ADVERTISEMENT

ಮಹಿಳಾ ವ್ಯಾಪಾರಸ್ಥರ ಪರದಾಟ: ತರಕಾರಿ ಹೊತ್ತು ಹತ್ತು ಕಿ.ಮೀ ನಡಿಗೆ

ವಾಹನ ಸಂಚಾರಕ್ಕೆ ನಿರ್ಬಂಧ

ಜಿ.ಬಿ.ನಾಗರಾಜ್
Published 10 ಮೇ 2021, 19:30 IST
Last Updated 10 ಮೇ 2021, 19:30 IST
ಚಿತ್ರದುರ್ಗ ತಾಲ್ಲೂಕಿನ ಗೋನೂರು ಹಾಗೂ ಬಚ್ಚಬೋರನಹಟ್ಟಿ ಗ್ರಾಮ ವ್ಯಾಪಾರಸ್ಥರು ಮಾರಾಟವಾಗದೇ ಉಳಿದ ತರಕಾರಿಯನ್ನು ತಲೆ ಮೇಲೆ ಹೊತ್ತು ಸೋಮವಾರ ಊರಿಗೆ ಮರಳಿದರು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಹಾಗೂ ಬಚ್ಚಬೋರನಹಟ್ಟಿ ಗ್ರಾಮ ವ್ಯಾಪಾರಸ್ಥರು ಮಾರಾಟವಾಗದೇ ಉಳಿದ ತರಕಾರಿಯನ್ನು ತಲೆ ಮೇಲೆ ಹೊತ್ತು ಸೋಮವಾರ ಊರಿಗೆ ಮರಳಿದರು.   

ಚಿತ್ರದುರ್ಗ: ರೈತರಿಂದ ಖರೀದಿಸಿದ ತರಕಾರಿಯನ್ನು ನಗರಕ್ಕೆ ತಂದು ಮಾರಾಟ ಮಾಡಿ ಆಟೊ ಹಾಗೂ ದ್ವಿಚಕ್ರ ವಾಹನದಲ್ಲಿ ಹಳ್ಳಿಗೆ ಮರಳುತ್ತಿದ್ದ ಮಹಿಳೆಯರು ಸೋಮವಾರ ಕಾಲ್ನಡಿಗೆಯಲ್ಲೇ ಹತ್ತು ಕಿ.ಮೀ ಸಾಗಿದರು. ಮಾರಾಟವಾಗದೇ ಉಳಿದಿದ್ದ ತರಕಾರಿಯ ಮೂಟೆಯೂ ಅವರ ತಲೆ ಮೇಲಿತ್ತು.

ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿದ ಪರಿಣಾಮ ತರಕಾರಿ ಮಾರಾಟ ಮಾಡುವ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದರು. ಬಿರು ಬಿಸಿಲಿನಲ್ಲಿ ಊರಿನತ್ತ ಹೆಜ್ಜೆ ಹಾಕುತ್ತಿದ್ದರೆ ವಲಸೆ ಹೊರಟ ಕಾರ್ಮಿಕರ ಗುಂಪಿನಂತೆ ಕಾಣುತ್ತಿತ್ತು. ಮೇ 24ರವರೆಗೂ ಇದೇ ಸ್ಥಿತಿ ಎಂಬ ಒಡಲೊಳಗಿನ ಸಂಕಟ ಮಾತಿನಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಹಾಗೂ ಬಚ್ಚಬೋರನಹಟ್ಟಿಯ ತರಕಾರಿ ವ್ಯಾಪಾರಸ್ಥರು ಸೋಮವಾರ ಮಧ್ಯಾಹ್ನ 11.30ಕ್ಕೆ ಕಾಲ್ನಡಿಗೆಯಲ್ಲೇ ಊರಿಗೆ ಮರಳಿದರು. ಎಂಟು ಜನರ ತಂಡದಲ್ಲಿ ಇಬ್ಬರು ಮಾತ್ರ ಪುರುಷರು. ಉಳಿದವರು ಮಹಿಳೆಯರು. ಗೋನೂರು ಗ್ರಾಮದ ನಾಲ್ವರು ಹಾಗೂ ಬಚ್ಚಬೋರನಹಟ್ಟಿಯ ನಾಲ್ವರಿಗೆ ತರಕಾರಿ ವ್ಯಾಪಾರವೇ ಜೀವನಾಧಾರ. ಸಂಕಷ್ಟ ತೋಡಿಕೊಳ್ಳಲು ರಸ್ತೆಯಲ್ಲಿ ಸಿಕ್ಕ ಅವರನ್ನು ತಲೆ ಮೇಲಿನ ಮೂಟೆಯ ಭಾರ ಹೆಜ್ಜೆ ಹಾಕುವಂತೆ ನೆನಪಿಸುತ್ತಿತ್ತು.

ADVERTISEMENT

‘ನಿತ್ಯ ನಸುಕಿನ 3ಕ್ಕೆ ಏಳುತ್ತೇವೆ. 4 ಗಂಟೆಗೆ ಆಟೊದಲ್ಲಿ ತರಕಾರಿ ಸಹಿತ ನಗರಕ್ಕೆ ಬರುತ್ತೇವೆ. ತ್ಯಾಗರಾಜ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿ ಮಧ್ಯಾಹ್ನದ ಹೊತ್ತಿಗೆ ಆಟೊದಲ್ಲಿ ಮನೆಗೆ ಮರಳುತ್ತಿದ್ದೇವು. ಲಾಕ್‌ಡೌನ್‌ ಕಾರಣಕ್ಕೆ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ ಅನಿವಾರ್ಯವಾಗಿ ಕಾಲ್ನಡಿಗೆಯಲ್ಲಿ ಸಾಗಬೇಕಿದೆ’ ಎಂದು ಅಳಲು ತೋಡಿಕೊಂಡರು ಗೋನೂರು ಗ್ರಾಮದ ಚನ್ನಮ್ಮ.

ಸೋಮವಾರ ನಸುಕಿನ 4ಕ್ಕೆ ಮಾರುಕಟ್ಟೆಗೆ ಬಂದ ಇವರು ಬೆಳಿಗ್ಗೆ 10ರವರೆಗೆ ವ್ಯಾಪಾರ ಮಾಡಿದರು. ಅಗತ್ಯ ವಸ್ತು ಖರೀದಿಸಲು ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ನಾಲ್ಕು ಗಂಟೆ ಮಾತ್ರ ಸಮಯ ನಿಗದಿ ಮಾಡಿದ್ದರಿಂದ ಬಿರುಸಿನ ವಹಿವಾಟು ನಡೆಯಿತು. 9.45ಕ್ಕೆ ಮಾರುಕಟ್ಟೆಗೆ ಬಂದ ಪೊಲೀಸರು ವ್ಯಾಪಾರ ಸ್ಥಗಿತಗೊಳಿಸುವಂತೆ ತಾಕೀತು ಮಾಡಿದರು. ಮಾರಾಟವಾಗದೇ ಉಳಿದ ತರಕಾರಿಯನ್ನು ಮನೆಗೆ ಹೊತ್ತು ಸಾಗುವುದು ಅನಿವಾರ್ಯವಾಯಿತು.

‘ತ್ಯಾಗರಾಜ ಮಾರುಕಟ್ಟೆಯ ಮಳಿಗೆಗಳನ್ನು ನೆಲಸಮ ಮಾಡಲಾಗಿದೆ. ಮಳಿಗೆ ಸುಸ್ಥಿತಿಯಲ್ಲಿ ಇದ್ದಿದ್ದರೆ ಅಲ್ಲೇ ಇಟ್ಟು ಹೋಗಬಹುದಿತ್ತು. ನಾಳೆ ಮತ್ತೆ ಸರಕು ಸಾಗಣೆ ಆಟೊದಲ್ಲಿ ತರಕಾರಿಯನ್ನು ತರುತ್ತೇವೆ. ಬಿಸಿಲಲ್ಲಿ ತರಕಾರಿ ಹೊತ್ತು ಸಾಗುವುದು ಕಷ್ಟವಾಗಿದೆ’ ಎನ್ನುತ್ತಾರೆ ಸುರೇಶ್‌.

ಇವರು 16 ವರ್ಷಗಳಿಂದ ತರಕಾರಿ ಮಾರಾಟ ಮಾಡುತ್ತಿದ್ದಾರೆ. ರೈತರು ಬೆಳೆದ ಟೊಮೆಟೊ, ಮೆಣಸಿನಕಾಯಿ, ಹಾಗಲಕಾಯಿ, ಬದನೆಕಾಯಿ, ಬೀನ್ಸ್‌, ಕ್ಯಾರೆಟ್‌ ಹಾಗೂ ಸೊಪ್ಪುಗಳನ್ನು ಸಂಜೆ ಖರೀದಿಸುತ್ತಾರೆ. ಮರುದಿನ ನಸುಕಿನಲ್ಲಿ ಈ ತರಕಾರಿಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಈ ಕಾಯಕದಿಂದ ನಿತ್ಯ ₹ 400ರಿಂದ 600 ವರೆಗೆ ಆದಾಯ ಸಿಗುತ್ತದೆ.

***

ತರಕಾರಿ ತೆಗೆದುಕೊಂಡು ಬಂದಿದ್ದ ಸರಕು ಸಾಗಣೆ ಆಟೊ ಅನ್‌ಲೋಡ್‌ ಮಾಡಿ ಊರಿಗೆ ಮರಳಿತು. ವ್ಯಾಪಾರ ಮುಗಿವ ವರೆಗೆ ಆಟೊ ಕಾಯುವುದಿಲ್ಲ. ಇಂತಹ ವಾಹನ ಖರೀದಿಸುವ ಶಕ್ತಿಯೂ ನಮಗಿಲ್ಲ.

-ಲಕ್ಷ್ಮಿ, ತರಕಾರಿ ವ್ಯಾಪಾರಸ್ಥೆ ಗೋನೂರು ಗ್ರಾಮ

***

ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರ ವಾಹನ ಸಂಚಾರಕ್ಕೆ ಅವಕಾಶ ನೀಡಿದ್ದರೆ ಅನುಕೂಲ ಆಗುತ್ತಿತ್ತು. ತರಕಾರಿ ದಾಸ್ತಾನು ಇಡಲು ತ್ಯಾಗರಾಜ ಮಾರುಕಟ್ಟೆಯಲ್ಲಿ ವ್ಯವಸ್ಥೆಯೂ ಇಲ್ಲ.

-ಪಾಪಮ್ಮ, ತರಕಾರಿ ವ್ಯಾಪಾರಸ್ಥೆ ಬಚ್ಚಬೋರನಹಟ್ಟಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.