ADVERTISEMENT

ಒಳ ಮೀಸಲಾತಿ | ಬಲಗೈ ಬಣಕ್ಕೆ ಅನ್ಯಾಯ: ಛಲವಾದಿ ಗುರುಪೀಠದ ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 7:21 IST
Last Updated 7 ಆಗಸ್ಟ್ 2025, 7:21 IST
ಬಸವ ನಾಗಿದೇವ ಸ್ವಾಮೀಜಿ
ಬಸವ ನಾಗಿದೇವ ಸ್ವಾಮೀಜಿ   

ಚಿತ್ರದುರ್ಗ: ‘ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ನೇತೃತ್ವದ ಆಯೋಗ ಶಿಫಾರಸು ಮಾಡಿರುವ ಮೀಸಲಾತಿ ವರ್ಗೀಕರಣದಲ್ಲಿ ದಲಿತ ಸಮುದಾಯದ ಬಲಗೈ ಬಣಗಳಿಗೆ ಅನ್ಯಾಯವಾಗಿದೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ನಿಗದಿ ಮಾಡಿದ್ದ ಶೇ 5.5ರ ಮೀಸಲಾತಿಯನ್ನೂ ಕಡಿತಗೊಳಿಸಿ ಶೇ 5ಕ್ಕೆ ಇಳಿಸಿರುವುದನ್ನು ನಾವು ಒಪ್ಪುವುದಿಲ್ಲ’ ಎಂದು ಛಲವಾದಿ ಗುರುಪೀಠದ ಅಧ್ಯಕ್ಷ ಬಸವ ನಾಗಿದೇವ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

‘ಆಯೋಗ ರಚಿಸಿದ್ದ ಸಂದರ್ಭದಲ್ಲೇ ನಾವು ಪರಿಶಿಷ್ಟ ಜಾತಿಗಳ ತಲಾ ಒಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಒತ್ತಾಯ ಮಾಡಿದ್ದೆವು. ಆದರೆ, ನಮ್ಮ ಒತ್ತಾಯವನ್ನು ಪರಿಗಣಿಸಿಲ್ಲ. ನಿವೃತ್ತ ನ್ಯಾಯಮೂರ್ತಿಗಳು ಸಂವಿಧಾನದ 341ನೇ ವಿಧಿಯಲ್ಲಿರುವ ಪರಿಶಿಷ್ಟ ಜಾತಿ ಪರಿಭಾಷೆಯನ್ನೇ ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಸರ್ಕಾರ ನಿಗದಿ ಮಾಡಿರುವ ಕಾರ್ಯಸೂಚಿಯಂತೆ ಅವರು ವರದಿ ನೀಡಿದ್ದಾರೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

‘ಒಳಮೀಸಲಾತಿ ಜಾರಿಗಾಗಿ ಆಯೋಗ ಸಲ್ಲಿಸಿರುವ ವರದಿಯ ಅಂಶಗಳು ಸೋರಿಕೆಯಾಗಿದ್ದು ‘ಪ್ರಜಾವಾಣಿ’ ವಿವರವಾಗಿ ಪ್ರಕಟಿಸಿದೆ. ಮುಂದಿನ ಸಚಿವ ಸಂಪುಟದಲ್ಲಿ ವರದಿ ಮಂಡನೆಯಾಗಲಿದ್ದು ಅದು ನಿಜವೇ ಆಗಿದ್ದರೆ ಸಾಮಾಜಿಕ ನ್ಯಾಯಕ್ಕೆ ವಿರೋಧಿಯಾಗುತ್ತದೆ. ನಮ್ಮ ಗುರುಪೀಠ ಅದನ್ನು ಬಲವಾಗಿ ಖಂಡಿಸಲಿದ್ದು, ಅವೈಜ್ಞಾನಿಕ ಮೀಸಲಾತಿ ನಿಗದಿ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗುವ ಅಧಿಕಾರವನ್ನೂ ಸಂವಿಧಾನ ನಮಗೆ ನೀಡಿದೆ’ ಎಂದರು.

ADVERTISEMENT

‘ನಮ್ಮ ಸಮುದಾಯದಲ್ಲಿ ಮುಖ್ಯಮಂತ್ರಿಯಾಗುವ ಅವಕಾಶ ಹಲವರಿಗೆ ಇದ್ದರೂ ಸ್ಥಾನ ಪಡೆಯಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಸ್ವಾತಂತ್ರ್ಯ ಬಂದು 78 ವರ್ಷವಾದರೂ ಅಧಿಕಾರ, ಅವಕಾಶ ಎಂಬುದು ಅಸ್ಪೃಶ್ಯ ಸಮುದಾಯಗಳಿಗೆ ಕನ್ನಡಿಯೊಳಗಿನ ಗಂಟಿನಂತಾಗಿದೆ. ನಾಗಮೋಹನ್‌ದಾಸ್‌ ಆಯೋಗದ ಶಿಫಾರಸುಗಳಿಗೆ ಸಚಿವ ಸಂಪುಟದಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರದ ಭವಿಷ್ಯ ನಿಂತಿದೆ’ ಎಂದರು.

ಛಲವಾದಿ ಸಮುದಾಯದ ಮುಖಂಡ ಛಲವಾದಿ ತಿಪ್ಪೇಸ್ವಾಮಿ ಮಾತನಾಡಿ ‘ಯಾವ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು  ಕಡಿತಗೊಳಿಸಿದ್ದಾರೆ ಎಂಬುದನ್ನು ನಾಗಮೋಹನ್‌ದಾಸ್‌ ತಿಳಿಸಬೇಕು. ವರ್ಷದಿಂದ ವರ್ಷಕ್ಕೆ ನಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಳವಾಗಿಲ್ಲವೇ? ರಾಜ್ಯದ 18 ಜಿಲ್ಲೆಗಳಲ್ಲಿ ನಮ್ಮ ಸಮುದಾಯ ಅಧಿಕ ಸಂಖ್ಯೆಯಲ್ಲಿದೆ. ನಮ್ಮ ಮತಗಳನ್ನು ಚುನಾವಣೆಯಲ್ಲಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಬಲಗೈ ಸಮುದಾಯಕ್ಕೆ ಮೀಸಲಾತಿ ಕಡಿತಗೊಳಿಸಿರುವುದು ನಿಜವಾಗಿದ್ದರೆ ರಾಜ್ಯದಲ್ಲಿ ರಕ್ತಪಾತವಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.