ಚಿತ್ರದುರ್ಗ: ‘ವಂಚಿತ ಸಮುದಾಯಗಳಿಗೆ ದೇವರಾಜ ಅರಸು ಅವಕಾಶಗಳ ಬಾಗಿಲು ತೆರದರು. ಉತ್ತಮ ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದ ಅವರು ಬಡತನ ನಿರ್ಮೂಲನೆಗೆ ಪ್ರಯತ್ನಿಸಿದರು’ ಎಂದು ಕನ್ನಡ ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ನಗರದ ಎಸ್.ಜೆ.ಕಲ್ಯಾಣ ಮಂಟಪದಲ್ಲಿ ಬುಧವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಬಡತನ ನಿರ್ಮೂಲನೆ, ಭೂ ಸುಧಾರಣೆ, ಸಾಮಾಜಿಕ ನ್ಯಾಯಕ್ಕಾಗಿ ಹಗಲಿರಲು ಶ್ರಮಿಸಿದರು’ ಎಂದರು.
‘ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಆಡಿದ ಭಾಷಣಗಳ ಸಂಗ್ರಹವನ್ನು 13 ಸಂಪುಟಗಳಲ್ಲಿ ಹೊರತರಲಾಗಿದೆ. ಯುವ ಜನತೆ ಅರಸು ಭಾಷಣಗಳ ತಪ್ಪದೇ ಅಧ್ಯಯನ ಮಾಡಬೇಕು’ ಎಂದು ಕರೆ ನೀಡಿದರು.
‘ವಿದ್ಯಾರ್ಥಿ ಜೀವನದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿದ್ದು ಕಲಿತಿದ್ದೇನೆ. ದೇವರಾಜ ಅರಸು ಅವರು ಮಾಡಿದ ಸಾಮಾಜಿಕ ಸುಧಾರಣೆಯ ಫಲವಾಗಿ ನನ್ನಂತಹ ಲಕ್ಷಾಂತರ ಜನರು ಶಿಕ್ಷಣ ಪಡೆದು ಉನ್ನತ ಹಂತಕ್ಕೆ ಏರಲು ಸಾಧ್ಯವಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ತಿಳಿಸಿದರು.
‘1969 ರಿಂದ 1979 ವರೆಗಿನ ಕಾಲವನ್ನು ಅರಸು ಯುಗ ಎಂದೇ ಕರೆಯಲಾಗುತ್ತದೆ. ಮೈಸೂರು ರಾಜ್ಯಕ್ಕೆ ಕರ್ನಾಟಕ ನಾಮಕರಣ, ಉಳುವವನೇ ಭೂಮಿಯ ಒಡೆಯ ಘೋಷಣೆಯೊಂದಿಗೆ ಭೂ ಸುಧಾರಣೆ, ಕನಿಷ್ಠ ಕೂಲಿ ನಿಗದಿ, ಋಣ ಪರಿಹಾರ, ಜೀತ ವಿಮುಕ್ತಿ, ಎಲ್.ಜಿ.ಹಾವನೂರು ಆಯೋಗದ ವರದಿ ಅನುಷ್ಠಾನ ಮಾಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸಿತು. ವೃದ್ಧಾಪ್ಯ ವೇತನ ಹೀಗೆ ನಾನಾ ರೀತಿಯ ಚಾರಿತ್ರಿಕ ಅಭಿವೃದ್ಧಿ ಕೆಲಸಗಳು ಅರಸು ಯುಗದಲ್ಲಿ ಜಾರಿಗೆ ಬಂದವು’ ಎಂದರು.
‘ದೇವರಾಜು ಅರಸು ಸಾಮಾಜಿಕ ಸಮಾನತೆಯ ಹರಿಕಾರ. ಹಿಂದುಳಿದ ವರ್ಗಗಳು ದಲಿತರು ಮತ್ತು ವಿಶೇಷವಾಗಿ ಎಲ್ಲಾ ಜಾತಿಯ ಬಡವರ ಬಗ್ಗೆ ವಿಶೇಷ ಆಸ್ತಿವಹಿಸಿ ಕೆಲಸ ಮಾಡಿದ ಮಹಾನ್ ವಿಚಾರವಾದಿ’ ಎಂದು ಸಾಹಿತಿ ಎಚ್.ಆನಂದ್ ಕುಮಾರ್ ತಿಳಿಸಿದರು.
‘ಅರಸುರವರು ಅಧಿಕೃತ ಭಾಷೆಯನ್ನಾಗಿ ಕನ್ನಡವನ್ನು ಆಡಳಿತಕ್ಕೆ ತಂದ ಕನ್ನಡದ ಕಟ್ಟಾಳು. ದೇವರಾಜು ಅರಸುರವರನ್ನು ಜನರು ಬಡವರ ರಾಜ ಎಂದು ಕರೆಯುತ್ತಿದ್ದರು. ಭೂ ಸುಧಾರಣೆಯಂತಹ ಅತ್ಯಂತ ಜಟಿಲ ಮತ್ತು ಕಠಿಣ ಕಾನೂನನ್ನು ಜಾರಿಗೆ ಮಾಡಿದ ಅರಸು ಜನಮಾನದಲ್ಲಿ ನಿಲ್ಲುವ ಮಹಾನ್ ನಾಯಕ’ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಕೆಡಿಪಿ ಸದಸ್ಯ ವಿಜಯ್ ಕುಮಾರ್, ಜಿಲ್ಲಾ ಪಂಚಾಯಿತತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ಇದ್ದರು.
Quote - ಚೋಮನ ದುಡಿಯಲ್ಲಿ ಭೂಮಿ ಉಳುಮೆ ಮಾಡಬೇಕು ಎಂಬ ಚೋಮನ ಕನಸು ಕನಸಾಗಿಯೇ ಉಳಿಯುತ್ತದೆ. ಆದರೆ ಅರಸು ಅವರು ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದು ಬಡವರ ಭೂ ಒಡೆತನದ ಕನಸು ನನಸು ಮಾಡಿದರು. ಬಿ.ಟಿ.ಕುಮಾರಸ್ವಾಮಿ ಹೆಚ್ಚುವರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.