ADVERTISEMENT

ಕಿಟ್‌ ಖರೀದಿ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ

ನಗರದಲ್ಲಿ ಪ್ರತಿಭಟನೆ ವೇಳೆ ‘ಪೇ ಕೆಕೆಎಂ’ ಭಿತ್ತಿಪತ್ರ ಪ್ರದರ್ಶಿಸಿದ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:39 IST
Last Updated 28 ಸೆಪ್ಟೆಂಬರ್ 2022, 4:39 IST
ಕಿಟ್‍ಗಳ ಖರೀದಿ ನಿಲ್ಲಿಸುವಂತೆ ಆಗ್ರಹಿಸಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.
ಕಿಟ್‍ಗಳ ಖರೀದಿ ನಿಲ್ಲಿಸುವಂತೆ ಆಗ್ರಹಿಸಿ ಚಿತ್ರದುರ್ಗದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಘಟಕ ಪ್ರತಿಭಟನೆ ನಡೆಸಿತು.   

ಚಿತ್ರದುರ್ಗ: ರೇಷನ್‌, ಟೂಲ್‌, ಬೂಸ್ಟರ್ ಹಾಗೂ ಸುರಕ್ಷಾ ಕಿಟ್‌ ಖರೀದಿಯಲ್ಲಿನ ಅಕ್ರಮದ ತನಿಖೆಗೆ ಆಗ್ರಹಿಸಿದ್ದರೂ ನಿಯಮ ಉಲ್ಲಂಘಿಸಿ ಕಾರ್ಮಿಕ ಮಂಡಳಿ ಖರೀದಿ ಪ್ರಕ್ರಿಯೆ ಮುಂದುವರಿಸಿದೆ ಎಂದು ಆರೋಪಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್‌ (ಸಿಐಟಿಯು) ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಘಟಕ ಮಂಗಳವಾರ ‘ಪೇ ಕೆಕೆಎಂ’ ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿತು.

ನಗರದ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕಾರ್ಮಿಕ ಸಚಿವರ ವಿರುದ್ಧ ಧಿಕ್ಕಾರ ಕೂಗಿದರು. ಪೇ ಕೆಕೆಎಂ’ (ಕಿಟ್‌ಕಳ್ಳ ಕಾರ್ಮಿಕ ಮಂತ್ರಿ) ಭಿತ್ತಿಪತ್ರ ಹಾಗೂ ಕಳಪೆ ಕಿಟ್‌ಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕಟ್ಟಡ ಕಾರ್ಮಿಕರಲ್ಲದವರಿಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತಿದೆ. ಇದರಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ಸಹ ಭಾಗಿಯಾಗಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ADVERTISEMENT

ಕಾರ್ಮಿಕರಿಗೆ ಕಳಪೆ ಕಿಟ್‍ಗಳನ್ನು ನೀಡುತ್ತಿರುವ ರಾಜ್ಯ ಸರ್ಕಾರ ಕೂಡಲೇ ವಿವಿಧ ಬಗೆಯ ಖರೀದಿಗಳನ್ನು ನಿಲ್ಲಿಸಬೇಕು. ಕಾರ್ಮಿಕ ಸಚಿವರಿಗೆ ಎಲ್ಲದಕ್ಕೂ ಕಟ್ಟಡ ಕಾರ್ಮಿಕರ ಹಣವೇ ಬೇಕಾ ಎಂದು ಪ್ರಶ್ನಿಸಿದರು.

ಮಂಡಳಿಯ ನಿಯಮಾವಳಿ ಹಾಗೂ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ಪಾಲಿಸದೆ ಕಿಟ್‌ಗಳ ಖರೀದಿ ನಡೆದಿದೆ. ಜತೆಗೆ ಪಾರದರ್ಶಕತೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಯಾವುದನ್ನೂ ಲೆಕ್ಕಿಸದೆ ಮಂಡಳಿ ನಿರಂತರ ಖರೀದಿಯಲ್ಲಿ ತೊಡಗಿದೆ ಎಂದು ಕಳಪೆ ಕಿಟ್‍ ಪ್ರದರ್ಶಿಸಿ ದೂರಿದರು.

ಕೊಳಚೆ ನಿರ್ಮೂಲನಾ ಮಂಡಳಿ ಸೇರಿ ಇತರೆ ವಸತಿ ಯೋಜನೆಗಳ ಫಲಾನುಭವಿಗಳನ್ನು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಗೆ ಫಲಾನುಭವಿಗಳನ್ನಾಗಿ ನೋಂದಾಯಿಸುವ ಪ್ರಕ್ರಿಯೆ ಕೈಬಿಡಬೇಕು. ಕಾರ್ಮಿಕರಿಗೆ ಸಾಲಕ್ಕೆ ಬದಲು ಮನೆ ನಿರ್ಮಿಸಿಕೊಳ್ಳಲು
₹ 5 ಲಕ್ಷ ಸಹಾಯಧನ ನೀಡಬೇಕು. ಸಹಾಯಕ, ಸಹಾಯಕಿಯರು, ವೆಲ್ಡರ್‌ಗಳಿಗೆ ನೇರವಾಗಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಬೇಕು, ಪೇಂಟರ್‌ಗಳಿಗೆ ಕಿಟ್‍ಗಳನ್ನು ನೀಡುತ್ತಿರುವ ಜೊತೆಗೆ ಅಲ್ಯುಮಿನಿಯಮ್‌ ಸ್ಟಿಕ್ ಹಾಗೂ ಸ್ಟ್ಯಾಂಡ್ ವಿತರಿಸಬೇಕು ಎಂದು ಒತ್ತಾಯಿಸಿದರು.

ಕೊಳಚೆ ನಿರ್ಮೂಲನಾ ಮಂಡಳಿಗೆ ಪಾವತಿಸಲಾದ ₹ 76 ಕೋಟಿಯನ್ನು ಮಂಡಳಿಗೆ ವರ್ಗಾಯಿಸಬೇಕು. ‘ಸಿಜಿಎಚ್‌’ ಆಧಾರಿತ ವೈದ್ಯಕೀಯ ಮರುಪಾವತಿ ಯೋಜನೆ ರದ್ದುಗೊಳಿಸಿ ‘ಆರೋಗ್ಯ ಸಂಜೀವಿನಿ 2021’ ನಗದು ರಹಿತ ಸೇವೆ ಜಾರಿಗೊಳಿಸಸಬೇಕು. ಎಸ್‌ಎಸ್‌ಪಿ ಪೋರ್ಟ್‌ಲ್‌ನಲ್ಲಿ ಬಾಕಿ ಇರುವ 60 ಸಾವಿರ ಅರ್ಜಿಗಳನ್ನು ಕೂಡಲೇ ಇತ್ಯರ್ಥ್ಯಪಡಿಸಿ ಹಣ ಜಮಾ ಮಾಡಬೇಕು ಎಂದು ಆಗ್ರಹಿಸಿದರು.

ಹೆಸರಿಗಷ್ಟೇ 19 ಸೌಲಭ್ಯಗಳು ಕಲ್ಯಾಣ ಮಂಡಳಿಯ ಪಟ್ಟಿಯಲ್ಲಿವೆ. ಆದರೆ ಜಾರಿಯಲ್ಲಿಲ್ಲ. ಅಗತ್ಯ ನಿಯಮಾವಳಿ ರೂಪಿಸಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಬೇಕು. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ. ಗೌಸ್‌ಪೀರ್‌, ಕಟ್ಟಡ ಕಾರ್ಮಿಕ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ. ನಾಗರಾಜಾಚಾರಿ, ಖಜಾಂಚಿ ಉಮೇಶ್‌, ಸಣ್ಣಮ್ಮ, ಜಿಕ್ರಿಯಾವುಲ್ಲಾ, ಅಬ್ದುಲ್ಲಾ, ಮಂಜುನಾಥ್‌, ಭಾಸ್ಕರಾಚಾರಿ, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.