ADVERTISEMENT

ಕೋವಿಡ್‌ ಚಿಕಿತ್ಸೆಗೆ ಭರದ ಸಿದ್ಧತೆ- ಜಿಲ್ಲೆಯಲ್ಲಿ 27 ಸಕ್ರಿಯ ಪ್ರಕರಣ

ಪಾಸಿಟಿವಿಟಿ ದರ ಶೇ 0.26

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 14:31 IST
Last Updated 5 ಜನವರಿ 2022, 14:31 IST
ಕವಿತಾ ಎಸ್‌.ಮನ್ನಿಕೇರಿ
ಕವಿತಾ ಎಸ್‌.ಮನ್ನಿಕೇರಿ   

ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ನಿಧಾನವಾಗಿ ಹೆಚ್ಚಾಗತೊಡಗಿದೆ. ಪಾಸಿಟಿವಿಟಿ ದರ ಶೇ 0.12ರಿಂದ ಶೇ 0.26ಕ್ಕೆ ಏರಿಕೆಯಾಗಿದೆ. ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಆರೋಗ್ಯ ಇಲಾಖೆ ಭರದ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸರ್ಕಾರ ಹೊರಡಿಸಿದ ಮಾರ್ಗಸೂಚಿಯ ಅನುಷ್ಠಾನಕೆ ಜಿಲ್ಲಾಡಳಿತ ಸಜ್ಜಾಗಿದೆ.

ಚಿತ್ರದುರ್ಗದಲ್ಲಿ ಬುಧವಾರ ಆರು ಹೊಸ ಪ್ರಕರಣಗಳು ವರದಿಯಾಗಿವೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಐದು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ನಿತ್ಯ ಸರಾಸರಿ 1,500 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಆರೋಗ್ಯ ಇಲಾಖೆ ಆಸ್ಪತ್ರೆಗಳನ್ನು ಸಜ್ಜುಗೊಳಿಸುವಲ್ಲಿ ನಿರತವಾಗಿದೆ. ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಆಮ್ಲಜನಕಕ್ಕೆ ಕೊರತೆ ಉಂಟಾಗದಂತೆ ಎಚ್ಚರ ವಹಿಸಲು ಮುಂದಾಗಿದೆ. ಆಮ್ಲಜನಕ ಸಹಿತ ಹಾಸಿಗೆ, ತೀವ್ರ ನಿಗಾ ಘಟಕ ಹೆಚ್ಚಿಸಲಾಗಿದೆ. ನೂತನ ತಂತ್ರಜ್ಞರ ನೇಮಕ, ಶುಶ್ರೂಷಕಿಯರಿಗೆ ತರಬೇತಿ ನೀಡಲಾಗುತ್ತಿದೆ.

ADVERTISEMENT

‘ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆಯನ್ನು 400ಕ್ಕೆ ಹೆಚ್ಚಿಸಲಾಗಿದೆ. ತಾಲ್ಲೂಕು ಕೇಂದ್ರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಲಾ 100 ಹಾಸಿಗೆ, 11 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಲಾ 30 ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದರೆ ಹಾಸಿಗೆ ಹೆಚ್ಚಿಸಲು ಸಿದ್ಧವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡುವಂತೆ ಸೂಚನೆ ನೀಡಲಾಗಿದೆ. ತೀವ್ರ ನಿಗಾ ಘಟಕ ಹಾಗೂ ಮಕ್ಕಳಿಗೆ ಪ್ರತ್ಯೇಕ ವಾರ್ಡ್‌ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಂಗನಾಥ್‌ ಮಾಹಿತಿ ನೀಡಿದರು.

ಆಮ್ಲಜನಕ ಉತ್ಪಾದನೆಗೆ ಜಿಲ್ಲೆಯಲ್ಲಿ ಏಳು ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಹಾಗೂ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಘಟಕಗಳಿವೆ. ಹೊಳಲ್ಕೆರೆ ಹಾಗೂ ಹೊಸದುರ್ಗ ಹೊರತುಪಡಿಸಿ ಉಳಿದ ಎಲ್ಲ ತಾಲ್ಲೂಕಿನ ಆಮ್ಲಜನಕ ಉತ್ಪಾದನಾ ಘಟಕಗಳು ಸೇವೆ ಒದಗಿಸುತ್ತಿವೆ. ಸಮುದಾಯ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ನೀಡಲಾಗಿದೆ.

‘ಎರಡು ತಿಂಗಳಲ್ಲಿ ವಿದೇಶದಿಂದ ಜಿಲ್ಲೆಗೆ 65 ಜನರು ಮರಳಿದ್ದಾರೆ. ಎಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಎಲ್ಲರಿಗೂ ಕಡ್ಡಾಯವಾಗಿ ಏಳು ದಿನ ಮನೆಯಲ್ಲಿ ಪ್ರತ್ಯೇಕವಾಗಿ ಇರುವಂತೆ ಸೂಚಿಸಲಾಗಿದೆ. ಹೊರ ರಾಜ್ಯದಿಂದ ಬರುವವರ ಮೇಲೆಯೂ ಆರೋಗ್ಯ ಇಲಾಖೆ ಸಿಬ್ಬಂದಿ ನಿಗಾ ಇಡುತ್ತಿದ್ದಾರೆ’ ಎಂದು ರಂಗನಾಥ್‌ ವಿವರಿಸಿದರು.

ಬಸ್‌ ಸಂಚಾರ ಸಹಜ

ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದರೂ ವಾರಂತ್ಯದಲ್ಲಿ ಬಸ್‌ ಸಂಚಾರ ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಾರಿಗೆ ಇಲಾಖೆಯ ಸೂಚನೆಯ ಅನುಸಾರ ಬಸ್‌ ಸಂಚಾರಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಜ್ಜಾಗಿದೆ.

ಬಸ್‌ ಸಂಚಾರದಲ್ಲಿ ಬುಧವಾರ ಯಾವುದೇ ಬದಲಾವಣೆ ಕಂಡುಬರಲಿಲ್ಲ. ಪ್ರಯಾಣಿಕರ ದಟ್ಟಣೆ ಎಂದಿನಂತೆ ಇತ್ತು. ಬೆಂಗಳೂರು ಸೇರಿ ಹಲವೆಡೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಒದಗಿಸುತ್ತಿವೆ. ಶುಚಿತ್ವ, ಮಾಸ್ಕ್‌ ಧರಿಸುವಂತೆ ಪ್ರಯಾಣಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ.

‘ಸಂಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಕೇಂದ್ರ ಕಚೇರಿ ನೀಡುವ ಮಾರ್ಗಸೂಚಿ ಪಾಲನೆ ಮಾಡಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಸತ್ಯಸುಂದರಂ ತಿಳಿಸಿದ್ದಾರೆ.

ಆಂಧ್ರ ಗಡಿ; ಮುಕ್ತ ಪ್ರವೇಶ

ಹೊರರಾಜ್ಯ ಹಾಗೂ ವಿದೇಶದಿಂದ ಬರುವ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದರೆ, ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.

ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿವೆ. ಆಂಧ್ರಪ್ರದೇಶದಲ್ಲಿ ಹೆಚ್ಚು ಕೋವಿಡ್‌ ಪ್ರಕರಣಗಳು ಕಂಡುಬಾರದ ಕಾರಣ ಪ್ರವೇಶ ನಿರ್ಬಂಧಿಸಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವ ಪ್ರಯಾಣಿಕರನ್ನು ಮಾತ್ರ ಕೋವಿಡ್‌ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇತ್ತೀಚೆಗೆ ಆಂಧ್ರಪ್ರದೇಶದ ಗಡಿ ಗ್ರಾಮಗಳಲ್ಲಿಯೂ ಹಲವು ಕೋವಿಡ್‌ ಪ್ರಕರಣಗಳು ವರದಿಯಾಗಿವೆ.

***

ರಾಜ್ಯ ಸರ್ಕಾರ ರೂಪಿಸಿದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಗುತ್ತದೆ. ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರದಿಂದ ವಾರ್‌ರೂಂ ಪ್ರಾರಂಭವಾಗುತ್ತಿದೆ.

- ಕವಿತಾ ಎಸ್‌.ಮನ್ನಿಕೇರಿ,ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.