ADVERTISEMENT

ಪ್ರಸಾದ ವಿತರಣೆಗೆ ಅನುಮತಿ ಕಡ್ಡಾಯ

ಶೋಭಾಯಾತ್ರೆಯಲ್ಲಿ ಡಿ.ಜೆ.ಗೆ ಅವಕಾಶ, ಭದ್ರತೆಗೆ ಎರಡು ಸಾವಿರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 13:28 IST
Last Updated 6 ಸೆಪ್ಟೆಂಬರ್ 2019, 13:28 IST
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.
ವಿನೋತ್ ಪ್ರಿಯಾ, ಜಿಲ್ಲಾಧಿಕಾರಿ.   

ಚಿತ್ರದುರ್ಗ: ಹಿಂದೂ ಮಹಾ ಗಣಪತಿಯ ವಿಸರ್ಜನೆಯ ದಿನವಾದ ಸೆ.21ರಂದು ನಡೆಯುವ ಶೋಭಾಯಾತ್ರೆಯಲ್ಲಿ ಪ್ರಸಾದ ವಿತರಣೆ ಮಾಡುವ ಭಕ್ತರು ಜಿಲ್ಲಾಡಳಿತದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅನುಮತಿ ಪಡೆಯದೇ ಇರುವವರು ಪ್ರಸಾದ ವಿತರಣೆಗೆ ಅವಕಾಶವಿಲ್ಲ.

ಶೋಭಾಯಾತ್ರೆಯ ಅಂಗವಾಗಿ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್‌.ವಿನೋತ್‌ ಪ್ರಿಯಾ ಈ ಸೂಚನೆ ನೀಡಿದ್ದಾರೆ. ಮೆರವಣಿಗೆಗೆ ಸುಮಾರು 2 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ನಗರಸಭೆ, ಪೊಲೀಸ್‌ ಇಲಾಖೆ ಸೇರಿ ಇತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

‘ಆಹಾರ ಹಾಗೂ ಪಾನೀಯಗಳನ್ನು ಪ್ರಸಾದದ ರೂಪದಲ್ಲಿ ವಿತರಣೆ ಮಾಡುವುದಕ್ಕೆ ಅನುಮತಿ ಪಡೆಯಬೇಕಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಸಾದ ವಿತರಣೆಗೆ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಇದನ್ನು ಪಾಲನೆ ಮಾಡಬೇಕಿದೆ’ ಎಂದು ವಿನೋತ್‌ ಪ್ರಿಯಾ ತಿಳಿಸಿದರು.

ADVERTISEMENT

‘ಪಾನಕ, ಮಜ್ಜಿಗೆ, ಜ್ಯೂಸ್‌, ಉಪಾಹಾರ, ಊಟ ಸೇರಿ ಆಹಾರ ಪದಾರ್ಥವನ್ನು ಪ್ರಸಾದವಾಗಿ ನೀಡುವವರು ನಗರಸಭೆ ಸಂಪರ್ಕಿಸಬೇಕು. ಪೌರಾಯುಕ್ತರಿಂದ ಪೂರ್ವಾನುಮತಿ ಪಡೆದುಕೊಳ್ಳಬೇಕು. ಅನುಮತಿ ಪಡೆಯದೆ ಪ್ರಸಾದ ವಿತರಣೆ ಮಾಡುವವರ ಮೇಲೆ ತಹಶೀಲ್ದಾರ್‌ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ನಿಗಾ ಇಡಲಿದ್ದಾರೆ’ ಎಂದರು.

2 ಸಾವಿರ ಪೊಲೀಸರು:ಅಪಾರ ‍ಪ್ರಮಾಣದ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗುತ್ತಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಹೊರ ಜಿಲ್ಲೆಯಿಂದ ಬರುವ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

‘ಮೆರವಣಿಗೆಯ ಮೇಲೆ ನಿಗಾ ಇಡಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ಮೆರವಣಿಗೆ ಸಾಗುವ ಬಿ.ಡಿ. ರಸ್ತೆಯಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತದೆ. ಶೋಭಾಯಾತ್ರೆಗೂ ಒಂದು ದಿನ ಮುನ್ನ ಪಥಸಂಚಲನ ನಡೆಸಲಾಗುತ್ತದೆ. ಸಂಚಾರ ಸಮಸ್ಯೆ ಉಂಟಾಗದಂತೆ ನಿರ್ದೇಶನ ನೀಡಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ಅರುಣ್‌ ಮಾಹಿತಿ ನೀಡಿದರು.

ಮೆರವಣಿಗೆಯು ಜಿಲ್ಲಾ ಕ್ರೀಡಾಂಗಣ ರಸ್ತೆಯಿಂದ ಹೊರಟು ಬಿ.ಡಿ. ರಸ್ತೆಗೆ ಬರಲಿದೆ. ಜಿಲ್ಲಾ ಆಸ್ಪತ್ರೆ, ಪ್ರವಾಸಿ ಮಂದಿರ, ಗಾಂಧಿ ವೃತ್ತ, ಕನಕ ವೃತ್ತದ ಮೂಲಕ ಚಂದ್ರವಳ್ಳಿ ತಲುಪಲಿದೆ. ಮೆರವಣಿಗೆಗೆ ಜಿಲ್ಲಾಡಳಿತ ಸಮಯ ನಿಗದಿ ಮಾಡಲಿದೆ. ಈ ಬಗ್ಗೆ ಇನ್ನೊಮ್ಮೆ ಉಪವಿಭಾಗಾಧಿಕಾರಿ ಹಾಗೂ ಆಯೋಜಕರ ಸಭೆ ನಡೆಯಲಿದೆ.

ಭಾರಿ ಸದ್ದಿನ ಡಿ.ಜೆಗೆ ನಿರ್ಬಂಧ:ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲನೆ ಮಾಡುವ ಡಿ.ಜೆ.ಗೆ ಮಾತ್ರ ಜಿಲ್ಲಾಡಳಿತ ಅನುಮತಿ ನೀಡಿದೆ. ಭಾರಿ ಸದ್ದು ಉಂಟು ಮಾಡುವ ಡಿ.ಜೆ.ಗೆ ನಿರ್ಬಂಧ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿದೆ.

‘ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ 70 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಹೊರಸೂಸುವ ಡಿ.ಜೆಗೆ ಅವಕಾಶವಿಲ್ಲ. ಮೆರವಣಿಗೆಯಲ್ಲಿ ಈ ನಿರ್ದೇಶನದ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಪರಿಸರ ಅಧಿಕಾರಿಗಳು ಶಬ್ದದ ಪ್ರಮಾಣವನ್ನು ಪರಿಶೀಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಗಣಪತಿ ವಿಸರ್ಜನೆ ಕುರಿತು ನಗರ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆಗೆ ಅವಕಾಶ ಇಲ್ಲ. ಹೀಗಾಗಿ, ನಗರಸಭೆ ಪೌರಾಯುಕ್ತರು ಯಾವುದೇ ಫ್ಲೆಕ್ಸ್ ಹಾಗೂ ಬ್ಯಾನರ್‌ಗೆ ಅನುಮತಿ ನೀಡಬಾರದು’ ಎಂದು ತಾಕೀತು ಮಾಡಿದರು.

‘ಮೆರವಣಿಗೆ ಸಾಗುವ ಮಾರ್ಗದಲ್ಲಿ ರಸ್ತೆ ಸುಸಜ್ಜಿತವಾಗಿರಬೇಕು. ಗುಂಡಿಗಳನ್ನು ಮುಚ್ಚಿ ದುರಸ್ತಿ ಮಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ತೆರೆದ ಚರಂಡಿಗಳನ್ನು ಮುಚ್ಚಬೇಕು. ವಿದ್ಯುತ್ ಮಾರ್ಗದ ಸುರಕ್ಷತೆ ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಸೆ.19 ರಿಂದ 21 ರವರೆಗೆ ನಗರದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ಬೀದಿ ದೀಪಗಳನ್ನು ಅಳವಡಿಸಬೇಕು. ಮೂರು ಆಂಬುಲೆನ್ಸ್‌, ಮೂರು ಅಗ್ನಿಶಾಮಕ ವಾಹನ ಮೆರವಣಿಗೆಯಲ್ಲಿ ಇರಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಡಿವೈಎಸ್‍ಪಿ ವಿಜಯಕುಮಾರ್ ಸಂತೋಷ್, ತಹಶೀಲ್ದಾರ್ ವೆಂಕಟೇಶಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.