ADVERTISEMENT

ಸಹಕಾರವೂ ಕೋವಿಡ್‌ಗೆ ಉತ್ತಮ ಮದ್ದು: ಆಯುಷ್ ಇಲಾಖೆ ವೈದ್ಯ ಡಾ.ಟಿ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 12:00 IST
Last Updated 14 ಜೂನ್ 2020, 12:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ರದುರ್ಗ: ‘ಜಿಲ್ಲಾ ಕೋವಿಡ್-19 ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿದ ನರ್ಸ್‌, ‘ಡಿ’ ಗ್ರೂಪ್‌ ನೌಕರರು ಹಾಗೂ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ. ದಾಖಲಾದ ಸೋಂಕಿತರು ಗುಣಮುಖರಾಗಿ ಹೊರ ಹೋಗುವವರೆಗೂ ಆತ್ಮಸ್ಥೈರ್ಯ ನೀಡಿದ್ದೇವೆ. ಆಯುಷ್ ವೈದ್ಯರು ಕರ್ತವ್ಯ ಪ್ರಜ್ಞೆ ಮೆರೆದಿದ್ದೇವೆ...’

‘ಕೋವಿಡ್-19’ ನಿಯಂತ್ರಣಕ್ಕೆ ಕಾರ್ಯನಿರ್ವಹಿಸುತ್ತಿರುವ ಕೋಟೆನಾಡಿನ ‘ಕೊರೊನಾ ವಾರಿಯರ್’ ಆಯುಷ್ ಇಲಾಖೆ ವೈದ್ಯ ಡಾ.ಟಿ.ಶಿವಕುಮಾರ್ ಅವರ ಮಾತಿದು. ‘ಆಯುಷ್’ ವೈದ್ಯರ ಕಾರ್ಯವೈಖರಿ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಮೊದಲ ದಿನ ಕೋವಿಡ್-19 ಆಸ್ಪತ್ರೆಯೊಳಗೆ ಪ್ರವೇಶಿಸಿದಾಗ ನನಗೂ ಆತಂಕ ಉಂಟಾಯಿತು. ಪವಿತ್ರವಾದ ವೈದ್ಯ ವೃತ್ತಿಯಲ್ಲಿರುವ ಕಾರಣ ಧೈರ್ಯ ತಂದುಕೊಂಡೆ. ಆನಂತರ ನಮಗೆ ಕರ್ತವ್ಯಕ್ಕೆ ನಿಯೋಜಿಸಿದ ಎಲ್ಲಾ ದಿನಗಳಲ್ಲೂ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ಈಗ ಅಲ್ಲಿ ಕೆಲಸ ಮಾಡಲು ಒಂದು ರೀತಿ ಸಂತೋಷವಾಗುತ್ತದೆ’ ಎಂದು ತಿಳಿಸಿದರು.

ADVERTISEMENT

‘ಶುಶ್ರೂಷಕಿಯರು, ‘ಡಿ’ ಗ್ರೂಪ್‌ ನೌಕರರೂ ಭೀತಿಗೆ ಒಳಗಾಗಿದ್ದರು. ನಿರ್ಭೀತಿಯಿಂದ ಕೆಲಸ ಮಾಡಲು ಅವರಲ್ಲಿದ್ದ ಆತಂಕ ಹೋಗಲಾಡಿಸಿದ್ದೇವೆ. ಸೋಂಕಿತರಿಂದ ಕೋವಿಡ್-19 ಹರಡದಂತೆ ಕೈಗೊಳ್ಳಬೇಕಾದ ವಿಧಾನದ ಕುರಿತು ಮಾಹಿತಿ ನೀಡಿದ್ದೇವೆ. ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳ ಸಂಘದಿಂದ ‘ಚವನ್ ಪ್ರಾಶ್’ ಸೇರಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಗಳನ್ನು ಸಿಬ್ಬಂದಿಗೆ ನೀಡಿದ್ದೇವೆ. ಸೋಂಕಿತರಿಗೆ ಯಾವುದೇ ಔಷಧವನ್ನು ನೀಡಿಲ್ಲ’ ಎಂದರು.

‘ಸೋಂಕಿತರಾಗಿದ್ದ ವ್ಯಕ್ತಿಗಳಿಗೆ ನಿತ್ಯ ದೂರವಾಣಿ ಕರೆ ಮಾಡಿ ಗುಣಮುಖರಾಗುತ್ತೀರಿ, ಹೆದರುವ ಅಗತ್ಯವಿಲ್ಲ ಎಂದು ತಿಳಿ ಹೇಳಿದ್ದೇವೆ. ಕೆಲವರು ಬಟ್ಟೆ ಇಲ್ಲ ಎನ್ನುತ್ತಿದ್ದರು. ಅವರಿಗೆ ಹೊಸ ವಸ್ತ್ರ ತರಿಸಿಕೊಟ್ಟಿದ್ದೇವೆ’ ಎಂದರು.

‘ನನಗೆ ಬೆಳಿಗ್ಗೆಯ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ರಾತ್ರಿ ಅವಧಿಗೆ ಆಯುಷ್ ವೈದ್ಯ ಡಾ.ನಾರದಮುನಿ ಅವರನ್ನು ಇಲಾಖೆ ನಿಯೋಜಿಸಿತ್ತು. ನನ್ನಂತೆಯೇ ಅವರೂ ಶ್ರಮಿಸಿದ್ದಾರೆ. ನಾವಿಬ್ಬರೂ ಪಾಳಿವಾರು ಕೆಲಸ ಮಾಡಿದ್ದೇವೆ. ಒಂದು ವಾರ ನಮಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.