ADVERTISEMENT

ಚಿತ್ರದುರ್ಗ | 20 ವಲಸೆ ಕಾರ್ಮಿಕರಿಗೆ ಕೋವಿಡ್‌-19

ತಮಿಳುನಾಡಿನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದರು, ಆಂಧ್ರಪ್ರದೇಶದ ಗಡಿಯಲ್ಲಿ ಸಿಕ್ಕಿಬಿದ್ದರು

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:35 IST
Last Updated 26 ಮೇ 2020, 16:35 IST
ಚಳ್ಳಕೆರೆಯಲ್ಲಿ ಶಂಕಿತರನ್ನು ಕ್ವಾರಂಟೈನ್‌ ಮಾಡಲಾಗಿರುವ ಬಿಸಿಎಂ ಹಾಸ್ಟೆಲ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಚಳ್ಳಕೆರೆಯಲ್ಲಿ ಶಂಕಿತರನ್ನು ಕ್ವಾರಂಟೈನ್‌ ಮಾಡಲಾಗಿರುವ ಬಿಸಿಎಂ ಹಾಸ್ಟೆಲ್‌ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.   

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ ಉತ್ತರಪ್ರದೇಶದ 20 ವಲಸೆ ಕಾರ್ಮಿಕರಿಗೆ ‘ಕೋವಿಡ್‌–19’ ಇರುವುದು ಮಂಗಳವಾರ ದೃಢಪಟ್ಟಿದೆ. ಇವರು ಪಿ-1630 ರೋಗಿಯ ಪ್ರಾಥಮಿಕ ಸಂಪರ್ಕಿತರು.

ಸೋಂಕಿತರಲ್ಲಿ 15ವರ್ಷದ ಬಾಲಕನಿಂದ 45 ವರ್ಷದ ಪುರುಷರವರೆಗೆ ಎಲ್ಲ ವಯೋಮಾನದವರು ಇದ್ದಾರೆ. ಕೋವಿಡ್‌ ಆಸ್ಪತ್ರೆಗೆ ಸ್ಥಳಾಂತರಿಸುವ ಬದಲು ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್‌ನ ‘ಕೋವಿಡ್‌ ಕೇರ್‌ ಕೇಂದ್ರ’ದಲ್ಲಿ ಇವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

21 ವರ್ಷದ ಪಿ–2234, 33 ವರ್ಷದ ಪಿ–2235, 25 ವರ್ಷದ ಪಿ–2236, 46 ವರ್ಷದ ಪಿ–2237, 17 ವರ್ಷದ ಪಿ–2238, 23 ವರ್ಷದ ಪಿ–2239, 25 ವರ್ಷದ ಪಿ–2240, 31 ವರ್ಷದ ಪಿ–2241, 26 ವರ್ಷದ ಪಿ–2242, 30 ವರ್ಷದ ಪಿ–2243, 36 ವರ್ಷದ ಪಿ–2244, 20 ವರ್ಷದ ಪಿ–2245, 48 ವರ್ಷದ ಪಿ–2246, 27 ವರ್ಷದ ಪಿ–2247, 15 ವರ್ಷದ ಪಿ–2248, 30 ವರ್ಷದ ಪಿ–2249, 17 ವರ್ಷದ ಪಿ–2250, 20 ವರ್ಷದ ಪಿ–2251, 22 ವರ್ಷದ ಪಿ–2252, 31 ವರ್ಷದ ಪಿ–2253 ಸೋಂಕಿತರು. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ.

ADVERTISEMENT

ಆಂಧ್ರ ಗಡಿಯಲ್ಲಿ ಸಿಕ್ಕಿಬಿದ್ದರು:ಉತ್ತರಪ್ರದೇಶದ ಗೋರಕ್‌ಪುರ ಜಿಲ್ಲೆಯ 58 ಕಾರ್ಮಿಕರು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದರು. ಮೇ 14ರಂದು ಚೆನ್ನೈನಿಂದ ಸರಕು ಸಾಗಣೆ ವಾಹನದಲ್ಲಿ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಹೊಸೂರು, ಚಿಕ್ಕಬಳ್ಳಾಪುರ, ಪಾವಗಡ ಮೂಲಕ ಚಳ್ಳಕೆರೆ ಗಡಿ ತಲುಪಿದ್ದರು. ಅನುಮತಿ ಪಡೆಯದೇ ಪ್ರಯಾಣ ಬೆಳೆಸುತ್ತಿದ್ದ ಇವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ಕ್ವಾರಂಟೈನ್‌ಗೆ ಒಳಪಡಿಸಿದ್ದರು.

ಹೀಗೆ ಕ್ವಾರಂಟೈನ್‌ನಲ್ಲಿದ್ದ 25 ವರ್ಷದ ವಾಹನ ಚಾಲಕನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇವರ ಗಂಟಲು ದ್ರವದ ಮಾದರಿಯನ್ನು ಮೇ 18ರಂದು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇವರಿಗೆ ಸೋಂಕು ತಗುಲಿದ್ದು ಮೇ 22ರಂದು ಖಚಿತವಾಗಿತ್ತು. ಈ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 58 ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 20 ಕಾರ್ಮಿಕರ ವರದಿ ಲಭ್ಯವಾಗಿದ್ದು, ಕೋವಿಡ್‌ ಇರುವುದು ದೃಢಪಟ್ಟಿದೆ.

‘ಕ್ವಾರಂಟೈನ್‌ನಲ್ಲಿದ್ದ ವಲಸೆ ಕಾರ್ಮಿಕರಿಗೆ ಕೋವಿಡ್‌–19 ಅಂಟಿರುವುದು ಖಚಿತವಾಗಿದೆ. ಇವರು ಚಿತ್ರದುರ್ಗ ಜಿಲ್ಲೆಯವರಲ್ಲ. ಅನುಮತಿ ಪಡೆಯದೇ ಪ್ರಯಾಣ ಮಾಡುತ್ತಿದ್ದವರನ್ನು ವಶಕ್ಕೆ ಪಡೆದು ಕ್ವಾರಂಟೈನ್‌ ಮಾಡಲಾಗಿತ್ತು. ಇದರಿಂದ ಜಿಲ್ಲೆಯ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಫಾಲಾಕ್ಷ ತಿಳಿಸಿದ್ದಾರೆ.

ಸೋಂಕಿತರು ಹೆಚ್ಚುವ ಸಾಧ್ಯತೆ:ಸೋಂಕಿತರು ಈಚರ್‌ ವಾಹನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು. ಸೋಂಕು ಸುಲಭವಾಗಿ ಎಲ್ಲರಿಗೂ ಪಸರಿಸಿರುವ ಸಾಧ್ಯತೆ ಇದೆ. ‍ಪ್ರಯೋಗಾಲಯದಿಂದ 20 ಮಾದರಿಗಳ ವರದಿ ಮಾತ್ರ ಲಭ್ಯವಾಗಿದ್ದು, ಉಳಿದವರ ವರದಿ ಇನ್ನೂ ಬಾಕಿ ಇದೆ. ಶೀಘ್ರವೇ ವರದಿ ನೀಡುವಂತೆ ಜಿಲ್ಲಾಡಳಿತ ಕೋರಿಕೆ ಸಲ್ಲಿಸಿದೆ.

ಚಳ್ಳಕೆರೆ ತಾಲ್ಲೂಕಿನ ನಾಗಪ್ಪನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸೋಂಕಿತರನ್ನು ತಪಾಸಣೆ ಮಾಡಿದ ಪೊಲೀಸರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸೋಂಕಿತರ ಸಂಪರ್ಕಕ್ಕೆ ಬಂದ ಪ್ರಾಥಮಿಕ ಮತ್ತು ದ್ವಿತೀಯ ಹಂತದ ವ್ಯಕ್ತಿಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಬಿಸಿಎಂ ಹಾಸ್ಟೆಲ್‍ನಲ್ಲಿ ಚಿಕಿತ್ಸೆ:‘ಕೋವಿಡ್-19’ ಸೋಂಕು ದೃಢಪಟ್ಟಿರುವ ಕಾರ್ಮಿಕರ ಚಿಕಿತ್ಸೆಗಾಗಿ ಚಳ್ಳಕೆರೆಯಲ್ಲಿ ‘ಕೋವಿಡ್ ಕೇರ್‌ ಕೇಂದ್ರ’ವನ್ನು ಸ್ಥಾಪಿಸಲಾಗಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಿ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.

ಶಂಕಿತರನ್ನು ಚಳ್ಳಕೆರೆಯ ಬಿಸಿಎಂ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸಂಸ್ಕರಿಸಿದ ತಟ್ಟೆ, ಲೋಟಗಳನ್ನು ನೀಡಲಾಗಿದ್ದು, ಊಟವನ್ನು ಒದಗಿಸಲಾಗುತ್ತಿದೆ.

‘ಸೋಂಕಿತರ ಚಿಕಿತ್ಸೆಗಾಗಿ 9 ಶುಶ್ರೂಷಕಿಯರು ಹಾಗೂ ಡಿ ದರ್ಜೆಯ 6 ನೌಕರರನ್ನು ನಿಯೋಜಿಸಲಾಗಿದೆ. ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಸ್ವಯಂ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ’ ಎಂದು ಬಿಸಿಎಂ ಹಾಸ್ಟೆಲ್‍ಗೆ ಭೇಟಿ ನೀಡಿದ್ದ ಡಿಎಚ್‌ಒ ಡಾ.ಫಾಲಾಕ್ಷ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.