ADVERTISEMENT

ಚಿತ್ರದುರ್ಗ: 8 ವರ್ಷಗಳಿಂದ ತಾಯಿ, ಶಿಶು ಮರಣ ಕುಂಠಿತ

ಸರಾಸರಿಗಿಂತ ಕಡಿಮೆ ಪ್ರಮಾಣದ ಸಾವು * 2022ರ ಒಳಗೆ ಮತ್ತಷ್ಟು ತಗ್ಗಿಸಲು ಪ್ರಯತ್ನ

ಕೆ.ಎಸ್.ಪ್ರಣವಕುಮಾರ್
Published 15 ಸೆಪ್ಟೆಂಬರ್ 2021, 4:02 IST
Last Updated 15 ಸೆಪ್ಟೆಂಬರ್ 2021, 4:02 IST
ಡಾ. ರಂಗನಾಥ್
ಡಾ. ರಂಗನಾಥ್   

ಚಿತ್ರದುರ್ಗ: ಸತತ ಎಂಟು ವರ್ಷಗಳಿಂದ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಕುಂಠಿತವಾಗುತ್ತಿದೆ. 2022ರ ವೇಳೆಗೆ ಈ ಸಂಖ್ಯೆಯನ್ನು ಮತ್ತಷ್ಟು ತಗ್ಗಿಸುವ ಪ್ರಯತ್ನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ಪ್ರತಿ ವರ್ಷ ಏಪ್ರಿಲ್ 1ರಿಂದ ಮಾರ್ಚ್‌ 31ರವರೆಗೆ ಮರಣ ಪ್ರಮಾಣ ಲೆಕ್ಕ ಹಾಕಲಾಗುತ್ತದೆ. 2020–21ನೇ ಸಾಲಿನಲ್ಲಿ 303 ಶಿಶು ಮೃತಪಟ್ಟಿದ್ದು, ಶೇ 14.6ರಷ್ಟು ಇದೆ. ಅದೇ ರೀತಿ 10 ತಾಯಂದಿರು ಮರಣ ಹೊಂದಿದ್ದಾರೆ. ರಾಜ್ಯದಲ್ಲಿ ಶಿಶು ಮರಣ ದರ 24 ಹಾಗೂ ತಾಯಿ ಮರಣ ದರ 108 ಇದೆ.

ಅಪೌಷ್ಟಿಕತೆ, ರಕ್ತಹೀನತೆ, ಗಂಭೀರ ಕಾಯಿಲೆ, ಅಧಿಕ ಮಧುಮೇಹ, ರಕ್ತದೊತ್ತಡ, ವೈದ್ಯಕೀಯ ತಪಾಸಣೆಯಲ್ಲಿ ನಿರ್ಲಕ್ಷ್ಯ ತೋರಿದ ಗರ್ಭಿಣಿಯರ ಪೈಕಿ ಕೆಲವರು ಮರಣ ಹೊಂದುತ್ತಿರುವುದು ದೃಢಪಟ್ಟಿದೆ. ಜಿಲ್ಲೆಯ ಬಹುತೇಕ ಗರ್ಭಿಣಿಯರು ರಕ್ತಹೀನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಹಿಮೋಗ್ಲೋಬಿನ್ ಕಡಿಮೆ ಇರುವವರು ರಕ್ತ (ಪಿಬಿಸಿ), ಕಬ್ಬಿಣಾಂಶಯುಕ್ತ ಚುಚ್ಚುಮದ್ದು ಸಮಯಕ್ಕೆ ಸರಿಯಾಗಿ ಹಾಕಿಸಿಕೊಳ್ಳುತ್ತಿರುವ ಕಾರಣ ಅನೇಕರು ಸಾವಿನ ಅಂಚಿನಿಂದ ಪಾರಾಗುತ್ತಿದ್ದಾರೆ.

ADVERTISEMENT

ಎರಡು ಕೆ.ಜಿ ಗಿಂತಲೂ ಕಡಿಮೆ ತೂಕದ ಶಿಶು ಜನಿಸಿದರೆ ಹೃದಯ ಸಂಬಂಧಿ, ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುವ ಸಾಧ್ಯತೆ ಹೆಚ್ಚು. ಅಪೌಷ್ಟಿಕತೆ ಕಾರಣಕ್ಕೆ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೂ ಸಾವು ಸಂಭವಿಸುವ ಸಾಧ್ಯತೆ ಇದೆ. ಹೀಗೆ ಹಲವು ನ್ಯೂನತೆಗಳಿಂದ ಶಿಶುಗಳು ಮರಣ ಹೊಂದುತ್ತಿವೆ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದೆ.

2020–21ನೇ ಸಾಲಿನಲ್ಲಿ ಸುಮಾರು 29,268 ಗರ್ಭಿಣಿಯರು ವೈದ್ಯಕೀಯ ತಪಾಸಣೆಗೆ ನೋಂದಣಿ ಮಾಡಿಕೊಂಡು ಚಿಕಿತ್ಸೆ ಪಡೆದಿದ್ದಾರೆ. ಜಿಲ್ಲೆಯಲ್ಲಿ 20,944 ಮಗು ಜನಿಸಿವೆ. ದಾವಣಗೆರೆ, ತುಮಕೂರು, ಬೆಂಗಳೂರು ಸೇರಿ ರಾಜ್ಯದ ಹಲವೆಡೆ ತವರು ಮನೆಗೆ ಹೋದವರದ್ದು, ಆ ಜಿಲ್ಲೆಗಳಲ್ಲೇ ಹೆರಿಗೆಯಾಗಿವೆ. ಹೀಗಾಗಿ ಅಲ್ಲಿಯ ಅಂಕಿ–ಅಂಶ ಪರಿಗಣಿಸಲು ಸಾಧ್ಯವಿಲ್ಲ. ಒಟ್ಟಾರೆ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದ್ದು, ಅದನ್ನು ಇನ್ನಷ್ಟು ತಗ್ಗಿಸಲು ವೈದ್ಯಕೀಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರ ಪ್ರದೇಶಕ್ಕಿಂತಲೂ ಗ್ರಾಮೀಣ ಪ್ರದೇಶ ಹಾಗೂ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗರ್ಭಿಣಿಯರಲ್ಲಿ ಅಪೌಷ್ಟಿಕತೆ, ರಕ್ತಹೀನತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದನ್ನು ಸಂಪೂರ್ಣ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಇಲಾಖೆಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಸಮಯಕ್ಕೆ ಸರಿಯಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.

*
ತಾಯಿ, ಶಿಶುವಿನ ಮರಣ ಪ್ರಮಾಣ ತಗ್ಗಿಸಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಕೋವಿಡ್ ನಂತರ ಕೆಲವರಲ್ಲಿ ರಕ್ತಹೀನತೆ ಸಮಸ್ಯೆ ಹೆಚ್ಚಾಗಿರುವುದು ಕಂಡುಬಂದಿದೆ. ಗರ್ಭಿಣಿಯರ ಕುರಿತು ಹೆಚ್ಚು ಕಾಳಜಿ ವಹಿಸಲು ಸೂಚಿಸಿದ್ದೇನೆ.
– ಡಾ.ಆರ್.ರಂಗನಾಥ್, ಜಿಲ್ಲಾ ಆರೋಗ್ಯಾಧಿಕಾರಿ

*
ಜನಿಸಿದ ಶಿಶುವಿನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಈ ವೇಳೆ ಬ್ಯಾಕ್ಟೀರಿಯಾ, ಸೋಂಕು ತಗುಲಿದರೆ ಸಾವು ಸಂಭವಿಸುತ್ತದೆ. ಇದನ್ನು ತಡೆಯಲು ಪೋಷಕರು ನಿಗದಿತ ಸಮಯದೊಳಗೆ ಚುಚ್ಚುಮದ್ದು ಹಾಕಿಸಬೇಕು.
ಡಾ.ಕುಮಾರಸ್ವಾಮಿ, ಆರ್‌ಸಿಎಚ್‌ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.