತರು ಕೃಷಿ ಕೆಲಸದಿಂದ ವಿಮುಖರಾಗುತ್ತಿದ್ದು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರೈತರು ಆರ್ಥಿಕವಾಗಿ ಸದೃಢರಾಗುವ ದಿನಗಳು ಬರಬೇಕು. ಆಗ ಮಾತ್ರ ರೈತರು ಬದುಕಲು ಸಾಧ್ಯ’ ಎಂದರು.

ADVERTISEMENT

‘ಸಾವಯವ ಕೃಷಿ, ಬಹು ಬೆಳೆ ಪದ್ಧತಿ, ಮೌಲ್ಯ ವರ್ಧನೆ ಮಾರುಕಟ್ಟೆ ವ್ಯವಸ್ಥೆ, ಸಹಕಾರಿ ವ್ಯವಸ್ಥೆ ಹೆಚ್ಚಾದರೆ ಮಾತ್ರ ರೈತ ಆರ್ಥಿಕವಾಗಿ ಸದೃಢನಾಗುತ್ತಾನೆ. ಒಂದು ಕಾಲದಲ್ಲಿ ಕಬ್ಬಿನಿಂದ ಬೆಲ್ಲವನ್ನು ಮಾತ್ರ ತಯಾರು ಮಾಡಲಾಗುತ್ತಿತು. ಅಗ ಬೆಲ್ಲದ ತಯಾರಿಕಾ ಕೇಂದ್ರಗಳು, ಆಲೆಮನೆಗಳು ಹೆಚ್ಚಾಗಿದ್ದವು. ಆದರೆ ಇಂದು ಎಲ್ಲರೂ ಸಕ್ಕರೆಗೆ ಮಾರು ಹೋಗಿದ್ದಾರೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಾಗಿವೆ’ ಎಂದು ತಿಳಿಸಿದರು.

‘ನಮ್ಮ ತಾತ ಮುತ್ತಾತಂದಿರು ಕೃಷಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳನ್ನು ಅವರೇ ಸ್ವಂತ ಮಾಡಿಕೊಳ್ಳುತ್ತಿದ್ದರು. ಬಿತ್ತನೆಬೀಜ, ಸಾವಯವ ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಇತರೆ ವಸ್ತುಗಳನ್ನು ಹೂರಗಿನಿಂದ ತಾರದೇ ತಾವೇ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಎಲ್ಲದಿಕ್ಕೂ ಕಂಪನಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

‘ಯಾವುದಾರೂ ಒಂದು ವಸ್ತು ಸಿಗದಿದ್ದರೆ ಕೃಷಿಯನ್ನು ಮಾಡುವುದೇ ನಿಲ್ಲಿಸಬೇಕಾದ ವಾತಾವರಣ ನಿರ್ಮಾಣವಾಗಿದೆ. ಅಂದಿನ ರೈತರು ಭೂಮಿಗೆ ಸಾವಯವ ಗೊಬ್ಬರ ಹಾಕುವ ಮೂಲಕ ಭೂಮಿಯನ್ನು ಫಲವತ್ತಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ನಾವುಗಳು ರಾಸಾಯನಿಕ ಗೊಬ್ಬರ ಹಾಕಿ ಭೂಮಿಯನ್ನು ಹಾಳು ಮಾಡಿದ್ದೇವೆ. ಮಣ್ಣಿನ ಆರೋಗ್ಯವನ್ನು ಕೆಡಿಸಿದ್ದೇವೆ’ ಎಂದರು.

‘ರೈತರಿಗೆ ಜಾನುವಾರುಗಳ ಒಡನಾಟವಿರಬೇಕು. ಜಾನುವಾರುಗಳು ಇಲ್ಲದಿದ್ದರೆ ಕೃಷಿಯೇ ಇರಲಿಲ್ಲ. ಆದರೆ ಇಂದು ನಾವು ಯಂತ್ರಗಳ ಮೇಲೆ ಅವಲಂಬಿತರಾಗಿದ್ದೇವೆ. ಆಕಳು ವೈದ್ಯನಿದ್ದ ಹಾಗೇ, ಅದರ ಹಾಲು ಅಮೃತಕ್ಕೆ ಸಮಾನ. ಅದನ್ನು ಸೇವಿಸಿದರೆ ವಿವಿಧ ರೀತಿಯ ಪೋಷಕಾಂಶಗಳು ನಮಗೆ ಲಭ್ಯವಾಗುತ್ತವೆ. ಜೊತೆಗೆ ಇತರ ಪ್ರಾಣಿಗಳು ರೈತರೊಂದಿಗೆ ಆಪ್ತ ಬಾಂಧ್ಯವ್ಯ ಹೊಂದಿದ್ದವು. ಆದರೆ ಈಗ ರೈತರು ಜಾನುವಾರುಗಳಿಂದ ದೂರವಾಗುತ್ತಿದ್ದಾರೆ’ ಎಂದರು.

‘ಕೃಷಿ 10 ಸಾವಿರ ವರ್ಷದಿಂದ ಇದೆ. ನಿನ್ನೆ ಮೊನ್ನೆಯಿಂದ ಕೃಷಿ ಬಂದಿಲ್ಲ. ಇತ್ತೀಚೆಗೆ ಕೃಷಿ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವಜನತೆ ಕೃಷಿ ಬಿಟ್ಟು ಉದ್ಯೋಗಕ್ಕಾಗಿ ನಗರದ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಚಿಂತನೆ ಮಾಡಬೇಕಿದೆ. ನಗರಕ್ಕೆ ಹೋದರೆ ಹೊಟ್ಟೆಗೆ ಅನ್ನವನ್ನು ಯಾರೂ ನೀಡುತ್ತಾರೆ? ಯುವ ಜನತೆ ತಿರುಗಿ ಮತ್ತೆ ಗ್ರಾಮದ ಕಡೆಗೆ ಬರಬೇಕಿದೆ, ಕೃಷಿಯಲ್ಲಿ ತೂಡಗಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾವಯವ ಕೃಷಿಕರಾದ ಅರಸೀಕೆರೆ ರಘು ಮಾತನಾಡಿ, ‘ನಾವು ಬೆಳೆದ ಬೆಳೆಗಳನ್ನು ಹಾಗೇಯೇ ನೇರವಾಗಿ ಮಾರಾಟ ಮಾಡಿದರೆ ನಮಗೆ ಆದಾಯ ಕಡಿಮೆ ಬರುತ್ತದೆ. ಇದರ ಬದಲು ಅದೇ ಬೆಳೆಯನ್ನು ಮೌಲ್ಯವರ್ಧನೆ ಮಾಡುವುದರ ಮೂಲಕ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ನಾವೇ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಳ್ಳಬೇಕಿದೆ. ರೈತರು ತಮ್ಮಲ್ಲಿನ ಭೂಮಿಯಲ್ಲಿ ಒಂದೇ ಬೆಳೆಯನ್ನು ಹಾಕುವ ಬದಲು ವಿವಿಧ ರೀತಿಯ ಬೆಳೆ ಹಾಕುವುದರ ಮೂಲಕ ಹೆಚ್ಚು ಲಾಭ ಪಡೆಯಬೇಕು’ ಎಂದರು.

‘ನಮ್ಮಲ್ಲಿ ಕೆಲವರು ರೈತ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಮಗ ಏನು ಮಾಡುತ್ತಾನೆ ಎಂದು ಕೇಳಿದರೆ ಪೋಷಕರು, ತನ್ನ ಮಗ ಹೊಲದ ಕೆಲಸ ಮಾಡುತ್ತಾನೆ ಎಂದು ಹೇಳುವುದಿಲ್ಲ. ಇದು ಸರಿಯಲ್ಲ. ನಾವು ಕೃಷಿಕರು ಎಂದು ಹೇಳುವುದಕ್ಕೆ ಯಾವುದೇ ಹಿಂಜರಿಕೆ ಬೇಡ. ಕೃಷಿಯ ಬಗ್ಗೆ ಕೀಳರಿಮೆಯನ್ನು ತೋರಿಸಬಾರದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣಾ ಮಂಚ್‌ ಮುಖ್ಯಸ್ಥ ಜಗದೀಶ್, ರೈತರಾದ ಹುಲಿಕರೆ ವಿಶ್ವಶ್ವೇರಯ್ಯ, ಸಿದ್ದವ್ವನಹಳ್ಳಿ ಜ್ಞಾನೇಶ್, ಸಹಾಯಕ ಕೃಷಿ ನಿರ್ದೇಶಕರಾದ ಮಿಥುನ್, ಕೆ.ಟಿ.ಕುಮಾರಸ್ವಾಮಿ ಇದ್ದರು.

ಖ್ಯಾತ ಕಲಾವಿದ ಟಿ.ಎಂ.ವೀರೇಶ್ ಅವರು ರೂಪಿಸಿದ ಸಾಲುಮರದ ತಿಮ್ಮಕ್ಕ ಕಲಾಕೃತಿಯನ್ನು ಅನಾವರಣಗೊಳಿಸಲಾಯಿತು

ಸಾಲುಮರದ ತಿಮ್ಮಕ್ಕನಿಗೆ ಗೌರವ

ಶುಕ್ರವಾರ ಇಹಲೋಕ ತ್ಯಜಿಸಿದ ಸಾಲುಮರದ ತಿಮ್ಮಕ್ಕ ಅವರಿಗೆ ಸ್ವದೇಶಿ ಜಾಗರಣ ಮಂಚ್‍ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ಹೆಸರಿನಲ್ಲಿ ಹಣ್ಣಿನ ಸಸಿಯನ್ನು ನಡುವ ಮೂಲಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವಿಸಲಾಯಿತು. ಚಿತ್ರದುರ್ಗದ ಖ್ಯಾತ ಚಿತ್ರಕಲಾ ಕಲಾವಿದ ಟಿ.ಎಂ.ವೀರೇಶ್‌ ಅವರು ತಮ್ಮ ಕ್ರೀಯಾಶೀಲ ಕಲ್ಪನೆಯ ಮೂಲಕ ಸಾಲುಮರದ ತಿಮ್ಮಕ್ಕ ಅವರ ಚಿತ್ರ ಬರೆಯುವ ಮೂಲಕ ಅವರಿಗೆ ಗೌರವ ಅನಾವರಣಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಕೆ.ಎಸ್‍.ನವೀನ್ ಶಿಬಿರದ ಸಂಚಾಲಕರಾದ ಸೌಭಾಗ್ಯ ಬಸವರಾಜನ್ ರೇಖಾ ರೀನಾ ವೀರಭದ್ರಪ್ಪ ಎಂ.ಎನ್‌.ರವಿಕಾಂತ್ ನಾಗರಾಜ್ ರಾಘವೇಂದ್ರ ಸುಧಾಮ್ ಸುನೀಲ್ ನಾಗರಾಜ್ ಬೇದ್ರೇ ರಾಜೇಶ್ ಬುರುಡೇಕಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.