ADVERTISEMENT

ಜಿಲ್ಲೆ ಕೋವಿಡ್ ಮುಕ್ತವಾಗಲು ಕೈಜೋಡಿಸಿ: ಮಾದಾರ ಚನ್ನಯ್ಯ ಸ್ವಾಮೀಜಿ

ಸಂಸದರ ಆಹಾರ ಕಿಟ್‌ ವಿತರಿಸಿದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2021, 12:26 IST
Last Updated 2 ಜೂನ್ 2021, 12:26 IST
ಚಿತ್ರದುರ್ಗದಲ್ಲಿ ಬುಧವಾರ ಸಂಸದ ಎ. ನಾರಾಯಣಸ್ವಾಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪೌರಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಿಇಒ ಡಾ.ಕೆ.ನಂದಿನಿದೇವಿ ಇದ್ದರು. 
ಚಿತ್ರದುರ್ಗದಲ್ಲಿ ಬುಧವಾರ ಸಂಸದ ಎ. ನಾರಾಯಣಸ್ವಾಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಪೌರಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‌ ವಿತರಿಸಿದರು. ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಿಇಒ ಡಾ.ಕೆ.ನಂದಿನಿದೇವಿ ಇದ್ದರು.    

ಚಿತ್ರದುರ್ಗ: ‘ಜಿಲ್ಲೆಯನ್ನು ಕೋವಿಡ್‌ನಿಂದ ಮುಕ್ತವಾಗಿಸಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಆಗಿದ್ದು, ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿಯ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪೌರಕಾರ್ಮಿಕರು, ಕುಶಲಕರ್ಮಿಗಳು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗಾಗಿ ಸಂಸದ ಎ. ನಾರಾಯಣಸ್ವಾಮಿ ವೈಯಕ್ತಿಕವಾಗಿಬುಧವಾರ ಆಯೋಜಿಸಿದ್ದ ಆಹಾರ ಸಾಮಗ್ರಿ ಕಿಟ್‌ ವಿತರಣೆ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು.

‘ಹಿಂದಿನ ವರ್ಷ ಕೂಡ ಸಂಕಷ್ಟಕ್ಕೆ ಸಿಲುಕಿದ ಅನೇಕರಿಗೆ ಸಂಸದರು ಆಹಾರ ಸಾಮಗ್ರಿ ಕಿಟ್‌ ನೀಡಿದ್ದಾರೆ. ಕೋವಿಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲೇ ಉಳಿದು ತೊಂದರೆಯಲ್ಲಿ ಇರುವವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಕಷ್ಟದ ದಿನಗಳು ಎದುರಾದಾಗ ಜವಾಬ್ದಾರಿಯಿಂದ ನಡೆದುಕೊಳ್ಳುವ ಜನಪ್ರತಿನಿಧಿಗಳು ತುಂಬಾ ಅಗತ್ಯ’ ಎಂದು ಹೇಳಿದರು.

ADVERTISEMENT

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ‘ಸಂಸದರು ಆಹಾರ ಸಾಮಗ್ರಿ ಕಿಟ್‌ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ನೂರಾರು ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು.

‘ನಗರ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಶ್ರಮ ಹೆಚ್ಚಿದೆ. ಇವರು ಸೇರಿದಂತೆ ತೊಂದರೆಗೆ ಒಳಗಾದವರನ್ನು ಗುರುತಿಸಿ, ಸಂಸದರ ಮಾದರಿಯಲ್ಲಿ ನೆರವು ನೀಡಬೇಕಾದ ಅಗತ್ಯವಿದೆ. ಸಹಕಾರ ಇಲ್ಲದೆ ಯಾವ ಕಾರ್ಯವೂ ಯಶಸ್ವಿಯಾಗಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್‌ ದೇಶಕ್ಕೆ ಕಂಟಕವಾಗಿದೆ. ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವುದರ ಜತೆಗೆ ನಿರ್ಮೂಲನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ರೂಪಿಸುವ ನಿಯಮಗಳನ್ನು ತಪ್ಪದೇ ಪಾಲಿಸುವ ಮೂಲಕ ಪ್ರತಿಯೊಬ್ಬರು ಸಹಕಾರ ನೀಡಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಅನಗತ್ಯವಾಗಿ ಹೊರಗೆ ಸಂಚರಿಸದೆಯೇ ಮನೆಯಲ್ಲೇ ಸುರಕ್ಷಿತವಾಗಿ ಇರಬೇಕು’ ಎಂದು ಮನವಿ ಮಾಡಿದರು.

ಕೋವಿಡ್ ಕುರಿತು ಎಚ್ಚರವಿರಲಿ:‘ಕೋವಿಡ್‌ನಿಂದಾಗಿ ಬೇರೆ ಬೇರೆ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಆದ್ದರಿಂದ ಈ ಕುರಿತು ಎಲ್ಲರೂ ಎಚ್ಚರವಹಿಸಬೇಕು. ಯಾವ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು’ ಎಂದು ಸಂಸದ ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

‘ಕೋವಿಡ್ ನಿರ್ಮೂಲನೆ ಆಗುವವರೆಗೂ ಗುಂಪು ಸೇರಬೇಡಿ. ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಲು ಕೈಗಳನ್ನು ಗಂಟೆಗೊಮ್ಮೆ ಸ್ವಚ್ಛವಾಗಿಟ್ಟುಕೊಳ್ಳಿ. ತಪ್ಪದೇ ಮಾಸ್ಕ್ ಧರಿಸಿ. ಸರ್ಕಾರ ಜನರ ಒಳಿತಿಗಾಗಿ ರೂಪಿಸಿರುವ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಿ’ ಎಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ತಹಶೀಲ್ದಾರ್ ವೆಂಕಟೇಶಯ್ಯ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಸದಸ್ಯರಾದ ವೆಂಕಟೇಶ್, ಶಶಿಧರ್, ಪೌರಾಯುಕ್ತ ಜಿ.ಟಿ.ಹನುಮಂತರಾಜು, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.