ADVERTISEMENT

ಮೇಡಂ, ಆಕ್ಸಿಜನ್‌ ಕೊಡಿ ಪ್ಲೀಸ್‌..: ಸಾವಿಗೂ ಮುನ್ನ ಅಂಗಲಾಚಿದ ಕೋವಿಡ್‌ ರೋಗಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 17:01 IST
Last Updated 3 ಸೆಪ್ಟೆಂಬರ್ 2020, 17:01 IST

ಚಿತ್ರದುರ್ಗ: ‘ಮೇಡಂ, ಐಸಿಯು ವಾರ್ಡ್‌ನಲ್ಲಿ ಆಕ್ಸಿಜನ್‌ ಖಾಲಿಯಾಗಿದೆ. ಉಸಿರಾಡಲು ಆಗುತ್ತಿಲ್ಲ. ಬೇಗ ಬಂದು ಆಕ್ಸಿಜನ್ ಕೊಡಿ ಪ್ಲೀಸ್‌...’

ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಕೊರೊನ ಸೋಂಕಿತ ವ್ಯಕ್ತಿಯೊಬ್ಬರು ಮೃತಪಡುವುದಕ್ಕೂ ಮೊದಲು ಆಕ್ಸಿಜನ್‌ಗೆ ಅಂಗಲಾಚಿದ್ದರು ಎನ್ನಲಾದ ಮೊಬೈಲ್‌ ರೆಕಾರ್ಡ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೋಂಕಿತ ವ್ಯಕ್ತಿ ಬಳಸುತ್ತಿದ್ದ ಮೊಬೈಲ್ ಕುಟುಂಬದ ಕೈಸೇರಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಖಾಜಿ ಮೊಹಲ್ಲಾದ 38 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಅಂಟಿತ್ತು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಆ.20ರಂದು ಐಸಿಯುಗೆ ದಾಖಲಿಸಲಾಗಿತ್ತು. ಆದರೆ, ಆಕ್ಸಿಜನ್‌ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ರೋಗಿ ಕೊನೆಯುಸಿರೆಳೆದಿದ್ದರು. ಆಕ್ಸಿಜನ್‌ ಕೇಳಿ ಆಸ್ಪತ್ರೆಯ ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ರೆಕಾರ್ಡ್‌ ಬಹಿರಂಗಗೊಂಡಿದೆ.

ADVERTISEMENT

ಶುಶ್ರೂಷಕಿಗೆ ದೂರವಾಣಿ ಕರೆ ಮಾಡಿದ ಸೋಂಕಿತ ಏದುಸಿರುವ ಬಿಡುತ್ತಲೇ ಮಾತನಾಡುತ್ತಾರೆ. ಆಕ್ಸಿಜನ್‌ ಪೂರೈಕಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಗಮನಿಸುವಂತೆ ಕೋರಿಕೊಳ್ಳುತ್ತಾರೆ. ರೋಗಿಯ ಮಾತು ಮುಗಿಯುವ ಮೊದಲೇ ಫೋನು ಕುಕ್ಕಿದ ಶುಶ್ರೂಷಕಿಯ ವರ್ತನೆಗೆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.

‘ಹಲೋ, ಬನ್ನಿ ಸಾರ್‌. ಪ್ಲೀಸ್‌ ಬನ್ನಿ ಸಾರ್‌. ಆಕ್ಸಿಜನ್‌ ಕೊಡಿ ಸಾರ್‌’ ಎಂದು ಪರಿಪರಿಯಾಗಿ ಬೇಡಿಕೊಳ್ಳುವ ರೀತಿ ಮನಕಲಕುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.