ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ಭ್ರಷ್ಟಾಚಾರ ಮುಕ್ತ ಆಗಬೇಕು: ರಾಜಶೇಖರ ಮುಲಾಲಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:32 IST
Last Updated 11 ಮಾರ್ಚ್ 2021, 16:32 IST
ರಾಜಶೇಖರ ಮುಲಾಲಿ
ರಾಜಶೇಖರ ಮುಲಾಲಿ   

ಚಿತ್ರದುರ್ಗ: ಕನ್ನಡ ಸಾಹಿತ್ಯ ಪರಿಷತ್ತನ್ನು ಭ್ರಷ್ಟಾಚಾರದಿಂದ ಮುಕ್ತ ಮಾಡುವ ಉದ್ದೇಶದಿಂದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಅಣ್ಣಾ ಫೌಂಡೇಷನ್‌ ಅಧ್ಯಕ್ಷ ರಾಜಶೇಖರ ಮುಲಾಲಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶತಮಾನದ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತು ಗಂಜಿ ಕೇಂದ್ರವಾಗಿದೆ. ಸರ್ಕಾರದ ನಿವೃತ್ತ ನೌಕರರ ತಾಣವಾಗಿ ಪರಿಣಮಿಸಿದೆ. ಸರ್ಕಾರದಲ್ಲಿ ಲಾಬಿ ಮಾಡುವ ಉದ್ದೇಶದಿಂದ ಅನೇಕರು ಪರಿಷತ್ತನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಜನರಲ್ಲಿ ಬೇರೂರಿದೆ’ ಎಂದು ಹೇಳಿದರು.

‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿವೆ. ಸಾಹಿತ್ಯ ಪರಿಷತ್ತಿನಲ್ಲಿ ಭ್ರಷ್ಟಾಚಾರದ ವಾಸನೆ ಪಸರಿಸುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿದವರು ಹಾಗೂ ಒಂದೇ ಸಮುದಾಯಕ್ಕೆ ಸೇರಿದವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಪರಿಷತ್ತು ನಿರೀಕ್ಷಿತ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ’ ಎಂದರು.

ADVERTISEMENT

‘ರಾಜ್ಯದಲ್ಲಿ ಆರು ಕೋಟಿ ಕನ್ನಡಿಗರಿದ್ದಾರೆ. ಆದರೆ, ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ನಾಲ್ಕು ಲಕ್ಷವನ್ನೂ ದಾಟಿಲ್ಲ. ಸದಸ್ಯತ್ವ ನೀಡುವಲ್ಲಿಯೂ ಪಕ್ಷಪಾತ ನಡೆದಿದೆ. ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಉಳಿಸಬೇಕಿದೆ. ಹೀಗಾಗಿ, ಯುವ ಸಮೂಹಕ್ಕೆ ಅವಕಾಶ ಸಿಗಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಅಧ್ಯಕ್ಷರಾಗಿ ಆಯ್ಕೆಯಾದರೆ ಪರಿಷತ್ತಿಗೆ ಡಿಜಿಟಲ್‌ ಸ್ಪರ್ಶ ನೀಡಲಾಗುವುದು. ಮಹಿಳಾ ಘಟಕವನ್ನು ಅಸ್ತಿತ್ವಕ್ಕೆ ತರಲು ಶ್ರಮಿಸುತ್ತೇನೆ. ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಭವನ ನಿರ್ಮಿಸುತ್ತೇನೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದರು.

ಪತ್ರಕರ್ತ ಮಾಲತೇಶ್ ಅರಸ್ ಮಾತನಾಡಿ, ‘ಕನ್ನಡ ಭವನ ನಿರ್ಮಿಸುವ ಉದ್ದೇಶದಿಂದ ಹಿಂದಿನ ಅಧ್ಯಕ್ಷರನ್ನು ಬೆಂಬಲಿಸಿದ್ದೆವು. ಆದರೆ, ಅವರು ಸರ್ವಾಧಿಕಾರಿ ಧೋರಣೆ ಹೊಂದಿದ್ದರು. ಹೀಗಾಗಿ, ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.