ADVERTISEMENT

ಪೆಟ್ರೋಲ್‌ ಬಂಕ್‌ಗೆ ನುಗ್ಗಿ ದರೋಡೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 12:25 IST
Last Updated 4 ಅಕ್ಟೋಬರ್ 2018, 12:25 IST

ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಕೆ.ಆರ್. ಹಳ್ಳಿಯಲ್ಲಿರುವ ಐಒಸಿ ಕಂಪನಿಯ ಪೆಟ್ರೋಲ್ ಬಂಕ್‌ಗೆ ನುಗ್ಗಿದ ಐವರು ದುಷ್ಕರ್ಮಿಗಳು ₹ 2 ಲಕ್ಷ ದೋಚಿದ್ದಾರೆ.

‘ಗುರುವಾರ ನಸುಕಿನ 3.10ರ ಸುಮಾರಿಗೆ ಪೆಟ್ರೋಲ್‌ ಬಂಕ್‌ಗೆ ಸ್ವಿಫ್ಟ್‌ ಕಾರೊಂದು ಬಂದಿದೆ. ಬಂಕ್‌ ಸಿಬ್ಬಂದಿಯೊಬ್ಬರು ಕಾರಿಗೆ ಇಂಧನ ತುಂಬಿಸಲು ಮುಂದಾಗಿದ್ದಾರೆ. ಏಕಾಏಕಿ ಕಾರಿನಿಂದ ಇಳಿದ ದುಷ್ಕರ್ಮಿಗಳು ಸಿಬ್ಬಂದಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಹಣ ಕಿತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬಂಕ್‌ನ ಆರು ಸಿಬ್ಬಂದಿಗಳ ಪೈಕಿ ನಾಲ್ವರು ಕೊಠಡಿಯೊಂದರಲ್ಲಿ ನಿದ್ದೆಗೆ ಜಾರಿದ್ದರು. ಇಬ್ಬರು ಮಾತ್ರ ಇಂಧನ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದರು. ಮಚ್ಚು, ಲಾಂಗು ತೋರಿಸಿ ಎಲ್ಲರನ್ನು ಕೊಠಡಿಯೊಳಗೆ ಕೂಡಿ ಹಾಕಿದ ದರೋಡೆಕೋರರು, ಮೊಬೈಲ್‌ ಕಸಿದುಕೊಂಡು ದೂರ ಬಿಸಾಡಿದ್ದಾರೆ’ ಎಂದು ವಿವರಿಸಿದರು.

ADVERTISEMENT

ಬಂಕ್‌ ಕ್ಯಾಷಿಯರ್‌ ಬಳಿ ಇದ್ದ ₹ 1.43 ಲಕ್ಷ ಹಾಗೂ ಸಿಬ್ಬಂದಿಯ ಬಳಿ ಇದ್ದ ₹ 57 ಸಾವಿರವನ್ನು ಕಿತ್ತುಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾ ಹಾಗೂ ಕಂಪ್ಯೂರ್‌ ಧ್ವಂಸಗೊಳಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವ ದಿಕ್ಕಿಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿಲ್ಲ.

ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗೆ ಪೊಲೀಸರ ತಂಡ ರಚಿಸಲಾಗಿದೆ.

9 ಪ್ರಕರಣ ದಾಖಲು

ಮರಳು ಅಕ್ರಮ ಗಣಿಗಾರಿಕೆ ಹಾಗೂ ಸಾಗಣೆ ವಿರುದ್ಧ ಕಠಿಣ ಕ್ರಮ ಜರುಗಿಸುತ್ತಿರುವ ಪೊಲೀಸರು, ಮೂರು ದಿನಗಳಲ್ಲಿ 9 ಪ್ರಕರಣ ದಾಖಲಿಸಿದ್ದಾರೆ.

‘ಅಬ್ಬಿನಹೊಳೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಕ್ರಮಕ್ಕೆ ಕಡಿವಾಣ ಹಾಕುವಂತೆ ಸಿಬ್ಬಂದಿಗೆ ಸೂಚಿಸಿದ್ದೇನೆ. ಹಿರಿಯೂರು, ಹೊಸದುರ್ಗ ಹಾಗೂ ಚಳ್ಳಕೆರೆ ಠಾಣಾ ವ್ಯಾಪ್ತಿಯಲ್ಲಿಯೂ ಪ್ರಕರಣ ದಾಖಲಾಗಿವೆ’ ಎಂದು ಎಸ್‌ಪಿ ಅರುಣ್‌ ಮಾಹಿತಿ ನೀಡಿದ್ದಾರೆ.

ಜೂಜು ಸ್ಥಗಿತ

ನಗರದಲ್ಲಿ ನಿರಾತಂಕವಾಗಿ ನಡೆಯುತ್ತಿದ್ದ ಜೂಜು ಅಡ್ಡೆಗಳನ್ನು ನೂತನ ಪೊಲೀಸ್‌ ವರಿಷ್ಠಾಧಿಕಾರಿ ಬಾಗಿಲು ಮುಚ್ಚಿಸಿದ್ದಾರೆ. ಪ್ರತಿಷ್ಠಿತ ಹೋಟೆಲ್‌ ಸೇರಿ ಹಲವೆಡೆ ಅಕ್ರಮ ಚಟುವಟಿಕೆಗೆ ಕಡಿವಾಣ ಬಿದ್ದಿದೆ.

‘ಜೂಜು, ಮಟ್ಕಾ ಸೇರಿ ಹಲವು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಸೂಚನೆ ನೀಡಲಾಗಿದೆ. ಸೂಚನೆಯನ್ನು ಪಾಲಿಸಿದ ಸಿಬ್ಬಂದಿ ಇಂತಹ ಅಡ್ಡೆಗಳಿಗೆ ಕಡಿವಾಣ ಹಾಕಿದ್ದಾರೆ. ಪ್ರಭಾವಿ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.