ಚಿತ್ರದುರ್ಗ: ‘ಮದುವೆಗಳಲ್ಲಿ ಅನೇಕರು ದುಂದುವೆಚ್ಚ ಮಾಡುತ್ತಾರೆ. ಇಂತಹ ವೆಚ್ಚಗಳಿಗೆ ಕಡಿವಾಣ ಹಾಕಬೇಕಿದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಶನಿವಾರ ಆಯೋಜಿಸಿದ್ದ 35ನೇ ವರ್ಷದ ಏಳನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ನವಜೋಡಿಗಳು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಬೇಕು. ಬಸವಾದಿ ಶರಣರ ಆಶೀರ್ವಾದ ನಿಮ್ಮ ಮೇಲೆ ಯಾವಾಗಲೂ ಇರುತ್ತದೆ’ ಎಂದು ಹೇಳಿದರು.
‘ಆರಂಭದಲ್ಲಿ ಶ್ರೀಮಠದಲ್ಲಿರುವ ಸೇವಕರ ಮದುವೆಗಳು ಪ್ರಾರಂಭವಾದವು. ಅಮಾವಾಸ್ಯೆ, ಆಷಾಢ, ಶೂನ್ಯಮಾಸಗಳಲ್ಲಿ ಮದುವೆ ಆದವರ ಮೊಮ್ಮಕ್ಕಳೂ ಇಲ್ಲಿ ಮದುವೆಯಾಗಿ ಸುಖವಾಗಿದ್ದಾರೆ. ಸರಳ ವಿವಾಹವೇ ಆದರ್ಶ’ ಎಂದರು.
‘ನಮ್ಮಲ್ಲಿ ಶುಭ– ಅಶುಭ ಎಂಬುದು ಬರುವುದಿಲ್ಲ. ನಮ್ಮ ಮನಸ್ಥಿತಿಗಳು ಶುದ್ಧವಾಗಿದ್ದಾಗ ಮಾತ್ರ ಯಾವ ಅಡೆತಡೆಗಳು ಇರುವುದಿಲ್ಲ. ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು. ನಮ್ಮ ದುಡಿಮೆಯ ಹಣವನ್ನು ನಮ್ಮ ಜೀವನಕ್ಕೆ ಇಟ್ಟುಕೊಳ್ಳಬೇಕು. ಅನವಶ್ಯಕವಾಗಿ ಖರ್ಚು ಮಾಡಬೇಡಿ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್ ತಿಳಿಸಿದರು.
‘ತುಂಬಿದುದು ತುಳುಕದು ನೋಡಾ’ ಎನ್ನುವ ಹಾಗೆ ಸಂಸಾರ ತುಂಬಿದ ಕೊಡವಾಗಬೇಕು. ಇಂದಿನ ನವ ವಧು–ವರರು ಸಂಸಾರ ಎನ್ನುವ ಕೊಡದಲ್ಲಿ ಇಳಿಯಬೇಕು. ಅದು ಪ್ರೀತಿ, ನಂಬಿಕೆ, ವಿಶ್ವಾಸ, ಹೊಂದಾಣಿಕೆಗಳಿಂದ ತುಂಬಿರಬೇಕು’ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಎರಡು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು. ನಿಪ್ಪಾಣಿಯ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.