ADVERTISEMENT

ಚಿತ್ರದುರ್ಗ: ಕಾಲ್ನಡಿಗೆಯಲ್ಲಿ ಅಲೆದ ಆಶಾ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 12:07 IST
Last Updated 12 ಜೂನ್ 2020, 12:07 IST
ಎನ್‌.ಜಿ.ಸುಮಾ
ಎನ್‌.ಜಿ.ಸುಮಾ   

ಚಿತ್ರದುರ್ಗ: ‘ನೆತ್ತಿ ಸುಡುವ ಬಿಸಿಲು, ಬೇಸಿಗೆಗೆ ಕೆಂಡವಾದ ಭೂಮಿಯ ಮೇಲೆ ಕಾಲಿಡಲು ಅಂಜಿಕೆ. ಜನರಿಲ್ಲದೇ ಭಯ ಹುಟ್ಟಿಸುತ್ತಿದ್ದ ರಸ್ತೆಯಲ್ಲಿ ಛಲಬಿಡದೇ ಕಾಲ್ನಡಿಗೆಯಲ್ಲೇ ಓಡಾಡಿದೆ. ಕೊರೊನಾ ಸೋಂಕಿನ ಅಪಾಯದಿಂದ ಜನರನ್ನು ಪಾರು ಮಾಡಲು ಶ್ರಮಿಸಿದೆ...’ ಎನ್ನುವಾಗ ಆಶಾ ಕಾರ್ಯಕರ್ತೆ ಎನ್‌.ಜಿ.ಸುಮಾ ಅವರ ಮೊಗದಲ್ಲಿ ಮಂದಹಾಸ ಮೂಡಿತು.

‘ಕೋವಿಡ್‌–19’ ನಿಯಂತ್ರಣಕ್ಕೆ ನಿಯೋಜನೆಗೊಂಡ ‘ಕೊರೊನಾ ವಾರಿಯರ್ಸ್‌’ಗಳಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಅನನ್ಯ. ಜನರು ಹಾಗೂ ಆರೋಗ್ಯ ಇಲಾಖೆಯ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಇವರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕಾರ್ಯನಿರ್ವಹಿಸಿದ ಪರಿಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಬಿ.ಜಿ.ಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯಾದ ಸುಮಾ, ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ನಿವಾಸಿ. ಮ್ಯಾಸರಹಟ್ಟಿ, ತಮ್ಮಯ್ಯನಹಟ್ಟಿ ಹಾಗೂ ಓಬವ್ವನಹಟ್ಟಿ ಇವರ ಕಾರ್ಯಕ್ಷೇತ್ರ. ಮ್ಯಾಸರಹಟ್ಟಿಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಗ್ರಾಮಗಳಿಗೆ ಕಾಲ್ನಡಿಗೆಯಲ್ಲೇ ಓಡಾಡಿದ್ದಾರೆ. ಆಗಾಗ ಪತಿಯ ದ್ವಿಚಕ್ರ ವಾಹನದ ನೆರವು ಪಡೆದಿದ್ದಾರೆ.

ADVERTISEMENT

‘200 ಮನೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ನಿತ್ಯ ಸರಾಸರಿ 30 ಮನೆಗಳನ್ನು ಭೇಟಿ ಮಾಡುತ್ತಿದ್ದೆ. ಬೆಂಗಳೂರು, ದಾವಣಗೆರೆ, ಕೊಪ್ಪಳ ಸೇರಿ ಹಲವೆಡೆಯಿಂದ ಬಂದಿದ್ದ 120 ಜನರನ್ನು ಗೃಹ ಕ್ವಾರಂಟೈನ್‌ ಮಾಡಿದೆ. ಅನುಮತಿ ಇಲ್ಲದೇ ಗ್ರಾಮಕ್ಕೆ ಬಂದಿದ್ದ ಮೂವರನ್ನು ಗ್ರಾಮದ ಗಡಿ ದಾಟಿಸಿದೆ’ ಎಂದರು.

ಸುಮಾ ಅವರಿಗೆ 8 ಮತ್ತು 10 ವರ್ಷದ ಇಬ್ಬರು ಮಕ್ಕಳಿದ್ದಾರೆ. ನಿತ್ಯ ಬೆಳಿಗ್ಗೆ ಕರ್ತವ್ಯಕ್ಕೆ ಹೊರಗೆ ಹೋಗುತ್ತಿದ್ದ ಇವರು ಸಂಜೆ ಹೊತ್ತಿಗೆ ಮನೆ ಸೇರುತ್ತಿದ್ದರು. ಅಕ್ಕರೆಯಿಂದ ಓಡೋಡಿ ಬರುವ ಮಕ್ಕಳಿಂದ ಅಂತರ ಕಾಯ್ದುಕೊಳ್ಳುವಾಗ ಬೇಸರವಾಗಿದೆ. ಸಮವಸ್ತ್ರವನ್ನು ನಿತ್ಯ ತೊಳೆದು ಬಳಸುತ್ತಿದ್ದರು. ಸ್ನಾನ ಮುಗಿಸಿ, ಶುಚಿಯಾದ ಬಳಿಕ ಮನೆ ಪ್ರವೇಶಿಸುತ್ತಿದ್ದರು.

‘ಸೋಂಕಿನ ಬಗ್ಗೆ ಆರಂಭದಲ್ಲಿ ಅಳುಕಿತ್ತು. ಕೆಲಸ ಮಾಡುತ್ತಾ ಭಯವನ್ನು ಹೋಗಲಾಡಿಸಿಕೊಂಡೆ. ಸೋಂಕಿನ ವಿರುದ್ಧ ಸೆಣೆಸಿದ ತೃಪ್ತಿ ಇದೆ’ ಎಂಬುದು ಇವರ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.