ADVERTISEMENT

ಬಿರುಕುಬಿಟ್ಟ ಗೋಡೆ: ಭೀತಿಯಲ್ಲಿ ಸೇವಾನಗರದ ಜನ

ಭದ್ರಾ ಮೇಲ್ದಂಡೆ ಕಾಲುವೆ ಕಾಮಗಾರಿಗಾಗಿ ಬಂಡೆ ಸ್ಫೋಟ ತಂದ ಆತಂಕ

ಶ್ವೇತಾ ಜಿ.
Published 28 ಜುಲೈ 2022, 3:50 IST
Last Updated 28 ಜುಲೈ 2022, 3:50 IST
ಹೊಸದುರ್ಗದ ಸೇವಾನಗರದಲ್ಲಿ ಬಂಡೆ ಸ್ಫೋಟಕ್ಕೆ ಬಿರುಕು ಬಿಟ್ಟಿರುವ ಮನೆಯ ಗೋಡೆ (ಎಡಚಿತ್ರ). ಸೇವಾನಗರ ಸಮೀಪ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ
ಹೊಸದುರ್ಗದ ಸೇವಾನಗರದಲ್ಲಿ ಬಂಡೆ ಸ್ಫೋಟಕ್ಕೆ ಬಿರುಕು ಬಿಟ್ಟಿರುವ ಮನೆಯ ಗೋಡೆ (ಎಡಚಿತ್ರ). ಸೇವಾನಗರ ಸಮೀಪ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿ   

ಹೊಸದುರ್ಗ: ಭದ್ರಾ ಮೇಲ್ದಂಡೆ ಕಾಮಗಾರಿಯ ಬಂಡೆ ಸ್ಫೋಟದ ತೀವ್ರತೆಗೆ ತಾಲ್ಲೂಕಿನ ಮಾಡದಕೆರೆ ಹೋಬಳಿಯ ಸೇವಾನಗರದ ಮನೆಯ ಗೋಡೆಗಳು ಬಿರುಕು ಬಿಡುತ್ತಿವೆ. ಜನರು ಜೀವ ಭಯದಲ್ಲಿ ಬದುಕುವಂತಾಗಿದೆ.

ಸುಮಾರು 200 ಮನೆಗಳಿರುವ ಈ ಗ್ರಾಮದಲ್ಲಿ, ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದು, ಹೆಚ್ಚಾಗಿ ಕಡು ಬಡವರಿದ್ದಾರೆ. ಗ್ರಾಮದಿಂದ 200 ಮೀಟರ್‌ ದೂರದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯ ಕಾಲುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ.

‘ಕಾಮಗಾರಿಗಾಗಿ ಬಂಡೆಗಳನ್ನು ಒಡೆಯಲು ಡೈನಮೈಟ್‌ ಬಳಸುತ್ತಾರೆ. ಸ್ಫೋಟದ ತೀವ್ರತೆಗೆ ಇಡೀ ಗ್ರಾಮವೇ ನಡುಗಿದಂತಾಗುತ್ತದೆ. ಸಿಡಿಸಿದ ಬಂಡೆಗಲ್ಲುಗಳು 300ಮೀ ಎತ್ತರಕ್ಕೆ ಹಾರುತ್ತಿದ್ದು, ಜನರು ಬೆಚ್ಚಿಬೀಳುವಂತಾಗಿದೆ. ಕೆಲವು ಗಂಟೆಗಳ ಕಾಲ ಗಂಧಕದ ವಾಸನೆ ಇಡೀ ಊರನ್ನೇ ಆವರಿಸಿಕೊಳ್ಳುತ್ತದೆ. ಸಾಕಷ್ಟು ಗೋಡೆಗಳು ಬಿರುಕು ಬಿಡುತ್ತಿವೆ. ಕೆಲಸಗಾರರು ಬ್ಲಾಸ್ಟ್‌ ಬ್ಲಾಸ್ಟ್‌ ಎಂದು ಕೂಗಿದಾಗ ನಮ್ಮ ಮಕ್ಕಳನ್ನು ಎಲ್ಲಿ ಬಚ್ಚಿಡುವುದು, ನಾವು ಎಲ್ಲಿ ಅಡಗಿಕೊಳ್ಳುವುದು ಎಂದು ತಿಳಿಯುವುದಿಲ್ಲ. 15 ದಿನಗಳಿಂದ ಸುರಿಯುತ್ತಿರುವ ಮಳೆ, ಬಿರುಕು ಬಿಡುತ್ತಿರುವ ಗೋಡೆಗಳ ಮದ್ಯೆ ಜನರು ಹೊರ ಹೋಗಲು ಅಥವಾ ಒಳಗೆ ಇರಲೂ ಆಗದೆ ಅತಂತ್ರ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ’ ಎಂದು ಗ್ರಾಮದ ಗೋವಿಂದನಾಯ್ಕ್ ಪರಿಸ್ಥಿತಿ ವಿವರಿಸಿದರು.

ADVERTISEMENT

‘ಸಿಡಿಸಿದ ಬಂಡೆಗಲ್ಲುಗಳು ಗ್ರಾಮದೆಡೆಗೆ ನುಗ್ಗಿ, ಇಲ್ಲಿನ ವಾಹನಗಳಿಗೂ ಹಾನಿಯಾಗಿವೆ. ಸ್ಫೋಟದಿಂದ ಬರುವ ದೂಳು, ವಾಸನೆಗೆ ಮಕ್ಕಳು ಮತ್ತು ವಯೋವೃದ್ಧರು ಅಸ್ವಸ್ಥರಾಗಿದ್ದಾರೆ. ಗಂಧಕದ ವಾಸನೆಯಿಂದ ಗ್ರಾಮಸ್ಥರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಶೀತ, ನೆಗಡಿ, ಕೆಮ್ಮಿನಿಂದ ಜನರು ಬಳಲುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಗುತ್ತಿಗೆದಾರರಿಗೆ ಮನವಿ ಮಾಡಿದರೂ, ಯೋಜನೆಯ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎನ್ನುತ್ತಾರೆ ಮೂರ್ತಿನಾಯ್ಕ್‌.

2 ವರ್ಷಗಳಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. ಶೇ 90ರಷ್ಟು ಕಾಮಗಾರಿ ಮುಗಿದಿದೆ. ಜನವಸತಿ ಪ್ರದೇಶವಾಗಿದ್ದರಿಂದ ಕಾಮಗಾರಿ ಸ್ವಲ್ಪ ತಡವಾಗಿದೆ. ಗ್ರಾಮಸ್ಥರ ಸಮಸ್ಯೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭದ್ರಾ ಮೇಲ್ದಂಡೆ ಯೋಜನೆಯ ಎಇಇ ಸುರೇಶ ಹೇಳಿದರು.

ಶೀಘ್ರಕ್ರಮ ಕೈಗೊಳ್ಳದಿದ್ದರೆ ಭದ್ರಾ ಮೇಲ್ದಂಡೆ ಯೋಜನೆಯ ಉಪವಿಭಾಗ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

ನಮ್ಮ ಕಷ್ಟಕ್ಕೆ ಭದ್ರಾ ಮೇಲ್ದಂಡೆ ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ನಡೆಸಲಾಗುವುದು. ನಮ್ಮ ಊರಿನಿಂದ ಯೋಜನೆಯ ಕಾಮಗಾರಿ ಸ್ಥಗಿತವಾದರೆ ನಾವು ಹೊಣೆಯಲ್ಲ.
–ಆರ್.‌ ಮೂರ್ತಿನಾಯ್ಕ, ಗ್ರಾಮಸ್ಥ

ಕಾಮಗಾರಿಯಿಂದಾಗಿ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಲಾಗುತ್ತದೆ. ಇನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಆತಂಕ ಬೇಡ.
–ಸುರೇಶ, ಎಇಇ, ಭದ್ರಾ ಮೇಲ್ದಂಡೆ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.