ADVERTISEMENT

ಚಿತ್ರದುರ್ಗ: ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ ಬೇಕು ಕಾಯಕಲ್ಪ

ಸಿಬ್ಬಂದಿ, ವೈದ್ಯರ ಕೊರತೆಯಿಂದ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಆರೋಗ್ಯ ಕೇಂದ್ರಗಳು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 8:25 IST
Last Updated 24 ಮಾರ್ಚ್ 2025, 8:25 IST
ಚಿತ್ರಸುದ್ದಿ;ಧರ್ಮಪುರ ಸಮೀಪದ ಬ್ಯಾಡರಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ
ಚಿತ್ರಸುದ್ದಿ;ಧರ್ಮಪುರ ಸಮೀಪದ ಬ್ಯಾಡರಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ   

ಧರ್ಮಪುರ: ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ದೊರಕಿಸುವ ಉದ್ದೇಶದಿಂದ ಗಡಿ ಪ್ರದೇಶಗಳಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳನ್ನು ಸರ್ಕಾರ ತರೆದಿತ್ತು. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಈ ಚಿಕಿತ್ಸಾಲಯಗಳು ದಿನೇದಿನೇ ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತಿವೆ. 

ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ, ಮ್ಯಾಕ್ಲೂರಹಳ್ಳಿ, ಹಿರಿಯೂರು ಪಟ್ಟಣ, ಬ್ಯಾಡರಹಳ್ಳಿ ಮತ್ತು ಬುರುಡುಕುಂಟೆಯಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಗಳಿವೆ. ಈ ಪೈಕಿ ಹಿರಿಯೂರು ನಗರ ಮತ್ತು ಐಮಂಗಲದ ಚಿಕಿತ್ಸಾಲಯಗಳು ಆಸ್ಪತ್ರೆಗಳಾಗಿ ಪರಿವರ್ತಿತಗೊಂಡಿವೆ. ಉಳಿದವು ಚಿಕಿತ್ಸಾಲಯಗಳಾಗಿ ಉಳಿದಿದ್ದು, ಅವುಗಳನ್ನೂ ಮೇಲ್ದರ್ಜಗೇರಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ. 

ಧರ್ಮಪುರ ಹೋಬಳಿಯ ಬುರುಡುಕುಂಟೆ ಗಡಿ ಪ್ರದೇಶವಾಗಿದ್ದು, ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ಒಳಪಟ್ಟಿತ್ತು. ಈ ಊರಿಗೆ ಬಸ್ ಸಂಚಾರವೇ ಮರೀಚಿಕೆಯಾಗಿದ್ದ ಸಂದರ್ಭದಲ್ಲಿ ಜವನಗೊಂಡನಹಳ್ಳಿಯಲ್ಲಿದ್ದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು 1995ರಲ್ಲಿ ಇಲ್ಲಿಗೆ ಸ್ಥಳಾಂತರಿಸಲಾಯಿತು. ಅಂದಿನಿಂದ ಅಕ್ಕಪಕ್ಕದ ಗ್ರಾಮಗಳಾದ ಯಳವರಹಟ್ಟಿ, ಸೂಗೂರು, ಸಾಲುಣಿಸೆ, ಬೇತೂರು ಪಾಳ್ಯ, ಬೇತೂರು, ಕಣಜನಹಳ್ಳಿ, ಹೊಸಹಳ್ಳಿ, ತೊರೆಬೀರನಹಳ್ಳಿ ಜನತೆಗೆ ಈ ಚಿಕಿತ್ಸಾಲಯ ಉತ್ತಮ ಸೇವೆ ಒದಗಿಸಿದೆ.

ADVERTISEMENT

ಆದರೆ ಬುರುಡುಕುಂಟೆ ಆಯುರ್ವೇದ ಚಿಕಿತ್ಸಾಲಯದ ವೈದ್ಯ ಡಾ.ಕುಮಾರಸ್ವಾಮಿ ವಾರದಲ್ಲಿ ಮೂರು ದಿನ ಇಲ್ಲಿ ಕಾರ್ಯನಿರ್ವಹಿಸುತ್ತಾರೆ. ಉಳಿದ ಮೂರು ದಿನ ಟಿ.ಎನ್.ಕೋಟೆಗೆ ನಿಯೋಜನೆಗೊಂಡಿದ್ದಾರೆ. ವೈದ್ಯರ ಕೊರತೆ ಮತ್ತು ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ, ಚಿಕಿತ್ಸಾಲಯಗಳಿಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಬುರುಡುಕುಂಟೆ ನಿವಾಸಿ ಗಿರೀಶ್. 

ಬ್ಯಾಡರಹಳ್ಳಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲೂ ಇದೇ ಸಮಸ್ಯೆಯಿದೆ. ಒಬ್ಬ ಗ್ರೂಪ್ ‘ಡಿ’ ನೌಕರ ಮಾತ್ರ ಇಲ್ಲಿ ಕೆಲಸ ಮಾಡುತ್ತಿದ್ದು, ಕಾಯಂ ವೈದ್ಯರು ಇಲ್ಲಿಯೂ ಇಲ್ಲ. ಹಿರಿಯೂರು ನಗರದ ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ.ಶಿವಕುಮಾರ್ ವಾರಕ್ಕೆ ಎರಡು ದಿನ ಇಲ್ಲಿಗೆ ಬಂದು ಹೋಗುತ್ತಾರೆ. ಉಳಿದ ದಿನಗಳಂದು ಈ ಭಾಗದ ಹಳ್ಳಿಗಳಾದ ಬ್ಯಾಡರಹಳ್ಳಿ, ಐನಹಳ್ಳಿ, ತೊರೆಓಬೇನಹಳ್ಳಿ, ದೇವರಕೊಟ್ಟ, ಕೂಡ್ಲಹಳ್ಳಿ, ಮಸ್ಕಲ್ ಮಟ್ಟಿ ಮೊದಲಾದ ಗ್ರಾಮದ ನಾಗರಿಕರು ದೂರದ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗಿದೆ. 

ನಡೆಯದ ವರ್ಗಾವಣೆ: ಕಳೆದ ಎರಡು ವರ್ಷಗಳಿಂದ ಆಯುಷ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯದ ಕಾರಣ, ಕೆಲವು ಆಯುರ್ವೇದ ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ ಇದೆ. ಗ್ರೂಪ್ ‘ಡಿ’ ನೌಕರರು ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಕೆಲವು ಚಿಕಿತ್ಸಾಲಯಗಳಲ್ಲಿ ವೈದ್ಯರು ಮತ್ತು ಗ್ರೂಪ್ ‘ಡಿ’ ನೌಕರ ಇಬ್ಬರೂ ಇದ್ದರೆ, ಇನ್ನೂ ಕೆಲವು ಕಡೆ ಬರೀ ಗ್ರೂಪ್ ‘ಡಿ’ ನೌಕರ ಮಾತ್ರ ಇದ್ದಾರೆ. 

ಮೇಲ್ದರ್ಜೆಗೇರಿಸಿ’: ಆಯುರ್ವೇದ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸಿ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಬೇಕು. ಆಗ ಮಾತ್ರ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳು ಉಳಿಯಲು ಸಾಧ್ಯ. ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಆರೋಗ್ಯ ಸೇವೆ ಸಿಗಲು ಸಾಧ್ಯ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮೇಲ್ದರ್ಜೆಗೇರಿಸಲು ಕ್ರಮ: ಹಿರಿಯೂರು ತಾಲ್ಲೂಕಿನಲ್ಲಿ ಮೂರು ಆಯುರ್ವೇದ ಚಿಕಿತ್ಸಾಲಯಗಳು ಮತ್ತು ಎರಡು ಆಯುರ್ವೇದ ಆಸ್ಪತ್ರೆಗಳಿವೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಚಿಕಿತ್ಸಾಲಯಗಳಲ್ಲಿ ಔಷಧಿ ಕೊರತೆ ಇಲ್ಲ. ಬುರುಡುಕುಂಟೆ ಬ್ಯಾಡರಹಳ್ಳಿ ಮತ್ತು ಮ್ಯಾಕ್ಲೂರಹಳ್ಳಿ ಚಿಕಿತ್ಸಾಲಯಗಳನ್ನು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಇಲಾಖೆಯ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.