ADVERTISEMENT

ರೇಷ್ಮೆ ಹುಳುಗಳ ಸಾವು: ಇಳುವರಿ ಕುಸಿತದ ಆತಂಕ

ರೋಗಕ್ಕೆ ‘ಬೈವೋಲ್ಟೇನ್' ಗೂಡು ಬೆಳೆಗಾರರು ತತ್ತರ

​ಪ್ರಜಾವಾಣಿ ವಾರ್ತೆ
Published 9 ಜೂನ್ 2023, 15:46 IST
Last Updated 9 ಜೂನ್ 2023, 15:46 IST
ಮೊಳಕಾಲ್ಮುರು ತಾಲ್ಲೂಕಿನ ಸಾಕಣೆ ಮನೆಯಲ್ಲಿ ಸತ್ತಿರುವ ರೇಷ್ಮೆ ಹುಳುಗಳು
ಮೊಳಕಾಲ್ಮುರು ತಾಲ್ಲೂಕಿನ ಸಾಕಣೆ ಮನೆಯಲ್ಲಿ ಸತ್ತಿರುವ ರೇಷ್ಮೆ ಹುಳುಗಳು   

ಕೊಂಡ್ಲಹಳ್ಳಿ ಜಯಪ್ರಕಾಶ

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಗೂಡುಕಟ್ಟುವ ಹಂತದಲ್ಲಿ ರೇಷ್ಮೆಹುಳುಗಳು ಏಕಾಏಕಿ ಸಾಯುತ್ತಿರುವ ಪರಿಣಾಮವಾಗಿ ಬಿಳಿ ರೇಷ್ಮೆಗೂಡು (ಬೈವೋಲ್ಟೋನ್) ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವರ್ಷದಿಂದ ಬಾಧಿಸುತ್ತಿದ್ದ ‘ಸಪ್ಪೆರೋಗ’ ಮತ್ತು ‘ಹಾಲುರೋಗ’ 5 ತಿಂಗಳಿಂದ ಉಲ್ಬಣಗೊಂಡಿದೆ. ಇದರಿಂದ ಬೇಸತ್ತಿರುವ ಬೆಳೆಗಾರರು ಬೆಳೆ ನಾಶಕ್ಕೆ ಮುಂದಾಗಿದ್ದಾರೆ. ಹೊಸದಾಗಿ ಕೃಷಿ ಮಾಡುವವರ ಪಾಡಂತೂ ಹೇಳತೀರದಾಗಿದೆ.

ADVERTISEMENT

ರೇಷ್ಮೆಗೂಡಿನ ಉತ್ಪಾದನಾ ಅವಧಿ 21 ದಿನ. ಆದರೆ, 14-15 ದಿನಕ್ಕೇ ರೋಗ ಬಾಧಿಸುತ್ತಿದೆ. ಹುಳುಗಳು ಸೊಪ್ಪು ತಿನ್ನದೆಯೇ ನಿತ್ರಾಣಗೊಂಡು ಸಾಯುತ್ತಿವೆ. ಬದುಕುಳಿದ ಹುಳುಗಳು ಚಂದ್ರಿಕೆಯಲ್ಲಿ ಸರಿಯಾಗಿ ಗೂಡು ಕಟ್ಟುತ್ತಿಲ್ಲ. ಹೀಗಾಗಿ ಕಡಿಮೆ ದರಕ್ಕೆ ಗೂಡು ಮಾರುವ ಅನಿವಾರ್ಯತೆ ಸೃಷ್ಟಿಯಾಗಿದೆ.

‘ಮೊದಲೆಲ್ಲಾ ಪ್ರತಿ 100 ಮೊಟ್ಟೆಗೆ 100 ರಿಂದ 120 ಕೆ.ಜಿ ಇಳುವರಿ ಲಭಿಸುತ್ತಿತ್ತು. ರೋಗ ಬಾಧೆಯಿಂದಾಗಿ ಇದು 25 ರಿಂದ 50 ಕೆ.ಜಿ.ಗೆ ಕುಸಿತವಾಗಿದೆ’ ಎಂದು ಕೊಂಡ್ಲಹಳ್ಳಿಯ ಬೆಳೆಗಾರ ಎಚ್.ಎನ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘ಹುಳು ಸಾಕಣೆಗೆಂದೇ ₹ 20 ಲಕ್ಷದಿಂದ ₹ 30 ಲಕ್ಷ ವ್ಯಯಿಸಿ, ರೇಷ್ಮೆ ಸಾಕಣೆ ಮನೆ ನಿರ್ಮಿಸಿಕೊಂಡಿರುವವರು ಈಗ ದಿಕ್ಕು ತೋಚದಾಗಿದ್ದಾರೆ. ಹುಳುಗಳು ಆರಂಭದಲ್ಲೇ ಮೃತಪಟ್ಟರೆ ನಷ್ಟ ಕಡಿಮೆ. ಅವು ಕೊನೆ ಕ್ಷಣದಲ್ಲಿ ಸಾಯುತ್ತಿರುವುದರಿಂದ ಖರ್ಚು ಮಾಡಿರುವವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ಅವರು ಹೇಳಿದರು. 

‘ಈಗೀಗ ಹುಳು ತಂದುಕೊಡುವವರ ಸಂಖ್ಯೆ ಹೆಚ್ಚಾಗಿದೆ. ರೋಗ ಬಾಧೆಗೆ ಅದು ಕೂಡ ಕಾರಣವಾಗಿರಬಹುದು. ರೇಷ್ಮೆ ಹುಳು 28 ಡಿಗ್ರಿ ಗರಿಷ್ಠ ಉಶ್ಣಾಂಶ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಆದರೆ, ಈ ವರ್ಷ 36ರಿಂದ 38 ಡಿಗ್ರಿಯಷ್ಟು ತಾಪಮಾನ ಇದ್ದು, ಗುಣಮಟ್ಟದ ಸೊಪ್ಪು ಉತ್ಪಾದನೆ, ಹುಳು ಆರೋಗ್ಯದ ಮೇಲೆ ಪರಿಣಾಮ ಬೀರಿದೆ’ ಎಂದು ರೇಷ್ಮೆ ವಿಸ್ತರಣಾಧಿಕಾರಿ ಮಹೇಶ್ ವಿವರಿಸಿದರು.

‘2022ರ ಡಿಸೆಂಬರ್‌ನಲ್ಲಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಪ್ರಥಮವಾಗಿ ಈ ರೋಗ ವರದಿಯಾಗಿತ್ತು. ಈಚೆಗೆ ಎಲ್ಲಡೆ ವ್ಯಾಪಿಸಿದೆ. ರೇಷ್ಮೆ ಕೃಷಿ ವಿಜ್ಞಾನಿಗಳ ಗಮನಕ್ಕೆ ತರಲಾಗಿದೆ. ಈವರೆಗೆ ಕಾರಣ ತಿಳಿಸಿಲ್ಲ. ರೇಷ್ಮೆ ಸೊಪ್ಪಿಗೆ ರೋಗ ಕಾಣಿಸಿಕೊಂಡಲ್ಲಿ ಯಾವ ಔಷಧ ಸಿಂಪಡಣೆ ಮಾಡಬೇಕು ಎಂದು ಇಲಾಖೆ ಸೂಚಿಸಿಲ್ಲ. ಕೀಟನಾಶಕದ ಅಂಗಡಿಯವರು ನೀಡುವ ಔಷಧ ಸಿಂಪಡಿಸುತ್ತಿರುವ ಕಾರಣಕ್ಕೂ ಹುಳುಗಳು ಸಾಯುತ್ತಿವೆ’ ಎಂದು ಹಲವು ವರ್ಷಗಳಿಂದ ಹುಳು ಸರಬರಾಜು ಮಾಡುತ್ತಿರುವ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಕಿರಣಗೆರೆ ಛಾಕಿಕೇಂದ್ರದ (ಹುಳು ಸಾಕಣೆ ಕೇಂದ್ರ) ಮಾಲೀಕ ವಿಜಯ್ ಎಚ್. ಗೌಡ ಹೇಳಿದರು.

ಗಿಡಕ್ಕೂ ರೋಗ

‘ಹಿಪ್ಪುನೇರಳೆ ಗಿಡ ಒಣಗುವ ರೋಗವೂ ಕಾಣಿಸಿಕೊಂಡಿದೆ. ಅಧಿಕಾರಿಗಳ ಸಲಹೆಯಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಯೋಜನವಾಗಿಲ್ಲ. ಪ್ರತಿ ಎಕರೆಯಲ್ಲಿ ಶೇ 20ರಷ್ಟು ಗಿಡಗಳು ರೋಗಕ್ಕೆ ಬಲಿಯಾಗುತ್ತಿವೆ. ಈಗ ಒಂದು ಕೆ.ಜಿ ಗೂಡು ₹ 400 ರಿಂದ ₹ 450ಕ್ಕೆ ಮಾರಾಟವಾಗುತ್ತಿದ್ದು, ಖರ್ಚು ಕೂಡ ವಾಪಸ್ ಬರುತ್ತಿಲ್ಲ’ ಎಂದು ಬೆಳೆಗಾರ ಬಿ.ಟಿ. ಹನುಮ ರೆಡ್ಡಿ ನೋವು ತೋಡಿಕೊಂಡರು.

ಸಾಕಣೆ ಮನೆಯಲ್ಲಿ ಸಾಯುತ್ತಿರುವ ರೇಷ್ಮೆ ಹುಳುಗಳು
ರೋಗಕ್ಕೆ ತುತ್ತಾಗಿರುವ ಹಿಪ್ಪು ನೇರಳೆ ಗಿಡ
ಹುಳುವಿಗಾಗಿ ನಿರ್ಮಿಸಿದ ಮನೆಯಲ್ಲಿ ಈ ವರ್ಷ ಹೆಚ್ಚಿನ ತಾಪವಿರುವುದು ಸಮಸ್ಯೆಗೆ ಮೂಲ ಕಾರಣ. ಹುಳುಗಳು ರೋಗ ನಿರೋಧಕ ಶಕ್ತಿ ಕಳೆದುಕೊಂಡು ಸಾಯುತ್ತಿವೆ. ಉಷ್ಣಾಂಶ ಕಡಿಮೆಗೊಳಿಸುವ ಮಾರ್ಗೋಪಾಯಗಳನ್ನು ಅನುಸರಿಸಬೇಕು.
ಶ್ರೀನಿವಾಸ್ ವಿಜ್ಞಾನಿ ಚಿತ್ರದುರ್ಗ ರೇಷ್ಮೆ ಸಂಶೋಧನಾ ಕೇಂದ್ರ
ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧೆಡೆ ರೇಷ್ಮೆ ಹುಳುಗಳು ಸಾಯುತ್ತಿರುವುದು ಕಂಡು ಬಂದಿದೆ. ಸಾಕಣೆ ಮನೆಗಳಲ್ಲಿ ಉಷ್ಣಾಂಶ ಕಡಿಮೆ ಮಾಡಿಕೊಳ್ಳಬೇಕು. ಹುಳುಗಳು 4-5ನೇ ಹಂತದಲ್ಲಿ ಸಾಯುತ್ತಿರುವುದಕ್ಕೆ ಸಾಕಣೆ ಸಮಸ್ಯೆ ಕಾರಣವಾಗಿರಬಹುದು.
ಮಲ್ಲಿಕಾರ್ಜುನ್ ವಿಜ್ಞಾನಿ ಮೈಸೂರು ಕೇಂದ್ರೀಯ ರೇಷ್ಮೆ ಸಂಶೋಧನಾ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.