ADVERTISEMENT

ನಾಯಕನಹಟ್ಟಿ: 84 ಮಂದಿಯ ಗಂಟಲು ದ್ರವ ಪ್ರಯೋಗಾಲಯಕ್ಕೆ

ಆಹಾರ ಸಾಮಗ್ರಿಗಳ ಉಚಿತ ವಿತರಣೆಗೆ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 17 ಮೇ 2020, 13:19 IST
Last Updated 17 ಮೇ 2020, 13:19 IST
ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಭಾನುವಾರ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು
ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮಕ್ಕೆ ಭಾನುವಾರ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು   

ನಾಯಕನಹಟ್ಟಿ:ಕೋಡಿಹಳ್ಳಿ ಗ್ರಾಮದ ಪಿ-994 ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದ 84 ಮಂದಿಯ ರಕ್ತ ಮತ್ತು ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆಕಳುಹಿಸಲಾಗಿದೆ.

ಪಿ-994 ಸೋಂಕಿತ ವ್ಯಕ್ತಿಯ ಸಂಪರ್ಕ ಹೊಂದಿದ ಅವರ ಕುಟುಂಬದ 53 ಮಂದಿ, ಆರೋಗ್ಯ ಸಿಬ್ಬಂದಿ, ಆಂಬುಲೆನ್ಸ್ ಚಾಲಕರು, ನಾನ್‍ ಕ್ಲಿನಿಕ್ ಸಿಬ್ಬಂದಿ, 5 ಮಂದಿ ಪೊಲೀಸರು ಸೇರಿ 84 ಮಂದಿಯ ರಕ್ತ ಮತ್ತು ಗಂಟಲು ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ದ್ವೀತಿಯ ಸಂಪರ್ಕ ಹೊಂದಿದ ಜನರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ತಂಡದಿಂದ ಕೋಡಿಹಳ್ಳಿ, ಚಿಕ್ಕಹಳ್ಳಿ ಹಾಗೂ 3ಕಿ.ಮೀ ವ್ಯಾಪ್ತಿಯ ಎಲ್ಲ ಹಳ್ಳಿಗಳ ಮನೆ ಮನೆಯ ಆರೋಗ್ಯ ಸಮೀಕ್ಷೆ ನಡೆಸಲಾಗುತ್ತಿದೆ. ಗ್ರಾಮಸ್ಥರಿಗೆ ಯಾವುದೇ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಎದುರಾದರೂ ಸ್ಥಳದಲ್ಲೇ ನುರಿತ ವೈದ್ಯರ ತಂಡ ನಿಯೋಜಿಸಲಾಗಿದೆ.

ADVERTISEMENT

ಕೋಡಿಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಸುಧಾ, ತಾಲ್ಲೂಕು ಆಡಳಿತದ ಅಧಿಕಾರಿಗಳು ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮದಲ್ಲಿರುವ ಶೇ 90ರಷ್ಟು ಜನರು ಕೃಷಿ, ವ್ಯಾಪಾರ, ದಿನಗೂಲಿ ಕಾರ್ಮಿಕರಾಗಿ ಜೀವನ ನಡೆಸುತ್ತಿದ್ದಾರೆ. ನಿತ್ಯ ದುಡಿದರೆ ಮಾತ್ರ ಜೀವನ ನಡೆಸಲು ಸಾಧ್ಯ. ಆದರೆ ಕಳೆದ 3 ದಿನಗಳಿಂದ ಗ್ರಾಮದಿಂದ ಯಾರೂ ಹೊರಹೋಗದಂತೆ ಮತ್ತು ಗ್ರಾಮದೊಳಗೆ ಯಾರೂ ಬರದಂತೆ ನಿಷೇಧಿಸಿರುವುದರಿಂದ ಎಲ್ಲ ಕೃಷಿ ಚಟುವಟಿಕೆ, ವ್ಯಾಪಾರಗಳು, ಕೂಲಿ ಕೆಲಸಗಳು ಸ್ಥಗಿತವಾಗಿವೆ. ಕೋಡಿಹಳ್ಳಿ ಗ್ರಾಮಸ್ಥರನ್ನು ಯಾರೂ ಕೆಲಸಕ್ಕೂ ಕರೆಯುತ್ತಿಲ್ಲ. ಇದರಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಹಾಗಾಗಿ ಕನಿಷ್ಠ 15ದಿನಗಳಿಗಾಗುವಷ್ಟು ದಿನಸಿ, ತರಕಾರಿ, ಅಡುಗೆ ಅನಿಲವನ್ನು ಉಚಿತವಾಗಿ ನೀಡಬೇಕು ಎಂದು ಗ್ರಾಮದ ವಿ. ಸೋಮಶೇಖರ್ ಮನವಿ ಮಾಡಿದರು.

‘ಕೊರೊನಾ ಸೋಂಕಿನಿಂದ ಸೀಲ್‍ಡೌನ್ ಆದ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿಗಳಲ್ಲಿ ಬಡವರು, ನಿರ್ಗತಿಕರು, ಕೂಲಿಕಾರ್ಮಿಕರ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಲಾಗುವುದು. ಎಲ್ಲ ಕುಟುಂಬಗಳಿಗೆ ತಾಲ್ಲೂಕು ಆಡಳಿತದಿಂದ ಉಚಿತವಾಗಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಗುವುದು. ಗ್ರಾಮದಲ್ಲಿ ನೀರಿನ ಸಮಸ್ಯೆಯಾಗದಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು. ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆ, ನೈರ್ಮಲ್ಯ ಕಾಪಾಡಲಾಗುವುದು. ಗ್ರಾಮಸ್ಥರ ಸಮಸ್ಯೆ ಆಲಿಸಲು ಗ್ರಾಮದಲ್ಲೇ ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಇರುವಂತೆ ಆದೇಶಿಸಲಾಗುವುದು’ತಾಲ್ಲೂಕು ಪಂಚಾಯಿತಿ ಇಒ ಡಾ.ಶ್ರೀಧರ ಬಾರಕೇರ ಭರವಸೆ ನೀಡಿದರು.

ತಹಶೀಲ್ದಾರ್ ಮಲಿಕಾರ್ಜುನ, ‘ಗ್ರಾಮದಲ್ಲಿರುವ ಎಲ್ಲ ಅಂಗಡಿಗಳು ಕೋವಿಡ್-19 ನಿಯಮಗಳನ್ನು ಪಾಲಿಸಿ ಬಾಗಿಲು ತೆರೆಯಲು ಸೂಚಿಸಲಾಗಿದೆ. ಗ್ರಾಮಕ್ಕೆ ಅಗತ್ಯ ಸೇವೆಗಳ ವಾಹನಗಳು ತೆರಳಲು ಅನುವು ಮಾಡಿಕೊಟ್ಟಿದೆ. ಜತೆಗೆ ಅಡುಗೆ ಅನಿಲ ಸರಬರಾಜಿಗೂ ಕ್ರಮ ಕೈಗೊಳ್ಳಲಾಗುವುದು. ಗ್ರಾಮದ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲು ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಲಾಗುವುದು. ಕೃಷಿ ಚಟುವಟಿಕೆಗೆ ಯಾವುದೇ ಅಡ್ಡಿ ಮಾಡುವುದಿಲ್ಲ. ದಿನಗೂಲಿ ನೌಕರರು ಕೆಲಸಗಳಿಗೆ ತೆರಳಬಹುದು. ಆದರೆ ಅಂತರ ಕಾಪಾಡಿಕೊಂಡು ಕೆಲಸ ಮಾಡಬೇಕು’ ಎಂದು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಇಒಶ್ರೀಧರ ಬಾರಕೇರ ಅವರನ್ನು ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮಕ್ಕೆ ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ. ಗ್ರಾಮಸ್ಥರಿಗೆ ಯಾವುದೇ ಕುಂದು ಕೊರತೆ ಉಂಟಾಗದಂತೆ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.