ಧರ್ಮಪುರ: ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಔಷಧಿ ಬಳಕೆಯಿಂದ ಭೂಮಿ ಬರಡಾಗುತ್ತಿದ್ದು, ಇದನ್ನು ತಪ್ಪಿಸಬೇಕಾದರೆ ರೈತರು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್ ಸಲಹೆ ನೀಡಿದರು.
ಸಮೀಪದ ಈಶ್ವರಗೆರೆಯಲ್ಲಿ ಶ್ರೀಕೈಲಾಸನಾಥ ರೈತ ಉತ್ಪಾದಕ ಕಂಪನಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ರೈತರು ಹೆಚ್ಚುಹೆಚ್ಚು ಸಿರಿಧಾನ್ಯ ಬೆಳೆಯಬೇಕು. ಕೊಟ್ಟಿಗೆಯಲ್ಲಿ ಹೆಚ್ಚು ದೇಸೀ ಹಸುಗಳನ್ನು ಸಾಕಬೇಕು. ಕೊಟ್ಟಿಗೆ ಗೊಬ್ಬರ ಮತ್ತು ಗಂಜಳ ಸಂಗ್ರಹಿಸಿ ಬೆಳೆಗಳಿಗೆ ಕೊಟ್ಟಾಗ ಸಮೃದ್ಧ ಬೆಳೆಗಳನ್ನು ಬೆಳೆಯಬಹುದು ಎಂದರು.
ರೈತರು ಮಿಶ್ರಬೆಳೆ ಪದ್ಧತಿ ಅನುಸರಿಸಿ ಎಲ್ಲ ಬಗೆಯ ಕಾಳುಗಳನ್ನು ಬೆಳೆಯಬೇಕು ಎಂದು ಬೆಂಗಳೂರಿನ ಮೈಕ್ರೊಬಿ ಫೌಂಡೇಷನ್ ಅಧ್ಯಕ್ಷ ಕೆ.ಆರ್.ಹುಲ್ಲುನಾಚೆಗೌಡ ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎಂ.ವಿ.ಮಂಜುನಾಥ್, ಮೈಕ್ರೊಬಿ ಫೌಂಡೇಷನ್ ಸಿಇಒ ನರಸಿಂಹಪ್ಪ, ಕೃಷಿ ಅಧಿಕಾರಿ ಕಿರಣ್ ಕುಮಾರ್ ಮಾತನಾಡಿದರು. ಎಚ್.ರಾಧಾ ಶಿವಣ್ಣ, ಐಸಿಸಿಒಎ ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್.ತಿಪ್ಪೇಸ್ವಾಮಿ, ಶಿವರಾಜ್, ಜಯರಾಜ್, ನಿಜಲಿಂಗಪ್ಪ, ರಂಗಸ್ವಾಮಿ, ಸುಂದರೇಶ್, ಶಂಕರಪ್ಪ, ಸಿದ್ದೇಶ್, ಶಿವಮೂರ್ತಿ, ಎಚ್.ತಿಪ್ಪೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.