ADVERTISEMENT

ಅಪಘಾತ; ಹಾಲು ವ್ಯಾಪಾರಿ ಸಾವು

​ಪ್ರಜಾವಾಣಿ ವಾರ್ತೆ
Published 9 ಮೇ 2021, 14:57 IST
Last Updated 9 ಮೇ 2021, 14:57 IST

ಚಿತ್ರದುರ್ಗ: ತಾಲ್ಲೂಕಿನ ಪಿಳ್ಳೆಕೆರೆನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಅಪಘಾತ ಸಂಭವಿಸಿ ಹಾಲು ವ್ಯಾಪಾರಿಯೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

ಮೃತರನ್ನು ಇದೇ ಗ್ರಾಮದ ಬಸವರಾಜಪ್ಪ (55) ಎಂದು ಗುರುತಿಸಲಾಗಿದೆ. ವ್ಯಾಪಾರಿ ಎಂದಿನಂತೆ ಮನೆಗಳಿಗೆ ಹಾಲು ವಿತರಿಸಲು ಹೊರಟಿದ್ದರು. ಬಾಪೂಜಿ ನಗರದ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಿದ್ದಾರೆ. ಇದೇ ವೇಳೆ ಚಿತ್ರದುರ್ಗದಿಂದ ಹೊಸಪೇಟೆಗೆ ತೆರಳಲು ವೇಗವಾಗಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ತಲೆಗೆ ಬಲವಾದ ಪೆಟ್ಟು ಬಿದ್ದ ಬಸವರಾಜಪ್ಪ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮೃತಪಟ್ಟಿದ್ದಾರೆ. ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಅಪಘಾತ ಸಂಭವಿಸಿದ ಜಾಗದ ಎದುರೇ ಬಾಪೂಜಿ ಶಿಕ್ಷಣ ಸಂಸ್ಥೆ ಇದೆ. ಶಾಲಾ–ಕಾಲೇಜು ಆರಂಭವಾದರೆ, ಹೆದ್ದಾರಿ ಸಂಪರ್ಕಿಸಿಯೇ ಸಂಚಾರ ನಡೆಸಬೇಕಾಗುತ್ತದೆ. ಆಗ ಇನ್ನಷ್ಟು ಅಪಘಾತ ಸಂಭವಿಸಬಹುದು. ಅದನ್ನು ತಡೆಯಲು ಸರ್ವಿಸ್‌ ರಸ್ತೆಗೆ ಸಂಪರ್ಕ ಕಲ್ಪಿಸಲಿಕ್ಕಾಗಿ ಕೆಳಸೇತುವೆ ನಿರ್ಮಿಸಬೇಕು. ಅಪಘಾತ ತಡೆದು ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರೈಲ್ವೆ ಇಲಾಖೆಗೆ ಗ್ರಾಮದ ಮುಖಂಡ ಸಿದ್ಧೇಶ್ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.