ADVERTISEMENT

ಚಿತ್ರದುರ್ಗ: ಮೌಲ್ಯವಿಲ್ಲದ ರಾಜಕಾರಣದಿಂದ ಅಭಿವೃದ್ಧಿ ಕುಂಠಿತ

ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 6:03 IST
Last Updated 5 ನವೆಂಬರ್ 2021, 6:03 IST
ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 3ನೇ ದಿನವಾದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು (ಎಡಚಿತ್ರ). ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆ ಮಕ್ಕಳು ಯೋಗ ನೃತ್ಯರೂಪಕ ಪ್ರದರ್ಶಿಸಿದರು
ಸಾಣೇಹಳ್ಳಿ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಸಮಾರಂಭದ 3ನೇ ದಿನವಾದ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿದರು (ಎಡಚಿತ್ರ). ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆ ಮಕ್ಕಳು ಯೋಗ ನೃತ್ಯರೂಪಕ ಪ್ರದರ್ಶಿಸಿದರು   

ಸಾಣೇಹಳ್ಳಿ (ಹೊಸದುರ್ಗ): ‘ರಾಜಕಾರಣಿಯಲ್ಲಿ ಮೌಲ್ಯ ಕಾಣದಿದ್ದರೆ ರಾಷ್ಟ್ರ ಕಟ್ಟುವ ಅಭಿವೃದ್ಧಿ ಕಾರ್ಯ ವಿಫಲವಾಗುತ್ತದೆ. ಆಡಳಿತದಲ್ಲಿ ಮಾನವೀಯ ಮೌಲ್ಯ ಕೊರತೆ ಉಂಟಾದರೆ ಸಮಾಜದಲ್ಲಿ ಹೇಗೆ ಸುಧಾರಣೆ ತರಬಹುದು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕೇಂದ್ರ ಮಂತ್ರಿಯಾದರೂ ಸುಧಾರಣೆ ತರದಿದ್ದರೆ ಅಧಿಕಾರ ಬೇಕಾ ಎಂಬ ಪ್ರಶ್ನೆ ಕಾಡುತ್ತದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ. ನಾರಾಯಣಸ್ವಾಮಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವಬೆಳ್ಳಿಹಬ್ಬ ಕಾರ್ಯಕ್ರಮದ 3ನೇ ದಿನವಾದ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದರು.

‘ಜನಪರ ಅಭಿವೃದ್ಧಿ ಕಾರ್ಯಕ್ಕೆ ಮೌಲ್ಯಗಳು ಹಾಗೂ ಮಾನವೀಯತೆ ಅನಿವಾರ್ಯ. ಆಡಳಿತದಲ್ಲಿ ಮಾನವೀಯತೆಯ ಕೊರತೆ ಉಂಟಾದರೆ ಅಪಾಯ ಸಂಭವಿಸುತ್ತದೆ. ಸಂವಿಧಾನಬದ್ಧ ಕಾರ್ಯ ಮಾಡಲು ಮೌಲ್ಯಯುತ ಜೀವನ ಅವಶ್ಯ. ಮಾನವೀಯತೆ ಸತ್ತುಹೋಗಲು ಕಾರಣ ಯಾರು? 21ನೇ ಶತಮಾನದಲ್ಲಿ ಯಾವ ಶಿಕ್ಷಣ ಪದ್ಧತಿ ಸಮಾಜಕ್ಕೆ ಅವಶ್ಯವಿದೆ ಎಂಬುದನ್ನು ಹುಡುಕುವ ಕಾಲ ಬಂದಿದೆ. ರಾಜಕಾರಣಿಗಳೆಂದರೆ ಅಸಹ್ಯಪಡುವ ಕಾಲ ಸೃಷ್ಟಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಮಠಗಳು ವ್ಯಾಪಾರದ ಕೇಂದ್ರಗಳಾಗಿವೆ. ಇಂತಹ ಕಾಲದಲ್ಲಿ ಸಾಂಸ್ಕೃತಿಕ ಚಟುವಟಿಕೆ ಸಾಣೇಹಳ್ಳಿಯಲ್ಲಿ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ. ವ್ಯಕ್ತಿಯಲ್ಲಿ ಇರುವ ಜ್ಞಾನ ಸಮಾಜ, ರಾಷ್ಟ್ರ ಕಟ್ಟುವ ಕೆಲಸಕ್ಕೆ ಬಳಕೆಯಾಗಬೇಕು. ಮಾನವನ ಬದುಕು, ಸಮಾಜದ ಪರಿವರ್ತನೆಗೆ ರಂಗಭೂಮಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದಕ್ಕೆ ಸಾಣೇಹಳ್ಳಿಯ ಕಾರ್ಯಕ್ರಮ ಸಾಕ್ಷಿ. ಪಟಾಕಿ ಸುಡುವುದಕ್ಕೆದೀಪಾವಳಿ ಅಂದುಕೊಳ್ಳಬಾರದು. ಬದಲಾಗಿ ಜೀವನದಲ್ಲಿ ಬೆಳಕು, ಮಾನವೀಯತೆಯ ಬದುಕು ಕಾಣಲು ದೀಪಾವಳಿ ಮಾದರಿಯಾಗಬೇಕು. ಜೀವನವನ್ನು ಅರ್ಥ ಮಾಡಿಕೊಳ್ಳಲು 6 ದಿನ ಇಲ್ಲಿ ನಡೆಯುವ ನಾಟಕೋತ್ಸವ ನೆರವಾಗುತ್ತದೆ’ ಎಂದುತಿಳಿಸಿದರು.

‘ವಚನಗಳಲ್ಲಿ ಆರೋಗ್ಯ- ಆಹಾರ’ ವಿಷಯ ಕುರಿತು ಉಪನ್ಯಾಸ ನೀಡಿದ ಬೆಳಗಾವಿ ಡಾ.ಅವಿನಾಶ್ ಕವಿ, ‘ಮಾನವರಲ್ಲಿ ಸಹಜವಾಗಿ ಸುಖ, ಶಾಂತಿಯಿಂದ ಬದುಕಬೇಕು ಎಂಬ ಆಸೆ ಇರುತ್ತದೆ. ಆಸ್ಪತ್ರೆಗಳ ಲಭ್ಯತೆ ಆರೋಗ್ಯವಲ್ಲ. ದೈಹಿಕ ಆರೋಗ್ಯದ ಕಡೆ ಅಷ್ಟೇ ಲಕ್ಷ್ಯ ಕೊಡುತ್ತಿದ್ದೇವೆ. ಇದರ ಜತೆಗೆ ಮಾನಸಿಕ, ಸಾಮಾಜಿಕ ಆರೋಗ್ಯಕ್ಕೆ ಹೆಚ್ಚು ಪ್ರಾಧಾನ್ಯ ಕೊಡಬೇಕಿದೆ. ಶರಣರ ವಚನಗಳಲ್ಲಿ ಆರೋಗ್ಯ ವೃದ್ಧಿಗೆ ಪರಿಹಾರವಿದೆ. ಸಮತೋಲನ ಆಹಾರವನ್ನು ಮಿತವಾಗಿ ಸೇವಿಸಬೇಕು’ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ದೀಪಾವಳಿಯನ್ನು ಬೆಳಕಿನ ಹಬ್ಬ ಎನ್ನುವರು. ದೀಪ ತಾನು ಉರಿದು ಸುತ್ತಲ ಕತ್ತಲೆ ಕಳೆಯುವುದು. ಹಾಗೆ ಮನುಷ್ಯ ತಾನು ನೊಂದುಕೊಂಡಾದರೂ ಇತರರಿಗೆ ನಲಿವನ್ನು ನೀಡಬೇಕು. ಮೇಣದಬತ್ತಿ ತಾನು ಕರಗಿ ಬೆಳಕು ಕೊಡುವಂತೆ ಮಾನವ ಸತ್ಕಾರ್ಯಗಳ ಮೂಲಕ ದೀಪದಂತೆ ಸಮಾಜಕ್ಕೆ ಬೆಳಕು ಕೊಡಬೇಕು. ದೀಪಾವಳಿಯ ಸಂದರ್ಭದಲ್ಲಿ ಹೊಟ್ಟೆಗೆ ತುಂಬುವ ಆಹಾರಕ್ಕಿಂತ ತಲೆಗೆ ತುಂಬುವ ಅರಿವಿನ ಆಹಾರದತ್ತ ಹೆಚ್ಚು ಗಮನ ಹರಿಸಬೇಕು. ಆಗಲೇ ಹಬ್ಬದ ಆಚರಣೆ ಅರ್ಥಪೂರ್ಣ’ ಎಂದು ಸಲಹೆ ನೀಡಿದರು.

ನೇತೃತ್ವ ವಹಿಸಿದ್ದ ಅಥಣಿ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮೀಜಿ, ಶಾಸಕರಾದ ಕೆ.ಪೂರ್ಣಿಮಾ ಶ್ರೀನಿವಾಸ್‌, ಬೆಳ್ಳಿ ಪ್ರಕಾಶ್, ವಿರೂಪಾಕ್ಷಪ್ಪ, ಮುಖಂಡ ಷಣ್ಮುಖಪ್ಪ ಹನುಮಲಿ, ನಟ ಸಂಗಮೇಶ ಉಪಾಸೆ,ದೆಹಲಿ ಕರ್ನಾಟಕ ಸಂಘದ ಪ್ರಧಾನಕಾರ್ಯದರ್ಶಿ ಆರ್.ರೇಣುಕುಮಾರ್‌, ಬಿಗ್‌ಬಾಸ್‌ ಖ್ಯಾತಿಯ ದಯಾಳ್‌, ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರಾದ ಶಶಿಕಲಾ ಮಾತನಾಡಿದರು.

ಕೆ.ಆರ್. ಮಂಗಳ ಅವರ ‘ನಾನು ಯಾರು ಎಂಬ ಆಳ ನಿರಾಳ’ ಕೃತಿ ಲೋಕಾರ್ಪಣೆಗೊಂಡಿತು. ಶಿವಮೊಗ್ಗದ ಬಸವಕೇಂದ್ರದ ಮರುಳಸಿದ್ಧ ಸ್ವಾಮೀಜಿ ಇದ್ದರು.

ಸಾಣೇಹಳ್ಳಿ ಅಕ್ಕನ ಬಳಗದವರು ವಚನಗೀತೆ ಹಾಡಿದರು. ಅಣ್ಣಿಗೆರೆಯ ಯಶಸ್ವಿನಿ ಯೋಗ ಸಂಸ್ಥೆಯ ಮಕ್ಕಳುಯೋಗ ನೃತ್ಯರೂಪಕ ನಡೆಸಿಕೊಟ್ಟರು. ಶಿವಕುಮಾರ ಕಲಾಸಂಘದವರು ಡಾ.ಮಹಾದೇವ ಬಣಕಾರ ರಚನೆ, ವೈ.ಡಿ.ಬದಾಮಿ ನಿರ್ದೇಶನದ ‘ಉರಿಲಿಂಗಪೆದ್ದಿ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.