ADVERTISEMENT

ಚಳ್ಳಕೆರೆ: ಬೆಳೆ ವಿಮೆಗೆ ಆಗ್ರಹ- ಮುಖ್ಯಮಂತ್ರಿ ಬಳಿ ನಿಯೋಗ

ಹೋರಾಟಕ್ಕೆ ಜಿಲ್ಲಾ ಕಾಂಗ್ರೆಸ್‍, ಫಾರ್ಮಾಸಿಸ್ಟ್‌ ಬೆಂಬಲ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:29 IST
Last Updated 22 ಜೂನ್ 2021, 6:29 IST
ಚಳ್ಳಕೆರೆ ರೈತ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿದರು
ಚಳ್ಳಕೆರೆ ರೈತ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ರೈತ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿದರು   

ಚಳ್ಳಕೆರೆ: 2019 ಹಾಗೂ 2020ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಈ ತಿಂಗಳ ಅಂತ್ಯದ ಒಳಗೆ ಜಿಲ್ಲೆಯ ರೈತರ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕೊಂಡೊಯ್ಯಲಾಗುವುದು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ತಿಳಿಸಿದರು.

ತಾಲ್ಲೂಕು ರೈತ ಸಂಘದ ಕಚೇರಿಯಲ್ಲಿ ಸೋಮವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರದ ಫಸಲ್‍ ಬಿಮಾ ಯೋಜನೆಯಿಂದ ಯಾವುದೇ ಪ್ರಯೋಜನವಿಲ್ಲ. ಬೆಳೆ ವಿಮೆ ಪಾವತಿಸಿಕೊಂಡು ವಿಮಾ ಕಂಪನಿ ರೈತರನ್ನು ವಂಚಿಸುತ್ತಲೇ ಬಂದಿದೆ. ಪ್ರತಿವರ್ಷ ಬರ ಅಥವಾ ನೆರೆ ಒಂದಲ್ಲ ಒಂದು ಸಂಕಷ್ಟವನ್ನು ರೈತರು ಎದುರಿಸುತ್ತಲೇ ಬರುತ್ತಿದ್ದಾರೆ. ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಮುಂಗಾರು ಹಂಗಾಮಿನ ಬೆಳೆವಿಮೆ ಪಾವತಿಸಲು ಚಿನ್ನಾಭರಣವನ್ನು ರೈತರು ಬ್ಯಾಂಕ್‍ನಲ್ಲಿ ಇಟ್ಟಿದ್ದಾರೆ. ವಿಮೆ ಪಾವತಿಸಲು ದಿನಾಂಕ ನಿಗದಿ ಮಾಡುತ್ತದೆ. ಆದರೆ, ರೈತರಿಗೆ ಬೆಳೆ ವಿಮೆ ಹಣ ನೀಡಲು ಯಾವುದೇ ದಿನಾಂಕ ನಿಗದಿ ಮಾಡುವುದಿಲ್ಲ ಎಂದು ಆರೋಪಿಸಿದರು.

ರೈತ ಮುಖಂಡ ರೇಣುಕಾಪುರ ಅಮರೇಶ, ‘2020ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಶೇಂಗಾ ಹಾಗೂ ಈರುಳ್ಳಿ ಬೆಳೆ ನಾಶವಾಗಿತ್ತು. ವರದಿಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಪರಿಹಾರ ಇನ್ನೂ ಬಂದಿಲ್ಲ’ ಎಂದು ದೂರಿದರು.

32,750 ಹೆಕ್ಟೇರ್ ಪ್ರದೇಶದ ಬೆಳೆಯಲ್ಲಿ ಶೇ 33ರಷ್ಟು ಗ್ರಾಮವಾರು ಬೆಳೆ ನಷ್ಟದ ವರದಿಯನ್ನು ಕಂದಾಯ ಇಲಾಖೆ ಕಳುಹಿಸಲಾಗಿತ್ತು ಎಂದು ಕೃಷಿ ಸಹಾಯಕ ನಿದೇಶಕ ಡಾ.ಮೋಹನ್‍ಕುಮಾರ್ ಹೇಳಿದರು.

ಪ್ರಗತಿಪರ ರೈತ ಆರ್.ದಯಾನಂದ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮತ್ಸಮುದ್ರ ತಿಪ್ಪೇಸ್ವಾಮಿ, ಜಯಣ್ಣ, ರಾಜಣ್ಣ, ರುದ್ರಮ್ಮನಹಳ್ಳಿ ತಿಪ್ಪೇಸ್ವಾಮಿ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.