ADVERTISEMENT

ಗೌರಸಮುದ್ರ ಮಾರಮ್ಮದೇವಿ ಜಾತ್ರೆಗೆ ಕ್ಷಣಗಣನೆ

ಅವಳಿ ರಾಜ್ಯಗಳ ಆರಾಧ್ಯದೈವ, ಬುಡಕಟ್ಟು ಸಂಸ್ಕೃತಿಯ ಅನಾವರಣ

ಕೊಂಡ್ಲಹಳ್ಳಿ ಜಯಪ್ರಕಾಶ
Published 29 ಆಗಸ್ಟ್ 2022, 5:49 IST
Last Updated 29 ಆಗಸ್ಟ್ 2022, 5:49 IST
ಚಳ್ಳಕೆರೆ ತಾಲ್ಲೂಕು ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನ (ಎಡಚಿತ್ರ). ಮಾರಮ್ಮದೇವಿ ಮೂರ್ತಿ
ಚಳ್ಳಕೆರೆ ತಾಲ್ಲೂಕು ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನ (ಎಡಚಿತ್ರ). ಮಾರಮ್ಮದೇವಿ ಮೂರ್ತಿ   

ಮೊಳಕಾಲ್ಮುರು:ರೋಗಗಳ ನಿವಾರಕಿ ಎಂಬ ಖ್ಯಾತಿ ಪಡೆದಿರುವ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿಯ ಗೌರಸಮುದ್ರ ಮಾರಮ್ಮದೇವಿಯ ತುಂಬಲಿನ ದೊಡ್ಡಪರಿಷೆ ಆಗಸ್ಟ್‌ 30ರಂದು ನಡೆಯಲಿದ್ದು, ಸಿದ್ಧತೆಗಳು ಸಾಗಿವೆ.

ರಾಜ್ಯ ಮತ್ತು ಸೀಮಾಂಧ್ರದ ಜನರ ಮನೆ ದೇವಿಯಾಗಿರುವ ‘ಗೌಸಂದ್ರ ಮಾರಮ್ಮ’ ದೇವಿ ಜಾತ್ರೆಯು ‘ಮಧ್ಯಾಹ್ನ ಮಾರಿ ಜಾತ್ರೆ’ ಎಂಬ ಹೆಸರೂ ಪಡೆದಿದೆ.

ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಿಯ ಭಕ್ತರಾಗಿ ಗುರುತಿಸಿಕೊಂಡಿದ್ದಾರೆ. ಜಾತ್ರೆಯಲ್ಲಿ ಎರಡೂ ರಾಜ್ಯಗಳ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳು ಸಂಗಮವಾಗುವುದನ್ನು ಕಾಣಬಹುದು. ಜಿಲ್ಲೆ ಮಟ್ಟಿಗೆ ನಾಯಕನಹಟ್ಟಿ ಬಿಟ್ಟಲ್ಲಿ ಇದು ಅತಿದೊಡ್ಡ ಜಾತ್ರೆ ಎಂಬ ಖ್ಯಾತಿಗೆಒಳಗಾಗಿದೆ.

ADVERTISEMENT

ಗೌರಸಮುದ್ರದಿಂದ 3 ಕಿ.ಮೀ. ದೂರದಲ್ಲಿರುವ ತುಂಬಲು ಸ್ಥಳದಲ್ಲಿ ತುಂಬಲು ಪರಿಷೆ ನಡೆಯುತ್ತದೆ. ದೊಡ್ಡ ತುಂಬಲು ಪರಿಷೆ ನಡೆದು ಒಂದು ತಿಂಗಳ ನಂತರ ಮರಿ ಪರಿಷೆ ನಡೆಯುತ್ತದೆ. ಒಂದು ತಿಂಗಳ ಕಾಲ ಜಿಲ್ಲೆ, ನೆರೆ ಜಿಲ್ಲೆಗಳ ಬಹುತೇಕ ಗ್ರಾಮಗಳಲ್ಲಿ ವಾರದ ಲೆಕ್ಕಾಚಾರದಲ್ಲಿ ದೇವಿ ಜಾತ್ರೆಯನ್ನುಆಚರಿಸಲಾಗುತ್ತದೆ. ಪ್ರತಿವರ್ಷ ಶ್ರಾವಣದ ಕೊನೆ ಅಮಾವಾಸ್ಯೆ ನಂತರದ ಮಂಗಳವಾರದಂದು ಈ ಜಾತ್ರೆ ನಡೆಸಿಕೊಂಡು ಬರುವುದು ವಾಡಿಕೆ.

ಒಂದು ವಾರದ ಹಿಂದೆ ಗ್ರಾಮದ ಬುಡ್ಡೆಕಲ್ಲಿಗೆ ನೀರು ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿದೆ. ಆಗಸ್ಟ್‌ 29ರಂದು ಹುತ್ತಕ್ಕೆ ಅಭಿಷೇಕ, ಆಗಸ್ಟ್‌ 30ರಂದು ಬೆಳಿಗ್ಗೆ 10ಕ್ಕೆ ಗೌರಸಮುದ್ರದಿಂದ ತುಂಬಲಿಗೆ ಮೆರವಣಿಗೆ ನಡೆಯಲಿದೆ. ದೇವಿ ತುಂಬಲಿಗೆ ಸಂಜೆ ಮರಳಿ ಗ್ರಾಮಕ್ಕೆ ವಾಪಸ್ಆಗಲಿದೆ. ಆಗಸ್ಟ್‌ 31ರಂದು ಮಾರಮ್ಮದೇವಿ ದೇವಸ್ಥಾನ ಎದುರು ಸಂಜೆ 4ಕ್ಕೆ ಸಿಡಿ ಉತ್ಸವ, ಸೆ. 1ರಂದು ಓಕುಳಿ ಹಾಗೂ ಸೆ.2ರಂದು ದೇವಿಗೆ ಮಹಾಮಂಗಳಾರತಿ, ಗುಡಿ ಪ್ರವೇಶ ಮೂಲಕ ಜಾತ್ರೆಗೆ ತೆರೆಬೀಳಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಹರಕೆಗಳ ದೇವಿ ಖ್ಯಾತಿಯಾಗಿದ್ದು, ತುಂಬಲಿನಲ್ಲಿ ಭಕ್ತರು ನಾನಾ ರೀತಿಯ ಹರಕೆಗಳನ್ನು ಸಲ್ಲಿಸುತ್ತಾರೆ. ಕೋವಿಡ್ ಕಾರಣ ಎರಡು ವರ್ಷ ಜಾತ್ರೆ ನಡೆದಿರಲಿಲ್ಲ. ಈವರ್ಷ ಹೆಚ್ಚಿನ ಭಕ್ತರು ಭಾಗವಹಿಸುವ ನಿರೀಕ್ಷೆ ಇಿೆ. ಆದರೆ ಸಂಪರ್ಕರಸ್ತೆಗಳ ದುರಸ್ತಿ ಸಮರ್ಪಕವಾಗಿ ಮಾಡಿಲ್ಲ. ಕೆಲ ರಸ್ತೆಗಳ ಗುಂಡಿಗಳಿಗೆ ಮಣ್ಣು ಹಾಕಲಾಗಿದ್ದು, ಮಳೆ ಬಂದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗುವ ಆತಂಕವಿದೆ ಎಂದು ಗ್ರಾಮದ ಚಂದ್ರಣ್ಣ ಹೇಳಿದರು.

ಆಂಧ್ರದಿಂದ ಬಂದ ದೇವಿ
ಮಾರಮ್ಮದೇವಿ ಮೂಲ ಸ್ಥಳ ಆಂಧ್ರಪ್ರದೇಶದ ನಿಡಗಲ್ಲು. ಮ್ಯಾಸನಾಯಕ ಜನಾಂಗಕ್ಕೆ ಸೇರಿದ ಮಾರಮ್ಮ ಕುಟುಂಬ ಶ್ರೀಶೈಲ ಭಾಗದಲ್ಲಿ ಪಶುಪಾಲನೆ ಮಾಡುತ್ತಿತ್ತು. ದೇವಿಯ ತಂದೆ ಸಂಚುಸಿಕಾ ನಾಯಕ ಹಾಗೂ ತಾಯಿ ದಾನಸಾಲಯ್ಯ. ಉಪ್ಪಾರ ಜನಾಂಗದ ಭಕ್ತೆಯೊಬ್ಬರ ಮನವಿಗೆ ಓಗೊಟ್ಟು ಗೌರಸಮುದ್ರಕ್ಕೆ ಬಂದು ನೆಲೆಸಿದಳು ಎಂಬ ಐತಿಹ್ಯವಿದೆ. ಈ ಕಾರಣದಿಂದಾಗಿ ಇಂದಿಗೂ ಉಪ್ಪಾರ ಜನಾಂಗದವರು ಜಾತ್ರೆಯಲ್ಲಿ ಪ್ರಥಮ ಪೂಜೆ ನೆರವೇರಿಸುತ್ತಾರೆಎಂದು ಪೂಜಾರಿ ಪಿ.ವಿ. ಬೊಮ್ಮಯ್ಯ ಹೇಳುತ್ತಾರೆ.

ಮಾರಮ್ಮದೇವಿ ಮೂಲ ಹೆಸರು ಪೆದ್ದಕ್ಕ ರಾಯಲದೇವಿಯಾಗಿದ್ದು, ಮ್ಯಾಸನಾಯಕ ಜನಾಂಗದ 12ಪೆಟ್ಟಿಗೆ ದೇವರದಲ್ಲಿ ದೇವಿ ಕುಟುಂಬದ ಪೆಟ್ಟಿಗೆ ದೇವರು ಸೇರಿದೆ. ಪಾಳೆಗಾರ ಕುಟುಂಬಕ್ಕೆ ಸೇರಿದ ಮಾರಮ್ಮದೇವಿ ಕುಟುಂಬಸ್ಥರು ಬೃಹತ್ ಪ್ರಮಾಣದಪಶುಪಾಲನೆ ಮಾಡುತ್ತಿದ್ದರು ಎಂದು ಈ ವಿಷಯದಲ್ಲಿ ಅಧ್ಯಯನ ನಡೆಸುತ್ತಿರುವ ನೇರ್ಲಹಳ್ಳಿಯ ಕೆ.ಜೆ. ಜಯಲಕ್ಷ್ಮಿ ಹೇಳಿದರು.

*

ಜಾತ್ರಾ ಸ್ಥಳದಲ್ಲಿ ಸರ್ಕಾರದ ಆದೇಶದಂತೆ ಪ್ರಾಣಿಬಲಿಯನ್ನು ನಿಷೇಧಿಸಲಾಗಿದ್ದು, ಸಂಪರ್ಕ ರಸ್ತೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಭಕ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ.
–ಎನ್. ರಘುಮೂರ್ತಿ, ತಹಶೀಲ್ದಾರ್, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.