ADVERTISEMENT

ನಿಲ್ಲದ ಕಾರ್ಮಿಕರ ಗುಳೆ: ಗ್ರಾಮಗಳಲ್ಲಿ ಕೊರೊನಾ ಆತಂಕ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 13:55 IST
Last Updated 28 ಮಾರ್ಚ್ 2020, 13:55 IST
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯಹೆದ್ದಾರಿಯಲ್ಲಿ ಶನಿವಾರ ಗುಳೆ ಹೋದ ಕಾರ್ಮಿಕರನ್ನು ಹೊತ್ತು ಸ್ವ ಗ್ರಾಮಗಳತ್ತ ಸಾಗಿದ ಟ್ರ್ಯಾಕ್ಟರ್
ಮೊಳಕಾಲ್ಮುರು ತಾಲ್ಲೂಕಿನಲ್ಲಿ ಹಾದು ಹೋಗಿರುವ ರಾಜ್ಯಹೆದ್ದಾರಿಯಲ್ಲಿ ಶನಿವಾರ ಗುಳೆ ಹೋದ ಕಾರ್ಮಿಕರನ್ನು ಹೊತ್ತು ಸ್ವ ಗ್ರಾಮಗಳತ್ತ ಸಾಗಿದ ಟ್ರ್ಯಾಕ್ಟರ್   

ಮೊಳಕಾಲ್ಮುರು: ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಗ್ರಾಮಗಳಿಗೆ ನಿತ್ಯ ಸಾವಿರಾರು ಜನ ಗುಳೆ ಹೋಗಿರುವ ಕಾರ್ಮಿಕರು ಬಂದು ಸೇರುತ್ತಿರುವುದು ಕೊರೊನಾ ನಮ್ಮ ಗ್ರಾಮಕ್ಕೂ ಬರಬಹುದೇ ಎಂಬ ಆತಂಕಕ್ಕೆ ಈಡು ಮಾಡಿದೆ.

ಸತತ ಬರ ಹಿನ್ನೆಲೆಯಲ್ಲಿ ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಮುಂತಾದ ಜಿಲ್ಲೆಗಳಿಂದ ಬೆಂಗಳೂರು, ಚಿಕ್ಕಮಗಳೂರು, ಮೈಸೂರು ಭಾಗಕ್ಕೆ ಸಹಸ್ರಾರು ಕಾರ್ಮಿಕರು ವಲಸೆ ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೆಲಸಗಳು ಸ್ಥಗಿತವಾಗಿರುವ ಜತೆಗೆ ಮೂಲಸೌಕರ್ಯ ದೊರೆಯದ ಪರಿಣಾಮ ಕಾರ್ಮಿಕರು ಸ್ವ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ.

ಬಸ್, ಲಾರಿ ಸಂಚಾರ ಕ್ಷೀಣಿಸಿರುವುದರಿಂದ ಟಾಟಾ ಏಸ್, ಟ್ರ್ಯಾಕ್ಟರ್, ಕ್ರೂಸರ್‌ಗಳಲ್ಲಿ ಕುರಿಗಳನ್ನು ತುಂಬಿಕೊಂಡು ಹೋಗುವ ರೀತಿ ಕಾರ್ಮಿಕರನ್ನು ಕರೆದುಕೊಂಡು ಬರಲಾಗುತ್ತಿದೆ. ಹಗಲು- ರಾತ್ರಿ ಎನ್ನದೆ ವಾಹನಗಳು ಓಡಾಡುತ್ತಿವೆ. ಇದನ್ನು ಹೆದ್ದಾರಿಗಳಲ್ಲಿರುವ ತಪಾಸಣಾ ಕೇಂದ್ರಗಳಲ್ಲಿ ಅಧಿಕಾರಿಗಳು, ಪೊಲೀಸರು ನೋಡಿಯೂ ಸುಮ್ಮನೆ ಬಿಡುತ್ತಿದ್ದಾರೆ. ಇದು ಯುಗಾದಿ ಮುಗಿದರೂ ಕಿಂಚಿತ್ತೂ ಕಡಿಮೆಯಾಗಿಲ್ಲ.

ADVERTISEMENT

‘ನಿತ್ಯ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿವೆ. ಹೈದರಾಬಾದ್- ಕರ್ನಾಟಕ ಭಾಗದ ಕಾರ್ಮಿಕರು ಹೆಚ್ಚಾಗಿ ವಾಪಸ್ ಆಗುತ್ತಿದ್ದಾರೆ. ದೇಶ ವಾಸಿಗಳಲ್ಲಿ ರೋಗ ಹರಡುವಿಕೆ ಪ್ರಾರಂಭವಾಗಿದೆ. ವಲಸೆ ಹೋದವರಲ್ಲಿ ರೋಗ ಲಕ್ಷಣಗಳು ಇದ್ದಲ್ಲಿ ಸುಲಭವಾಗಿ ಹಳ್ಳಿಗಳಿಗೆ ರೋಗ ಲಗ್ಗೆ ಇಡುತ್ತದೆ. ಆದ್ದರಿಂದ ಸೂಕ್ತ ತಪಾಸಣೆ ನಡೆಸಿದ ನಂತರ ಗ್ರಾಮ ಪ್ರವೇಶಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಗ್ರಾಮೀಣ ಭಾಗದಲ್ಲಿ ರೋಗ ಹರಡುವ ಸಾಧ್ಯತೆ ದಟ್ಟವಾಗಲಿದೆ’ ಎಂದು ಗ್ರಾಮಸ್ಥರಾದ ಲಕ್ಷಣಪ್ಪ, ಸಂಪತ್ ಕುಮಾರ್, ಶೇಖರಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.