ADVERTISEMENT

ಚಿತ್ರದುರ್ಗ: ಹಂಸಲೇಖ ನಿಲುವು ಬೆಂಬಲಿಸಿ ಧರಣಿ

ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಪೋಷಿಸುವವರು ಕ್ಷಮೆ ಯಾಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2021, 13:46 IST
Last Updated 18 ನವೆಂಬರ್ 2021, 13:46 IST
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬೆಂಬಲಿಸಿ ನಡೆದ ಸಾಂಕೇತಿಕ ಧರಣಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿದರು.
ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬೆಂಬಲಿಸಿ ನಡೆದ ಸಾಂಕೇತಿಕ ಧರಣಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿದರು.   

ಚಿತ್ರದುರ್ಗ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ರಾಜಕಾರಣಿಗಳ ಗ್ರಾಮ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ ಹೇಳಿಕೆಯನ್ನು ಬೆಂಬಲಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು ಗುರುವಾರ ಧರಣಿ ನಡೆಸಿದರು.

ಒನಕೆ ಓಬವ್ವ ವೃತ್ತದಲ್ಲಿ ಧರಣಿ ಕುಳಿತ ಪ್ರತಿಭಟನಕಾರರು ‘ಅಂಜದಿರಿ ಅಳುಕದಿರಿ ಹಂಸಲೇಖ, ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಘೋಷಣೆ ಮೊಳಗಿಸಿದರು. ‘ಕ್ಷಮೆ ಕೇಳುವಂತಹ ತಪ್ಪು ನೀವು ಮಾಡಿಲ್ಲ’ ಎಂಬುದನ್ನು ಒತ್ತಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ ಮಾತನಾಡಿ, ‘ಕನ್ನಡ ನಾಡು, ತಾಯಿ – ಮಗುವಿನ ಮಮಕಾರದ ಬಗ್ಗೆ ಹಂಸಲೇಖ ಅವರು ಬರೆದ ಹಾಡು ಮಧುರವಾಗಿವೆ. ಉಳ್ಳವವರ ಶೋಷಣೆ, ಆದರ್ಶ ಕುಟುಂಬದ ಪರಿಕಲ್ಪನೆ ಅವರ ಸಾಹಿತ್ಯದಲ್ಲಿ ವ್ಯಕ್ತವಾಗಿದೆ. ಸಹಬಾಳ್ವೆ, ಮಾನವ ಸಹಜ ಪ್ರೀತಿ – ಪ್ರೇಮ ಹಾಗೂ ವಿರಹದ ಬಗ್ಗೆ ಮಾಧುರ್ಯ ತುಂಬಿದ ಹಾಡುಗಳನ್ನು ನೀಡಿದ ಹೆಮ್ಮೆಯ ಕುವರ ಹಂಸಲೇಖ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಕನ್ನಡ ನುಡಿ-ಸಂಸ್ಕೃತಿಗೆ ಅಪಾರ ಕೊಡುಗೆ ಕೊಟ್ಟ ಹಂಸಲೇಖ ಅವರು ತಳಸಮುದಾಯದ ನೋವಿಗೆ ಧ್ವನಿ ನೀಡಿದ್ದನ್ನು ತಪ್ಪು ಎಂಬಂತೆ ಭಾವಿಸಲಾಗಿದೆ. ಸಮಾಜದ ಸಂಕೀರ್ಣ ಸಮಸ್ಯೆಯ ಬಗ್ಗೆ ಅವರು ಆಡಿದ ಮಾತುಗಳು ಸತ್ಯದಿಂದ ಕೂಡಿವೆ. ಸಹಭೋಜನ ಮಾಡುವ ಅಗತ್ಯದ ಬಗ್ಗೆ ಅವರು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡು ಆಕ್ರಮಣ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಭಾರತದ ಡೆಮಾಕ್ರಸಿ (ಪ್ರಜಾಪ್ರಭುತ್ವ) ಧರ್ಮಾಕ್ರಸಿ ಆಗದಂತೆ ಎಚ್ಚರವಹಿಸಿ ಎಂಬ ಕಿವಿಮಾತು ಹೇಳಿದ ಹಂಸಲೇಖ ಅವರನ್ನು ಏಕಾಏಕಿ ಅಪರಾಧಿ ಸ್ಥಾನದಲ್ಲಿ ಕೂರಿಸಲಾಗಿದೆ. ಪ್ರತಿಗಾಮಿ ಶಕ್ತಿಗಳ ಒತ್ತಡಕ್ಕೆ ಮಣಿದು ಅವರು ಕ್ಷಮೆ ಕೋರಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಹಂಸಲೇಖ ಅವರ ಮಾತು ತಪ್ಪಾಗಿದ್ದರೆ ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್‌, ಕುವೆಂಪು ಅವರ ಸಂದೇಶ ಕೂಡ ತಪ್ಪಾಗುತ್ತವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಅಂಬೇಡ್ಕರ್‌ ನೀಡಿದ ಸಂವಿಧಾನವು ಗುಲಾಮಗಿರಿ ವ್ಯವಸ್ಥೆಯಿಂದ ಸಮಾಜವನ್ನು ಹೊರತಂದಿದೆ. ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಕೋಮುವಾದಿ ಶಕ್ತಿಗಳು ಯುವ ಸಮೂಹದ ತಲೆಕೆಡಿಸಿವೆ. ಮೌಢ್ಯ ತುಂಬಿಕೊಂಡ ಕೆಲವರು ಹಂಸಲೇಖ ಅವರ ಹೇಳಿಕೆಯನ್ನು ವಿರೋಧಿಸುತ್ತಿದ್ದಾರೆ. ಇದು ಸಂವಿಧಾನಬದ್ಧ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾಡುವ ಹಾನಿ’ ಎಂದು ಹೇಳಿದರು.

‘ಅಸ್ಪೃಶ್ಯತೆ ವಿರೋಧವೇ ಹಿಂದೂ ಧರ್ಮ’

ಅಸ್ಪೃಶ್ಯತೆಯನ್ನು ಸಮರ್ಥಿಸುವ ಹಾಗೂ ಆಚರಿಸುವವರು ಹಿಂದೂಗಳಲ್ಲ. ಅಮಾನವೀಯ ಆಚರಣೆಯನ್ನು ವಿರೋಧಿಸುವರು ಮಾತ್ರ ಹಿಂದೂ ಧರ್ಮಿಯರು’ ಎಂದು ಸ್ವರಾಜ್‌ ಇಂಡಿಯಾ ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಯಾದವರೆಡ್ಡಿ ಹೇಳಿದರು.

‘ಹಂಸಲೇಖ ಅವರು ಸಂವಿಧಾನದ ಆಶಯಗಳಿಗೆ ಪೂರಕವಾಗಿ ಮಾತನಾಡಿದ್ದಾರೆ. ಸತ್ಯ ಅನೇಕರಿಗೆ ಕಹಿಯಾಗಿ ಕಾಣುತ್ತದೆ. ಅಸ್ಪೃಶ್ಯತೆ ವಿರುದ್ಧ ಮಾತನಾಡುವವರನ್ನು ಹಣಿಯುವ ಪ್ರಯತ್ನ ನಡೆಯುತ್ತಿದೆ. ಅಮಾನವೀಯವಾದ ಮಡೆಸ್ನಾನ ಸಮರ್ಥಿಸಿಕೊಂಡಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಪ್ರಗತಿಪರ ಆಲೋಚನೆಗಳಿಗೆ ವಿರುದ್ಧವಾಗಿದ್ದರು’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವು ಯಾದವ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ದಲಿತ ಸಂಘರ್ಷ ಸಮಿತಿ ಮುಖಂಡರಾದ ನೇಹ ಮಲ್ಲೇಶ್‌, ಚಳ್ಳಕೆರೆ ವಿಜಯ್‍ಕುಮಾರ್ ಇದ್ದರು.

ಬೆಕ್ಕು, ನಾಯಿಗಳಿಗೆ ಮನೆ ಪ್ರವೇಶಿಸಲು ಅವಕಾಶವಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಇದಕ್ಕಿಂತ ಕೀಳಾಗಿ ಕಾಣಲಾಗುತ್ತಿದೆ. ಅತ್ಯಂತ ಕಡಿಮೆ ಜನರು ಸಮಾಜ ನಿಯಂತ್ರಣ ಮಾಡುತ್ತಿದ್ದಾರೆ.

- ನಿರಂಜನಮೂರ್ತಿ,ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ

ಪೇಜಾವರ ಸ್ವಾಮೀಜಿ ಶಿಷ್ಯಕೂಟ ಕ್ಷಮೆ ಕೇಳುವ ಪರಿಸ್ಥಿತಿ ನಿರ್ಮಿಸಿ‌ ವಿಕೃತ ಖುಷಿ ಅನುಭವಿಸಿದೆ. ಸಾವಿರಾರು ವರ್ಷಗಳಿಂದ ಜಾತಿ ವ್ಯವಸ್ಥೆ ಪೋಷಣೆ ಮಾಡಿಕೊಂಡು ಬಂದವರು ಸಮಾಜದ ಕ್ಷಮೆ ಕೇಳಬೇಕು.

- ಆರ್‌.ಕೃಷ್ಣಮೂರ್ತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.