ADVERTISEMENT

21 ಜನರಿಗೆ ಕೋವಿಡ್, ಒಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:55 IST
Last Updated 16 ಜುಲೈ 2020, 16:55 IST

ಚಿತ್ರದುರ್ಗ: ಜಿಲ್ಲೆಯ 21 ಜನರಿಗೆ ಕೋವಿಡ್ ಇರುವುದು ಗುರುವಾರ ದೃಢಪಟ್ಟಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 154ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 3ಕ್ಕೆ ಹೆಚ್ಚಿದೆ.

ಚಿತ್ರದುರ್ಗದ 59, 62, 50, 45, 36 ವರ್ಷದ ಪುರುಷರು, 19 ವರ್ಷದ ಯುವತಿ, 28 ಹಾಗೂ 33 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಳ್ಳಕೆರೆಯ 36, 53 ವರ್ಷದ ಪುರುಷರು, 40 ವರ್ಷದ ಮಹಿಳೆ, ಮೊಳಕಾಲ್ಮೂರಿನ 43 ವರ್ಷದ ಪುರುಷ, ಹೊಸದುರ್ಗದ 21, 58, 40, 27 ವರ್ಷದ ಪುರುಷ, 35, 55 ವರ್ಷದ ಮಹಿಳೆಯಲ್ಲಿ ಕೋವಿಡ್ ದೃಢವಾಗಿದೆ.

ಚಿಕ್ಕಜಾಜೂರಿನ 34 ವರ್ಷದ ಪುರುಷ, ಹೊಳಲ್ಕೆರೆಯ 23 ವರ್ಷದ ಪುರುಷ, ಹಿರಿಯೂರಿನ 53 ವರ್ಷದ ಪುರುಷ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಗುರುವಾರ 355 ಜನರ ಗಂಟಲು, ಮೂಗು ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ 21 ಜನರಲ್ಲಿ ಸೋಂಕು ಪತ್ತೆಯಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಸಂಗಪ್ಪ ಅವರ ಕಾರು ಚಾಲಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ADVERTISEMENT

ಸೋಂಕಿತರ ಪೈಕಿ 96 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಸದ್ಯ 55 ಸಕ್ರಿಯ ಪ್ರಕರಣಗಳಿವೆ. ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 20, ಹಿರಿಯೂರು ತಾಲ್ಲೂಕು ಧರ್ಮಪುರದಲ್ಲಿ 5, ಚಳ್ಳಕೆರೆ ತಾಲ್ಲೂಕು ಪರಶುರಾಂಪುರದಲ್ಲಿ 2, ಹೊಸದುರ್ಗ ತಾಲ್ಲೂಕು ಬೆಲಗೂರಿನಲ್ಲಿ 4, ಮೊಳಕಾಲ್ಮೂರು ತಾಲ್ಲೂಕು ರಾಂಪುರದಲ್ಲಿ 1, ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿಯಲ್ಲಿ 2, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗದಲ್ಲಿ 5 ಜನ ಸೋಂಕಿತರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 42 ಕಂಟೈನ್ಮೆಂಟ್ ವಲಯಗಳಿವೆ.

62 ವರ್ಷದ ಸೋಂಕಿತ ಸಾವು

ಚಿತ್ರದುರ್ಗದ 62 ವರ್ಷದ ಸೋಂಕಿತರೊಬ್ಬರು ತೀವ್ರ ಉಸಿರಾಟದ ತೊಂದರೆಯಿಂದ ಗುರುವಾರ ಮೃತಪಟ್ಟಿದ್ದಾರೆ. ಇವರನ್ನು ಬುಧವಾರ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವಾಚ್‌ ಅಂಗಡಿಯ ಮಾಲೀಕರಾಗಿದ್ದ ವ್ಯಕ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರಿಂದ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮಿ ವಿವೇಕಾನಂದ ನಗರದ ಸ್ಮಶಾನದಲ್ಲಿ ಗುರುವಾರ ರಾತ್ರಿ ಕೋವಿಡ್‌ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನೆರವೇರಿತು.

ಬೆಂಗಳೂರಿನಿಂದ ಮರಳಿದ ಬಳಿಕ ಸೋಂಕಿತರ ಮನೆಯಲ್ಲಿ ಔತಣಕೂಟ ನಡೆದಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಹಲವರು ಆತಂಕಗೊಂಡಿದ್ದಾರೆ. ಮೃತ ವ್ಯಕ್ತಿಯ ಕುಟುಂಬದ ಐವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.