ADVERTISEMENT

ಕೋವಿಡ್‌ನಿಂದ ಕಳೆಗುಂದಿದ ನಾಗರಚೌತಿ; ನಾಗಕಟ್ಟೆಗಳಿಗೆ ತೆರಳಿ ಭಕ್ತಿ ಸಮರ್ಪಿಸಿದ ಜನ

ಕಾಣದ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 13:39 IST
Last Updated 24 ಜುಲೈ 2020, 13:39 IST
ನಾಗರಚೌತಿ ಹಬ್ಬದ ಅಂಗವಾಗಿ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಮಾರ್ಗದ ನಾಗರಕಟ್ಟೆ ಬಳಿ ಶುಕ್ರವಾರ ಭಕ್ತರು ನಾಗರದೇವರ ವಿಗ್ರಹಗಳಿಗೆ ಹಾಲನ್ನು ಎರೆಯುತ್ತಿರುವುದು
ನಾಗರಚೌತಿ ಹಬ್ಬದ ಅಂಗವಾಗಿ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆ ಮಾರ್ಗದ ನಾಗರಕಟ್ಟೆ ಬಳಿ ಶುಕ್ರವಾರ ಭಕ್ತರು ನಾಗರದೇವರ ವಿಗ್ರಹಗಳಿಗೆ ಹಾಲನ್ನು ಎರೆಯುತ್ತಿರುವುದು   

ಚಿತ್ರದುರ್ಗ: ಶುಚಿಗೊಳಿಸಿದ ನಾಗರಕಟ್ಟೆಗಳತ್ತ ಮನೆಮಂದಿಯೆಲ್ಲ ಜತೆಗೂಡಿ ತೆರಳಿದರು. ನಾಗದೇವತೆ ವಿಗ್ರಹಗಳಿಗೆ ಹಾಲೆರೆಯುವ ಮೂಲಕ ಶುಕ್ರವಾರ ನಾಗರಚೌತಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಆದರೆ, ಕೋವಿಡ್ ಭೀತಿಯಿಂದಾಗಿ ಹಿಂದಿನ ವರ್ಷದ ಸಂಭ್ರಮ ಈ ಬಾರಿ ಕಾಣಲಿಲ್ಲ.

ಶ್ರಾವಣ ಮಾಸ ಹಬ್ಬಗಳ ಸಾಲು. ಸಡಗರದಿಂದ ಆಚರಿಸುವ ಹಬ್ಬಗಳ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಈ ನಡುವೆಯೂ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಜನರು ಸಂಪ್ರದಾಯ ಬಿಡಬಾರದು ಎಂಬ ಕಾರಣಕ್ಕೆ ಹಬ್ಬ ಆಚರಿಸಲು ಮುಂದಾದರು. ಆದರೆ, ನಾಗರಕಟ್ಟೆಗಳ ಬಳಿ ಎಂದಿನಂತೆ ಹೆಚ್ಚಿನ ಜನ ಕಂಡುಬರಲಿಲ್ಲ.

ಮಹಿಳೆಯರು ಮನೆಯಲ್ಲಿಯೇ ತಯಾರಿಸಿದ ಚಿಗಳಿ, ತಮಟ, ಅಳಿಟ್ಟು, ತಂಬಿಟ್ಟು, ಅಳ್ಳು, ಕಡಲೆಕಾಳು, ಗೆಜ್ಜೆವಸ್ತ್ರ ಹಾಗೂ ತೆಂಗಿನಕಾಯಿ, ಬಾಳೆಹಣ್ಣು ಸೇರಿ ಇತರ ಪೂಜಾ ಸಾಮಗ್ರಿಗಳೊಂದಿಗೆ ನಾಗರಕಟ್ಟೆಗಳಿಗೆ ಸಂಭ್ರಮದಿಂದ ಬಂದು ಇಷ್ಟಾರ್ಥ ಈಡೇರಿಸುವಂತೆ ನಾಗದೇವರನ್ನು ಪ್ರಾರ್ಥಿಸಿ, ಪೂಜೆ ಸಮರ್ಪಿಸಿದರು. ಭಕ್ತಿ, ಶ್ರದ್ಧೆಯಿಂದ ಆಚರಿಸುವ ಈ ಹಬ್ಬದಲ್ಲಿ ಕೆಲವರು ಬೆಳ್ಳಿ ನಾಗರ ಮತ್ತು ಚಿನ್ನದ ನಾಗರವನ್ನು ನಾಗದೇವತೆಗೆ ಅರ್ಪಿಸುವ ಸಂಪ್ರದಾಯ ಮುಂದುವರೆಯಿತು.

ADVERTISEMENT

ಹಬ್ಬಕ್ಕಾಗಿ ಮನೆಯಲ್ಲಿ ವಿಶೇಷವಾಗಿ ಎಳ್ಳು ಉಂಡೆ, ಶೇಂಗಾ, ಕಡಲೆ ಸೇರಿ ಇತರ ಉಂಡೆಗಳನ್ನು ತಯಾರಿಸಿದ್ದರು. ಪೂಜೆ ನೆರವೇರಿಸಿದ ಬಳಿಕ ಮನೆಗೆ ಬಂದು ಕೆಲವರು ಉಂಡೆಗಳ ರುಚಿಯನ್ನು ಆಸ್ವಾದಿಸಿದರು. ಬರಗೇರಮ್ಮ ದೇಗುಲ, ಉಚ್ಚಂಗಿಯಲ್ಲಮ್ಮ ದೇಗುಲ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇಗುಲ, ಜೋಗಿಮಟ್ಟಿ ರಸ್ತೆ, ರಂಗಯ್ಯನಬಾಗಿಲು, ಕಾಮನಬಾವಿ ಬಡಾವಣೆ ಸೇರಿ ವಿವಿಧ ಬಡಾವಣೆಗಳಲ್ಲಿರುವ ನಾಗರಕಟ್ಟೆಗಳಿಗೆ, ನಾಗರ ಹುತ್ತಗಳಿಗೆ ಭಕ್ತರು ಹಾಲು ಎರೆದರು.

ನಾಗರಪಂಚಮಿ ದಿನ ನಾಗಗಳಿಗೆ ವಿಶೇಷ ದಿನವಾದ್ದರಿಂದ ಜುಲೈ 25ರಂದು ಕೂಡ ಭಕ್ತರು ಕುಟುಂಬದ ಒಳಿತಿಗಾಗಿ ನಾಗದೇವರಿಗೆ ಪೂಜೆ ಸಲ್ಲಿಸಲಿದ್ದಾರೆ. ಚೌತಿ ದಿನ ಹಾಲನ್ನು ಎರೆದ ನಂತರ ಕೆಲವರು ಹುತ್ತದ ಮಣ್ಣನ್ನು ಮನೆಗೆ ತಂದು ಅದರಿಂದ ನಾಗದೇವತೆ ನಿರ್ಮಿಸಿ, ಮರುದಿನ ಪಂಚಮಿಯಂದು ಮನೆಯಲ್ಲಿ ಮಣ್ಣಿನ ನಾಗದೇವರಿಗೆ ಹಾಲನ್ನು ಎರೆಯುವುದು ಸಂಪ್ರದಾಯ.

ಚೌತಿ ಮತ್ತು ಪಂಚಮಿ ದಿನ ಹಬ್ಬ ಆಚರಿಸದ ಕೆಲವರು ಶ್ರಾವಣ ಮಾಸ, ಗೌರಿ-ಗಣೇಶ ಹಬ್ಬ ಮುಗಿಯುವುದರೊಳಗೆ ಯಾವುದಾದರೊಂದು ದಿನ ನಾಗದೇವರಿಗೆ ಹಾಲು ಎರೆಯುವ ಮೂಲಕ ಭಕ್ತಿ ಸಮರ್ಪಿಸುತ್ತಾರೆ.

ರೊಟ್ಟಿ ಹಬ್ಬ: ಸಂಭ್ರಮ ಮರೆ

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಚೌತಿ ಹಿಂದಿನ ದಿನ ರೊಟ್ಟಿ ಹಬ್ಬ ಆಚರಿಸಲಾಯಿತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ನೀರಸವಾಗಿತ್ತು.

ಹಬ್ಬದಂದು ಸ್ನೇಹಿತರ, ಸಂಬಂಧಿಕರ ಮನೆ, ಮನೆಗಳಿಗೆ ತೆರಳಿ ರೊಟ್ಟಿ, ಪಲ್ಯ ಹಂಚಿ ಬರುವುದು ಸಾಮಾನ್ಯ. ಆದರೆ, ಈ ಬಾರಿ ಅಂತಹ ದೃಶ್ಯ ವಿರಳವಾಗಿತ್ತು.

ಮನೆಗಳಲ್ಲಿ ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಹೆಸರುಕಾಳು, ಎಣ್ಣೆಗಾಯಿ ಪಲ್ಯ, ಗಡಸಪ್ಪು ಪಲ್ಯ ತಯಾರಿಸಿ ಭೋಜನ ಸವಿದರು. ಆದರೆ, ಹೆಚ್ಚಾಗಿ ಜೋಳದ ರೊಟ್ಟಿಯನ್ನೇ ಬಹುತೇಕರು ತಯಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.