ADVERTISEMENT

ರಾಮನವಮಿ ಆಚರಣೆಗೆ ಕೊರೊನಾ ಕರಿನೆರಳು

ಶ್ರೀರಾಮ, ಆಂಜನೇಯ ದೇಗುಲಗಳಲ್ಲಿ ಇಲ್ಲ‌ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 13:30 IST
Last Updated 1 ಏಪ್ರಿಲ್ 2020, 13:30 IST
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿನ ಆಂಜನೇಯ ಸ್ವಾಮಿ
ಚಿತ್ರದುರ್ಗದ ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿನ ಆಂಜನೇಯ ಸ್ವಾಮಿ   

ಚಿತ್ರದುರ್ಗ: ರಾಮನವಮಿ ಉತ್ಸವ ಎಂದರೆ ಸಂಭ್ರಮ. ಶ್ರೀರಾಮ, ಆಂಜನೇಯ ದೇಗುಲಗಳು ಪ್ರತಿ ವರ್ಷ ತಳಿರು, ತೋರಣಗಳಿಂದ ಕಂಗೊಳಿಸುತ್ತಿದ್ದವು. ಆದರೆ, ಈ ಬಾರಿ ಎಲ್ಲಿಯೂ ಅಂತಹ ವಾತಾವರಣ ಕಾಣುತ್ತಿಲ್ಲ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರದ ಲಾಕ್‌ಡೌನ್ ಜಾರಿಗೊಳಿಸಿದೆ. ಸರಳ ಆಚರಣೆಗೂ ಅವಕಾಶ ಇಲ್ಲವಾಗಿದೆ. ಇದರಿಂದ ನಗರದ ದೇಗುಲಗಳಲ್ಲಾಗಲಿ, ಭಕ್ತರಲ್ಲಾಗಲಿ ಎಂದಿನಂತೆ ಸಡಗರ ಇಲ್ಲವಾಗಿದೆ. ರಾಮನ ಆರಾಧನೆಗೂ ಕೊರೊನಾ ಕರಿನೆರಳು ಬಿದ್ದಿದೆ.

ಶ್ರೀರಾಮ, ಸೀತಾ ಮಾತೆ, ಲಕ್ಷ್ಮಣ, ಆಂಜನೇಯಸ್ವಾಮಿಗೆ ಪೂಜೆಯಾದ ಬಳಿಕ ದೇಗುಲಗಳ ಮುಂಭಾಗ ಪಾನಕ, ಕೋಸಂಬರಿ, ಕಡಲೆಕಾಳು ಹುಸುಳಿ, ಮಜ್ಜಿಗೆ, ಪುಳಿಯೋಗರೆ ವಿತರಿಸುವ ಸಂಪ್ರದಾಯವಿದೆ. ನೂರಾರು ಭಕ್ತರು ಮುಗಿಬಿದ್ದು‌ ಪ್ರಸಾದ ಸ್ವೀಕರಿಸುತ್ತಿದ್ದರು. ಕೆಲವೆಡೆ ಅನ್ನಸಂತರ್ಪಣೆ ಕೂಡ ನಡೆಯುತ್ತಿತ್ತು. ಆದರೆ, ಪ್ರಸಕ್ತ ವರ್ಷ ಇದ್ಯಾವುದಕ್ಕೂ ಅವಕಾಶವಿಲ್ಲ.

ADVERTISEMENT

ಆಚರಣೆ ಸಂಪೂರ್ಣ ನಿಲ್ಲಬಾರದು ಎಂಬ ಕಾರಣಕ್ಕೆ ಅರ್ಚಕರು ಮಾತ್ರ ದೇಗುಲಕ್ಕೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸಲಿದ್ದಾರೆ. ಎಡೆಯನ್ನೇ ಸಮರ್ಪಿಸಿ ರಾಮನವಮಿ ಆಚರಿಸುವ ಸಾಧ್ಯತೆ ಇದೆ. ಐದಕ್ಕಿಂತ ಹೆಚ್ಚು ಮಂದಿ ಸೇರದೆ ಅತ್ಯಂತ ಸರಳವಾಗಿ ನಡೆಸಲು ಹಲವು ದೇಗುಲಗಳ ಸಮಿತಿ ಸದಸ್ಯರು ಸನ್ನದ್ಧರಾಗಿದ್ದಾರೆ.

ಬುರುಜನಹಟ್ಟಿಯ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಪ್ರತಿ ವರ್ಷ ಶ್ರೀರಾಮನ ಭಾವಚಿತ್ರ ಹಾಗೂ ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಮೆರವಣಿಗೆ ನಡೆಸಲಾಗುತ್ತಿತ್ತು. ಜತೆಗೆ ಅನ್ನಸಂತರ್ಪಣೆ ಇರುತ್ತಿತ್ತು. ಈ ಬಾರಿ ಇಂತಹ ಯಾವುದೇ ವಿಶೇಷಗಳು ಇಲ್ಲ ಎಂಬುದು ದೇಗುಲ‌ ಸಮಿತಿ ಮಾಹಿತಿ.

ನೆಹರೂ ನಗರದ 1ನೇ ತಿರುವಿನಲ್ಲಿರುವ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಏ. 2ರಂದು ಬೆಳಿಗ್ಗೆ ಅರ್ಚಕರು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ನಡೆಯುತ್ತಿದ್ದ ರಾಮದೇವರ ಭಾವಚಿತ್ರ ಮೆರವಣಿಗೆ, ಅನ್ನಸಂತರ್ಪಣೆ ಇರುವುದಿಲ್ಲ ಎಂದು ಭಕ್ತರು ತಿಳಿಸಿದ್ದಾರೆ.

ಮದಕರಿನಾಯಕ ವೃತ್ತದಲ್ಲಿರುವ ರಕ್ಷಾ ಆಂಜನೇಯ ಸ್ವಾಮಿ, ರಂಗಯ್ಯನಬಾಗಿಲ ಬಳಿಯ ರಾಮಮಂದಿರ, ಆಂಜನೇಯಸ್ವಾಮಿ, ಗಣಪತಿ ದೇಗುಲ, ಭೋವಿ ಗುರುಪೀಠದ ಸಿದ್ದರಾಮೇಶ್ವರ ಮಠದ ಆವರಣದಲ್ಲಿರುವ ರಾಮಮಂದಿರ, ಬೆಟ್ಟದ ಆಂಜನೇಯ ಸ್ವಾಮಿ, ತಮಟಕಲ್ಲಿನ ಆಂಜನೇಯ ಸ್ವಾಮಿ, ಜಿಲ್ಲಾ ಕ್ರೀಡಾಂಗಣ ರಸ್ತೆಯಲ್ಲಿರುವ ಆಂಜನೇಯಸ್ವಾಮಿ, ವಾಸವಿ ವಿದ್ಯಾಸಂಸ್ಥೆ ಹತ್ತಿರವಿರುವ ರಾಮಮಂದಿರ, ಆಂಜನೇಯ ಸ್ವಾಮಿ, ಆನೆ ಬಾಗಿಲು ಬಳಿಯ ಆಂಜನೇಯ ಸ್ವಾಮಿ, ಬರಗೇರಿ ಆಂಜನೇಯ ಸ್ವಾಮಿ ಸೇರಿ ನಗರದ ಹಲವು ರಾಮ ಮತ್ತು ಆಂಜನೇಯಸ್ವಾಮಿ ದೇಗುಲಗಳಲ್ಲಿ ಬೆಳಿಗ್ಗೆ ಅರ್ಚಕರಿಂದ ಪೂಜೆ ಮಾತ್ರ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.